ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಂದೂರು ಕೆರೆಗೆ ನಾಗರಿಕರು ಕಂಟಕವಾಗಬಾರದು: ಎನ್‌ಜಿಟಿ

Last Updated 4 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಕಡು ಮಾಲಿನ್ಯಕ್ಕೆ ತುತ್ತಾಗಿರುವ ಬೆಂಗಳೂರಿನ ಬೆಳ್ಳಂದೂರು ಕೆರೆಯ ಶುದ್ಧೀಕರಣವನ್ನು ಕೇವಲ ಸರ್ಕಾರದ ಜವಾಬ್ದಾರಿ ಎಂದು ತಿಳಿಯದೆ ನಾಗರಿಕರೂ ತಮ್ಮ ಪಾತ್ರ ವಹಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹೇಳಿದೆ.

ಸುತ್ತಮುತ್ತಲ ನಿವಾಸಿಗಳು ಬೆಳ್ಳಂದೂರು ಕೆರೆಯ ಪಾಲಿಗೆ ಪರಿಹಾರವಾಗಬೇಕೇ ವಿನಾ ಸಮಸ್ಯೆಯಾಗಿ ಪರಿಣಮಿಸಕೂಡದು ಎಂದು ನ್ಯಾಯ
ಮಂಡಳಿ ಬುಧವಾರ ತಾಕೀತು ಮಾಡಿತು.

ಬೆಳ್ಳಂದೂರು ಕೆರೆ ಮಾಲಿನ್ಯದ ವಿಷಯ ಕುರಿತು ಬುಧವಾರ ವಿಚಾರಣೆ ಮುಂದುವರೆಸಿದ ನ್ಯಾಯಾಧೀ ಕರಣ, ಕೆರೆಗೆ ಕೊಳಚೆ ನೀರನ್ನು ಬಿಡಲು ನಾಗರಿಕರಿಗೆ ಯಾವುದೇ ಕಾರಣದಿಂದ ಅವಕಾಶ ನೀಡುವುದಿಲ್ಲ ಎಂದು ಖಡಾ ಖಂಡಿತವಾಗಿ ಸಾರಿತು.

ಬೆಳ್ಳಂದೂರು ಕೆರೆ ಸುತ್ತಮುತ್ತಲಿನ ಎಲ್ಲ ಅಪಾರ್ಟ್‌ಮೆಂಟ್‌ಗಳು ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು ಕಡ್ಡಾಯವಾಗಿ ಸ್ಥಾಪಿಸಬೇಕೆಂಬ ಆದೇಶದಿಂದ ತಮಗೆ ವಿನಾಯಿತಿ ನೀಡಬೇಕೆಂದು ಹಳೆಯ ಅಪಾರ್ಟ್ ಮೆಂಟ್ ಗಳ ಪರವಾಗಿ ಬೆಂಗಳೂರು ಅಪಾರ್ಟ್ ಮೆಂಟ್ ಒಕ್ಕೂಟ ಮಂಡಿಸಿದ ಅಹವಾಲನ್ನು ನ್ಯಾಯಾಧೀಕರಣ ಅಂಗೀಕರಿಸಲಿಲ್ಲ.  ಇಂತಹುದೊಂದು ಆದೇಶವನ್ನು ನ್ಯಾಯಾಧೀಕರಣ ಕಳೆದ ಏಪ್ರಿಲ್ ತಿಂಗಳಿನಲ್ಲೇ ನೀಡಿತ್ತು.

ಒಳಚರಂಡಿ ವ್ಯವಸ್ಥೆಯನ್ನು ಸೇರುವ ಹಳೆಯ ಅಪಾರ್ಟ್ ಮೆಂಟ್‌ಗಳ ಕೊಳಚೆ ನೀರನ್ನು ಸಂಸ್ಕರಿಸುವ ಹೊಣೆಗಾರಿಕೆ ಕೊಳಚೆ ನಿರ್ಮೂಲನ ಮಂಡಳಿಯದು. ಈ ಉದ್ದೇಶಕ್ಕಾಗಿ ಮಂಡಳಿಗೆ ಶುಲ್ಕ ತೆರಲಾಗಿದೆ.  ಮೇಲಾಗಿ ನಿತ್ಯ ಬೆಳ್ಳಂದೂರು ಕೆರೆಯನ್ನು ಸೇರುವ 418 ದಶಲಕ್ಷ ಲೀಟರ್‌ಗಳಷ್ಟು ಕೊಳಚೆ ನೀರಿನಲ್ಲಿ ಅಪಾರ್ಟ್‌ಮೆಂಟ್‌ಗಳ ಪಾಲು ಕೇವಲ ಶೇ ಮೂರಷ್ಟು. ಕೊಳಚೆ ನಿರ್ಮೂಲನ ಮಂಡಳಿಗೆ ಈಗಾಗಲೇ ಶುಲ್ಕ ತೆರುತ್ತಿರುವ ಹಳೆಯ ಅಪಾರ್ಟ್‌ಮೆಂಟ್‌ಗಳಿಗೆ ಕಡ್ಡಾಯ ಸಂಸ್ಕರಣ ಘಟಕ ಸ್ಥಾಪನೆ ಆದೇಶದಿಂದ ವಿನಾಯಿತಿ ನೀಡಬೇಕು ಎಂಬುದು ಬೆಂಗಳೂರು ಅಪಾರ್ಟ್ ಮೆಂಟ್ ಒಕ್ಕೂಟದ ಮನವಿಯಾಗಿತ್ತು.

ಹಳೆಯ ಅಪಾರ್ಟ್‌ಮೆಂಟ್ ಗಳ ಸಮಸ್ಯೆಯ ಪರಿಹಾರಕ್ಕಾಗಿ ಸಂಧಾನದ ಕಿಟಕಿಯೊಂದನ್ನು ಉಳಿಸಿದ ನ್ಯಾಯಾಧೀಕರಣ, ಸಂಬಂಧಪಟ್ಟ ಅಧಿ
ಕಾರಿಗಳೊಂದಿಗೆ ಚರ್ಚಿಸುವಂತೆ ಸೂಚಿಸಿತು. ಆದರೆ ಕೊಳಚೆ ನೀರನ್ನು ಯಾವುದೇ ರೂಪದಲ್ಲೂ ಕೆರೆಗೆ ಹರಿಸಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿ
ಸಿತು. ಈ ಕೆರೆಯ ಮಾಲಿನ್ಯ ನಿಯಂತ್ರಣ ಮತ್ತು ಶುದ್ಧೀಕರಣ ಕುರಿತು ರಾಜ್ಯ ಸರ್ಕಾರ ಸಲ್ಲಿಸಿರುವ ವರದಿಗೆ ಪ್ರತಿಕ್ರಿಯೆ ಸಲ್ಲಿಸಲು ಪ್ರತಿವಾದಿಗಳಾದ ಕುಪೇಂದ್ರರೆಡ್ಡಿ ಮತ್ತು ನಮ್ಮ ಬೆಂಗಳೂರು ಪ್ರತಿಷ್ಠಾನಕ್ಕೆಒಂದು ವಾರದ ಅವಧಿಯ ಅಂತಿಮ ಗಡುವನ್ನು ನ್ಯಾಯಾಧೀಕರಣ ವಿಧಿಸಿತು. ಹೆಚ್ಚುವರಿ ದಾಖಲೆಗಳ ಸಲ್ಲಿಕೆಗೆ ಒಂದು ವಾರದ ನಂತರ ನಾಲ್ಕು ದಿನಗಳ ಹೆಚ್ಚುವರಿ ಕಾಲಾವಕಾಶವನ್ನೂ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT