ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಕಳ್ಳ ಸಾಗಣೆಗೆ ವಿರೋಧ

Last Updated 2 ಡಿಸೆಂಬರ್ 2012, 20:54 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಲ್ಲಿ ಹೆಚ್ಚುತ್ತಿರುವ ಮಾನವ ಕಳ್ಳ ಸಾಗಣೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ `ಮಾನವ ಕಳ್ಳ ಸಾಗಣೆ ವಿರೋಧಿ ಸಂಘಟನೆ'ಯು ನಗರದ ಟಿನಿಟಿ ವೃತ್ತದಿಂದ ಕಬ್ಬನ್ ಉದ್ಯಾನದವರೆಗೆ ಭಾನುವಾರ ಜಾಗೃತಿ ಜಾಥಾ ಆಯೋಜಿಸಿತ್ತು.

ಜಾಥಾದಲ್ಲಿ ಹಲವು ಸಂಘ - ಸಂಸ್ಥೆಗಳ ಸಾಕಷ್ಟು ಜನ ಸದಸ್ಯರು ಭಾಗವಹಿಸಿದ್ದರು. ಟ್ರಿನಿಟಿ ವೃತ್ತದಿಂದ ಆರಂಭವಾದ ಜಾಥಾ ಮಹಾತ್ಮ ಗಾಂಧಿ ರಸ್ತೆ, ಕೆ.ಕಾಮರಾಜ ರಸ್ತೆ, ಕಬ್ಬನ್ ರಸ್ತೆಗಳ ಮೂಲಕ ಕಬ್ಬನ್ ಉದ್ಯಾನದವರೆಗೆ ಸಾಗಿತು.

ಜಾಥಾದಲ್ಲಿ ಪಾಲ್ಗೊಂಡಿದ್ದ ಯುನೈಟೆಡ್ ಥಿಯೊಲಾಜಿಕಲ್ ಕಾಲೇಜಿನ ಮಹಿಳಾ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಇವ್ಯಾಂಜೆಲಿನ್ ಆ್ಯಂಡರ್‌ಸನ್ ರಾಜ್‌ಕುಮಾರ್, `ದೇಶದಲ್ಲಿ ದಿನದಿಂದ ದಿನಕ್ಕೆ ಮಾನವ ಕಳ್ಳ ಸಾಗಣೆ ಹೆಚ್ಚಾಗುತ್ತಿದೆ. ಮಕ್ಕಳು ಹಾಗೂ ಯುವತಿಯರನ್ನು ಅಪಹರಿಸಿ ಬೇರೆ ದೇಶಗಳಿಗೆ ಮಾರಾಟ ಮಾಡುವ ಜಾಲ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ. 2005ರಲ್ಲಿ ದೇಶದಲ್ಲಿ 1.23 ಕೋಟಿ ಜನರು ನಾಪತ್ತೆಯಾಗಿದ್ದರೆ, 2012ರ ವೇಳೆಗೆ 2.7 ಕೋಟಿ ಜನರು ನಾಪತ್ತೆಯಾಗಿದ್ದಾರೆ. ಇದನ್ನು ಗಮನಿಸಿದರೆ ಮಾನವ ಕಳ್ಳ ಸಾಗಣೆ ಪ್ರಮಾಣ ಹೆಚ್ಚಾಗುತ್ತಿರುವುದು ತಿಳಿಯುತ್ತದೆ' ಎಂದರು.

`ಬಡತನ ಮತ್ತು ವಲಸೆಯ ಸಂದರ್ಭಗಳಲ್ಲಿ ಮಕ್ಕಳು ಮತ್ತು ಮಹಿಳೆಯರ ಮಾರಾಟ ನಡೆಯುತ್ತದೆ. ಇದಲ್ಲದೇ ಮಕ್ಕಳು ಮತ್ತು ಮಹಿಳೆಯರನ್ನು ಅಪಹರಿಸುವ ದುಷ್ಕರ್ಮಿಗಳು ಅವರನ್ನು ದೇಶದ ಮಹಾನಗರಗಳು ಹಾಗೂ ವಿದೇಶಗಳ ದಲ್ಲಾಳಿಗಳಿಗೆ ಮಾರಾಟ ಮಾಡುತ್ತಾರೆ. ಅಲ್ಲಿ ಅವರನ್ನು ವೇಶ್ಯಾವಾಟಿಕೆ, ಕಠಿಣ ಕೆಲಸ ಹಾಗೂ ಮನೆ ಕೆಲಸಗಳಿಗೆ ಜೀತದಾಳುಗಳಾಗಿ ದುಡಿಸಿಕೊಳ್ಳಲಾಗುತ್ತದೆ' ಎಂದರು.

`ಮಾನವ ಕಳ್ಳ ಸಾಗಣೆ ತಪ್ಪಿಸಲು ಜನರಲ್ಲಿ ಜಾಗೃತಿ ಮೂಡಬೇಕು. ಈ ಉದ್ದೇಶದಿಂದ ಜಾಗೃತಿ ಜಾಥಾ ಆಯೋಜಿಸಲಾಗಿದೆ. ಜಾಥಾ ಸಾಗಿದ ಮಾರ್ಗದಲ್ಲಿ ಜನರಿಗೆ ಕರಪತ್ರ ವಿತರಿಸಿ ಮಾಹಿತಿ ನೀಡಲಾಯಿತು. ಮಾನವ ಕಳ್ಳ ಸಾಗಣೆ ಜಾಲದ ಬಗ್ಗೆ ಸುಳಿವು ಸಿಕ್ಕಲ್ಲಿ, ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಲಾಯಿತು' ಎಂದು  ಅವರು ಹೇಳಿದರು.

`ಜಾಥಾದಲ್ಲಿ ಸುಮಾರು ಐದು ಸಾವಿರ ಜನರ ಸಹಿಗಳನ್ನು ಸಂಗ್ರಹಿಸಲಾಗಿದ್ದು, ಹತ್ತು ಸಾವಿರ ಸಹಿ ಸಂಗ್ರಹದ ನಂತರ ಮನವಿ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುವುದು' ಎಂದು ಸಂಘಟನೆಯ ಸದಸ್ಯರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT