ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ನಿಲುವು ಸ್ಪಷ್ಟವಾಗಲಿ: ಎಚ್‌ಡಿಕೆ

Last Updated 10 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಬಿಜೆಪಿ ತೊರೆದು ಹೊಸ ಪಕ್ಷ ಕಟ್ಟುವ ಅಥವಾ ಬೇರೆ ಪಕ್ಷ ಸೇರುವ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸ್ಪಷ್ಟ ನಿಲುವು ತಳೆಯಬೇಕು. ಹಾಗೆ ಮಾಡುವುದು ಸಾಧ್ಯವಾಗದಿದ್ದರೆ ಮೌನವಾಗಿರಬೇಕು~ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಹಜ್ ಯಾತ್ರಿಗಳಿಗೆ ಇಲ್ಲಿನ ಅರಮನೆ ಮೈದಾನದಲ್ಲಿ ಬುಧವಾರ ಶುಭ ಕೋರಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, `ಕಾವೇರಿ ವಿವಾದದ ಹಿನ್ನೆಲೆಯಲ್ಲಿ ಸರ್ಕಾರ ಈಗಾಗಲೇ ಗೊಂದಲದಲ್ಲಿದೆ. ಯಡಿಯೂರಪ್ಪ ಅವರು ಪಕ್ಷ ತೊರೆಯುವ ಕುರಿತು ದಿನಕ್ಕೊಂದು ಮಾತು ಆಡಿ, ಬಿಜೆಪಿ ಸರ್ಕಾರವನ್ನು ಇನ್ನಷ್ಟು ಗೊಂದಲಕ್ಕೆ ತಳ್ಳುತ್ತಿದ್ದಾರೆ. ಜನರ ಬಗ್ಗೆ ಅವರಿಗೆ ನೈಜ ಪ್ರೀತಿ ಇದ್ದರೆ, ದಿನಕ್ಕೊಂದು ಹೇಳಿಕೆ ನೀಡುವುದನ್ನು ಬಿಡಬೇಕು~ ಎಂದು ಒತ್ತಾಯಿಸಿದರು.

`ಕಾವೇರಿ ನೀರು ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ ಪಕ್ಷದ ಶಾಸಕರು ನೀಡಿರುವ ರಾಜೀನಾಮೆ ಪತ್ರಗಳನ್ನು ಅಂಗೀಕಾರಕ್ಕಾಗಿ ಸಂಬಂಧಪಟ್ಟವರಿಗೆ (ಸ್ಪೀಕರ್‌ಗೆ) ಸಲ್ಲಿಸುವ ಕುರಿತು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸುಪ್ರೀಂ   ಕೋರ್ಟ್ ತೀರ್ಪು ಬರುವವರೆಗೆ ಕಾಯುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ.ದೇವೇಗೌಡ ಅವರು ಸೂಚಿಸಿದ್ದಾರೆ. ತೀರ್ಪು ಬಂದ ನಂತರ ಪಕ್ಷದ ನಿಲುವು ಪ್ರಕಟಿಸಲಾಗುವುದು~ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

`ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು~ ಎಂದು ಅವರು ಭರವಸೆ ನೀಡಿದರು. ಸಂಸದ ಎನ್. ಚೆಲುವರಾಯಸ್ವಾಮಿ, ಶಾಸಕ ಬಿ.ಝೆಡ್. ಜಮೀರ್ ಅಹಮದ್ ಖಾನ್, ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ, ಧಾರ್ಮಿಕ ಗುರು ಮುಫ್ತಿ ಅಶ್ರಫ್ ಅಲಿ ಸಾಬ್ ಮತ್ತಿತರರು ಹಾಜರಿದ್ದರು.

`ಬಿಜೆಪಿಯಲ್ಲಿ ಇರಲಾರೆ~

ಬೆಂಗಳೂರು: `ಯಾವುದೇ ಕಾರಣಕ್ಕೂ ನಾನು ಬಿಜೆಪಿಯಲ್ಲಿ ಉಳಿಯುವುದಿಲ್ಲ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಸುವರ್ಣಸೌಧದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ತೆರಳುವ ಮುನ್ನ ಬುಧವಾರ `ಪ್ರಜಾವಾಣಿ~ ಜೊತೆ ಮಾತನಾಡಿದ ಅವರು, `ಜಗದೀಶ ಶೆಟ್ಟರ್ ನೇತೃತ್ವದ ಸರ್ಕಾರವನ್ನು ಯಾವುದೇ ಕಾರಣಕ್ಕೂ ಉರುಳಿಸುವುದಿಲ್ಲ. ನಾನು ಪಕ್ಷ ತೊರೆಯುವ ವಿಚಾರವನ್ನು ಬಿಜೆಪಿಯ ವರಿಷ್ಠರ ಜೊತೆ ಯಾರೂ ಚರ್ಚಿಸುವ ಅಗತ್ಯವಿಲ್ಲ~ ಎಂದು ಹೇಳಿದರು.

`ಪ್ರಾದೇಶಿಕ ಪಕ್ಷ ಸ್ಥಾಪಿಸುವುದೋ ಅಥವಾ ಬೇರೊಂದು ಪಕ್ಷದ ಜೊತೆ ಕೈಜೋಡಿಸುವುದೋ ಎಂಬ ಕುರಿತು ಡಿಸೆಂಬರ್‌ನಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ. ಜನವರಿ ವೇಳೆಗೆ ಎಲ್ಲವೂ ಸ್ಪಷ್ಟವಾಗುತ್ತದೆ. ಏಪ್ರಿಲ್ ವೇಳೆಗೆ ವಿಧಾನಸಭೆಗೆ ಎದುರಾಗುವ ಚುನಾವಣೆಯನ್ನು ಬಿಜೆಪಿಯಿಂದ ಹೊರಬಂದು ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತೇನೆ~ ಎಂದು ವಿವರಿಸಿದರು.

`ಬಿಜೆಪಿಯಿಂದ ನಾನೊಬ್ಬನೇ ಹೊರಬರುತ್ತಿದ್ದೇನೆ. ನನ್ನ ಜೊತೆ ಬರುವ ಇಚ್ಛೆ ಇರುವ ಪಕ್ಷದ ಮುಖಂಡರು ಏಪ್ರಿಲ್ ಅಥವಾ ಚುನಾವಣೆಗೆ ಮುನ್ನ ಕೈಜೋಡಿಸಬಹುದು. ಅಕ್ರಮ ಗಣಿಗಾರಿಕೆ ಸಂಬಂಧ ಲೋಕಾಯುಕ್ತ ಸಲ್ಲಿಸಿದ ವರದಿಯಲ್ಲಿ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಹೇಳಿರಲಿಲ್ಲ. ಆದರೂ ನನ್ನನ್ನು ಅವಮಾನಕರ ರೀತಿಯಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಯಿತು. ಇಷ್ಟಾದಮೇಲೆ ಬಿಜೆಪಿಯಲ್ಲೇ ಇರಲು ಕಾರಣಗಳು ಇಲ್ಲ~ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT