ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಬಳಕೆ ಮೇಲೆ ನಿಗಾ: ಎಲ್ಲೆಡೆ ‘ಸ್ಕಾಡಾ’

Last Updated 1 ನವೆಂಬರ್ 2013, 19:50 IST
ಅಕ್ಷರ ಗಾತ್ರ

ಬೆಂಗಳೂರು:ನೀರಿನ ಸಮರ್ಪಕ ಬಳಕೆ­ಯನ್ನು ಖಾತರಿಪಡಿಸುವ ಉದ್ದೇಶದಿಂದ ‘ನೀರಿನ ಹರಿವಿನ ಮೇಲೆ ನಿಗಾ ನಿಯಂ­ತ್ರಣ ಮತ್ತು ಅಂಕಿಅಂಶ ಸಂಗ್ರಹ’ (ಸೂಪರ್‌ವೈಸರಿ ಕಂಟ್ರೋಲ್‌ ಅಂಡ್‌ ಡಾಟಾ ಅಕ್ವಿಸಿಷನ್‌–ಸ್ಕಾಡಾ) ಮಾದರಿ­ಯನ್ನು ರಾಜ್ಯದ ಎಲ್ಲ ಅಣೆಕಟ್ಟು ಹಾಗೂ ಕಾಲುವೆಗಳಿಗೂ ವಿಸ್ತರಿಸಲು ಜಲ ಸಂಪನ್ಮೂಲ ಇಲಾಖೆ ನಿರ್ಧರಿಸಿದೆ.

ಕರ್ನಾಟಕ ನೀರಾವರಿ ನಿಗಮ, ಘಟಪ್ರಭಾ ಎಡದಂಡೆ ಕಾಲುವೆಯಲ್ಲಿ ಸ್ಕಾಡಾ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿತ್ತು. ಈಗ ಇದನ್ನು ನಾರಾಯಣಪುರ ಎಡದಂಡೆ ಕಾಲುವೆ, ತುಂಗಾ ಮೇಲ್ದಂಡೆ, ಭದ್ರಾ,  ಸಿಂಗಟಾಲೂರು ಏತ ನೀರಾವರಿ ಯೋಜನೆಗಳಿಗೂ ವಿಸ್ತರಿಸಲಾಗು ತ್ತಿದೆ.

‘ಐದು ಯೋಜನೆಗಳಲ್ಲಿ ಸ್ಕಾಡಾ ಮಾದರಿ ಬಳಸುವುದ ರಿಂದ 6 ಲಕ್ಷ ಹೆಕ್ಟೇರ್‌ ಕೃಷಿ ಜಮೀನಿನಲ್ಲಿ ನೀರಿನ ಸಮರ್ಪಕ ಬಳಕೆ ಸಾಧ್ಯವಾಗಲಿದೆ. ಇದೇ ಮಾದರಿಯನ್ನು ಕಾವೇರಿ ಜಲಾ ನಯನ ಪ್ರದೇಶದ ಕಬಿನಿ ಜಲಾಶಯದ ವ್ಯಾಪ್ತಿಯಲ್ಲೂ ಅಳ ವಡಿಸುವ ಯೋಚನೆ ಇದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ನೀರಿನ ಬಳಕೆ ಮೇಲೆ ನಿಗಾ ಇಡಲು ಕಾಲುವೆಗಳಿಗೆ ಟೆಲಿಮೆಟ್ರಿಕ್‌ ಸಾಧನವನ್ನು ಅಳವಡಿಸಲಾಗುತ್ತದೆ. ಇದರ ಮೂಲಕ ನೀರಿನ ಹರಿವು ಹಾಗೂ ಬಳಕೆಯನ್ನು ತಿಳಿಯ ಬಹುದು. ಟೆಲಿಮೆಟ್ರಿಕ್‌ ಸಾಧನವು ಕಾಲುವೆಯಲ್ಲಿನ ನೀರಿನ ಹರಿವು ಮತ್ತು ಬಳಕೆಯ ಪ್ರಮಾಣದ ಕುರಿತು ನೋಡಲ್‌ ಕೇಂದ್ರಕ್ಕೆ ನಿರಂತರವಾಗಿ ಸಂದೇಶ ರವಾನಿಸುತ್ತಿರು ತ್ತದೆ. ಇದರಿಂದಾಗಿ ನೀರಿನ ಸಮರ್ಪಕ ಬಳಕೆಯ ಮೇಲೆ ನಿಗಾ ಇರಿಸಲು ಸಾಧ್ಯವಾಗುತ್ತದೆ.

ಘಟಪ್ರಭಾ ಜಲಾಶಯದ ಜೊತೆಯಲ್ಲೇ ದೂಪಧಾಳ್‌ ಹಾಗೂ ಹಿಡಕಲ್‌ ಅಣೆಕಟ್ಟುಗಳಲ್ಲಿ ನೀರಿನ ಹೊರಹರಿವಿನ ಪ್ರಮಾಣ ತಿಳಿಯಲು ಸ್ಕಾಡಾ ಮಾದರಿ ಅಳವಡಿಸಲಾಗಿದೆ.  ಜೊತೆಗೆ ಕಾಲುವೆಗಳಲ್ಲಿ ನೀರಿನ ಹರಿವಿನ ಬಗ್ಗೆ ನಿಗಾ ವಹಿಸಲು 50 ಟೆಲಿ ಮೆಟ್ರಿಕ್‌ ಸಾಧನಗಳನ್ನು ಅಳವಡಿಸಲಾಗಿದೆ.

1.61 ಲಕ್ಷ ಹೆಕ್ಟೇರ್‌ ಜಮೀನಿಗೆ ನೀರಾವರಿ ಸೌಲಭ್ಯ ಒದ ಗಿ­ಸುತ್ತಿ­ರುವ ಘಟಪ್ರಭಾ ಎಡದಂಡೆ ಕಾಲುವೆಯಲ್ಲಿ ಸ್ಕಾಡಾ ಮಾದರಿ ಅಳವಡಿಸಲಾಗಿದೆ. ಇಲಾಖೆ ವರದಿಗಳ ಪ್ರಕಾರ ವರ್ಷದಿಂದ ವರ್ಷಕ್ಕೆ ನೀರಿನ ಬಳಕೆಯಲ್ಲಿ 376 ಕ್ಯೂಸೆಕ್‌ನಷ್ಟು ಮಿಗತೆ ಕಾಣಿಸಿಕೊಂಡಿದೆ.

‘ಸಮಗ್ರ ಜಲ ಸಂಪನ್ಮೂಲ ನಿರ್ವಹಣಾ ಯೋಜನೆಗೆ ಅಗತ್ಯ ಇರುವ ₨800 ಕೋಟಿಯನ್ನು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನಿಂದ ಸಾಲ ಪಡೆಯಲಾಗುವುದು ಎಂದು ಕರ್ನಾಟಕ ನೀರಾವರಿ ನಿಗಮದ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಎಂ.ಜಿ. ಶಿವ ಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT