ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗಾಗಿ ಪ್ರತಿಭಟನೆ

Last Updated 4 ಜನವರಿ 2012, 19:30 IST
ಅಕ್ಷರ ಗಾತ್ರ

ಹೊಸಕೋಟೆ: ತಾಲ್ಲೂಕು ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ತಾಲ್ಲೂಕಿನ ಶಾಶ್ವತ ನೀರಾವರಿ ಹೋರಾಟ ಸಮಿತಿ ಆಶ್ರಯದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಪ್ರವಾಸಿ ಮಂದಿರದಿಂದ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ತಾಲ್ಲೂಕು ಕಚೇರಿ ಆವರಣದಲ್ಲಿ ಧರಣಿ ನಡೆಸಿದರು.

`ತಾಲ್ಲೂಕಿನಲ್ಲಿ ಸಮರ್ಪಕ ಮಳೆ ಇಲ್ಲದೆ ಕೆರೆ ಕುಂಟೆಗಳು ಬತ್ತಿವೆ. ಅಂತರ್ಜಲ 1200 ಅಡಿಗೂ ಹೆಚ್ಚು ಕುಸಿದಿದ್ದು ರೈತರಿಗಷ್ಟೆ ಅಲ್ಲದೆ ಕುಡಿಯುವ ನೀರಿಗೂ ಹಾಹಾಕಾರ ತಲೆದೋರಿದೆ. ತಾಲ್ಲೂಕಿಗೆ ಯಾವುದೇ ಶಾಶ್ವತ ನೀರಾವರಿ ಯೋಜನೆಗಳು ಇಲ್ಲದೆ ಇರುವುದರಿಂದ ಸಮಸ್ಯೆ ಮತ್ತುಷ್ಟು ಬಿಗಡಾಯಿಸಿದೆ. ಅದನ್ನು ಬಗೆಹರಿಸುವಲ್ಲಿ ಡಾ.ಪರಮಶಿವಯ್ಯ ವರದಿಯನ್ನು ಜಾರಿಗೊಳಿಸಬೇಕು~ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
 ನಂತರ ಮನವಿ ಪತ್ರವನ್ನು ಸಚಿವ ಬಿ.ಎನ್.ಬಚ್ಚೇಗೌಡ ಅವರಿಗೆ ಸಲ್ಲಿಸಿದರು.

ಹೋರಾಟ ಸಮಿತಿ ಗೌರವ ಅಧ್ಯಕ್ಷ ಮಾಜಿ ಶಾಸಕ ಸೂ.ರಂ.ರಾಮಯ್ಯ, ಪ್ರಧಾನ ಕಾರ್ಯದರ್ಶಿ ಎಂ.ಕೆಂಚೇಗೌಡ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ವಿವಿಧ ಸಂಘಟನೆಗಳ ಮುಖಂಡರಾದ ಕುಮಾರ್, ನಾರಾಯಣಸ್ವಾಮಿ, ವಿಜಯಕುಮಾರ್, ತ್ರಿಮೂರ್ತಿ ನಾಗರಾಜ್, ಆಂಜಿನಪ್ಪ, ಕಲ್ಲಪ್ಪ, ಎಂ.ಶ್ರೆನಿವಾಸಯ್ಯ ಮತ್ತಿತರರು ಮಾತನಾಡಿದರು.

ಪರಿಶೀಲನಾ ಸಭೆ: ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಸಚಿವ ಬಿ.ಎನ್.ಬಚ್ಚೇಗೌಡ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ತಾಲ್ಲೂಕಿನಲ್ಲಿ ಶೇ.80 ರಷ್ಟು ಪ್ರಗತಿ ಸಾಧಿಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆ ಅಡಿ 9 ಕೋಟಿ ರೂಪಾಯಿ ಗುರಿ ಇದ್ದು 5 ಕೋಟಿ ರೂ ಖರ್ಚು ಮಾಡಲಾಗಿದೆ.22 ಸಾವಿರ ಫಲಾನುಭವಿಗಳು ಇದರ ಪ್ರಯೋಜ ಪಡೆದಿದ್ದಾರೆ ಎಂದು ಹೇಳಿದರು.

ಕುಡಿಯುವ ನೀರಿಗಾಗಿ 85 ಕೊಳವೆ ಬಾವಿಗಳನ್ನು ಕೊರೆದಿದ್ದು 59 ಕೊಳವೆ ಬಾವಿಗಳಲ್ಲಿ ನೀರು ಸಿಕ್ಕಿದೆ. ನೀರಿನ ಅಭಾವ ತಲೆದೋರಿರುವ 53 ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಸಮಸ್ಯೆ ಬಗೆ ಹರಿಸಲು ಎಲ್ಲಾ ರೀತಿಯಲ್ಲಿ ಸಜ್ಜಾಗುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT