ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃತದೇಹವನ್ನು ತೋಟದಲ್ಲಿ ಹೂತಿದ್ದ ಹಂತಕ

ಠಾಣೆಯಿಂದ ಓಡಿ ಹೋಗಿ ಮತ್ತೆ ಸಿಕ್ಕಿ ಬಿದ್ದ ಆರೋಪಿ!
Last Updated 30 ಜುಲೈ 2016, 19:32 IST
ಅಕ್ಷರ ಗಾತ್ರ

ಬೆಂಗಳೂರು: ಹುಡುಗಿ  ವಿಚಾರಕ್ಕೆ ಯುವಕನೊಬ್ಬನನ್ನು ಹತ್ಯೆಗೈದು, ಮಾಗಡಿ ತಾಲ್ಲೂಕು ಅತ್ತಿಂಗೆರೆ ಗ್ರಾಮದಲ್ಲಿರುವ ತನ್ನ ತೋಟದ ಮನೆ ಬಳಿ ಶವವನ್ನು ಹೂತಿದ್ದ ಪ್ರತಾಪ್‌ (27) ಎಂಬಾತ ಜಯನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಮೂಲತಃ ಚನ್ನಪಟ್ಟಣ ತಾಲ್ಲೂಕು ಕೋಲೂರು ಗ್ರಾಮದ ಯೋಗೇಶ್ (26) ಕೊಲೆಯಾದವರು. ಬಂಧಿತ ಪ್ರತಾಪ್,  ರಾಜ್ಯ ಗೋರಕ್ಷಣಾ ಸಮಿತಿ ಅಧ್ಯಕ್ಷ ಶಿವಕುಮಾರ್ ಅವರ ಪುತ್ರ ಎಂದು ಪೊಲೀಸರು ಹೇಳಿದ್ದಾರೆ.

ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಯೋಗೇಶ್, ಜಯನಗರ 6ನೇ ಬ್ಲಾಕ್‌ನಲ್ಲಿರುವ ಅಕ್ಕನ ಮನೆಯಲ್ಲಿ ನೆಲೆಸಿದ್ದರು. ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದ ಅವರು, ಜುಲೈ 19ರಿಂದ ನಾಪತ್ತೆಯಾಗಿದ್ದರು. ಎರಡು ದಿನಗಳಾದರೂ ಸೋದರ ಮನೆಗೆ ಬಾರದಿದ್ದಾಗ, ಅವರ ಅಕ್ಕ ಜುಲೈ 21ರಂದು ಜಯನಗರ ಠಾಣೆಗೆ ದೂರು ಕೊಟ್ಟಿದ್ದರು.

‘ಮೊಬೈಲ್ ಕರೆಗಳ ವಿವರ ಪರಿಶೀಲಿಸಿದಾಗ, ಯೋಗೇಶ್ ಅವರು ಮೈಸೂರಿನ ಯುವತಿಯೊಬ್ಬಳ ಜತೆ ನಿರಂತರ ಸಂಪರ್ಕದಲ್ಲಿರುವುದು ಗೊತ್ತಾಯಿತು. ನಂತರ ಆಕೆಯ ಸಿಡಿಆರ್ ಪರಿಶೀಲಿಸಿ ದೆವು. ಆಗ, ಆ ಯುವತಿ ಮತ್ತು ಪ್ರತಾಪ್ ನಡುವೆ ಕರೆಗಳ ವಿನಿಮಯ ಆಗಿರುವ ಸಂಗತಿ ತಿಳಿಯಿತು. ಅನುಮಾನದ ಮೇಲೆ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಿಸಿದಾಗ ಪ್ರಕರಣ ಬಯಲಾಯಿತು’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

ಫೇಸ್‌ಬುಕ್‌ ಪರಿಚಯ: ‘ಯೋಗೇಶ್‌ಗೆ ಫೇಸ್‌ಬುಕ್ ಮೂಲಕ ಆ ಯುವತಿಯ ಪರಿಚಯವಾಗಿತ್ತು. ಪರಸ್ಪರ ಸಂದೇಶಗಳ ವಿನಿಮಯದ ಮೂಲಕ ಇಬ್ಬರೂ ಆಪ್ತರಾಗಿದ್ದರು. ಆದರೆ, ತನ್ನ ಗೆಳತಿ ಇನ್ನೊಬ್ಬನ ಜತೆ ಮಾತನಾಡುತ್ತಿರುವುದು ಪ್ರತಾಪ್‌ಗೆ ಇಷ್ಟವಿರಲಿಲ್ಲ’.

‘ಹಲವು ಸಲ ಎಚ್ಚರಿಕೆ ಕೊಟ್ಟರೂ ತಲೆಕೆಡಿಸಿಕೊಳ್ಳದ ಯೋಗೇಶ್, ಯುವತಿ ಜತೆ ಮಾತುಕತೆ ಮುಂದುವರಿಸಿದ್ದರು. ಇದರಿಂದ ಕೆರಳಿದ ಆತ, ಹತ್ಯೆಗೆ ಸಂಚು ರೂಪಿಸಿದ್ದ. ಕೃತ್ಯಕ್ಕೆ ನೆರವಾಗುವುದಾಗಿ ಸ್ನೇಹಿತರೂ ಭರವಸೆ ಕೊಟ್ಟಿದ್ದರು’.

‘ಜುಲೈ 19ರ ಬೆಳಿಗ್ಗೆ 10ರ ಸುಮಾರಿಗೆ ಯೋಗೇಶ್ ಅವರು ಜಯನಗರ 6ನೇ ಬ್ಲಾಕ್‌ನಲ್ಲಿ ನಡೆದು ಹೋಗುತ್ತಿದ್ದರು. ಈ ವೇಳೆ ನಾಲ್ವರು ಸಹಚರರ ಜತೆ ಕಾರಿನಲ್ಲಿ ಅಲ್ಲಿಗೆ ತೆರಳಿದ್ದ ಪ್ರತಾಪ್, ಅವರನ್ನು ಅಪಹರಿಸಿ ಅತ್ತಿಂಗೆರೆಯಲ್ಲಿರುವ ತನ್ನ ತೋಟದ ಮನೆಗೆ ಕರೆದೊಯ್ದಿದ್ದ’.
‘ಅಲ್ಲಿ ಅವರ ಕೈ–ಕಾಲುಗಳನ್ನು ಕಟ್ಟಿ ಹಾಕಿದ ಆರೋಪಿಗಳು, ಮನಸೋ ಇಚ್ಛೆ ಹಲ್ಲೆ ನಡೆಸಿದ್ದರು. ಈ ವೇಳೆ ಪ್ರತಾಪ್, ಮೂರ್ನಾಲ್ಕು ಬಾರಿ ಮರ್ಮಾಂಗಕ್ಕೆ ಒದ್ದಿದ್ದರಿಂದ ನರಳಾಡಿ ಅವರು ಪ್ರಾಣ ಬಿಟ್ಟಿದ್ದರು. ಕೊನೆಗೆ ಕಬ್ಬಿಣದ ಸಲಾಕೆಯಿಂದ ಒಮ್ಮೆ ತಲೆಗೆ ಹೊಡೆದು, ಮೃತದೇಹವನ್ನು ತೋಟದಲ್ಲೇ ಹೂತು ಹಾಕಿದ್ದರು’.

‘ಸಿಡಿಆರ್ ವಿವರ ಆಧರಿಸಿ ಪ್ರಮುಖ ಆರೋಪಿಯನ್ನು ಪತ್ತೆ ಮಾಡಲಾಗಿದೆ. ಕೃತ್ಯಕ್ಕೆ ಸಹಕರಿಸಿದ ಇತರೆ ನಾಲ್ವರ ಬಗ್ಗೆಯೂ ಮಾಹಿತಿ ಸಿಕ್ಕಿದೆ. ಯೋಗೇಶ್ ಹತ್ಯೆಯಲ್ಲಿ ಯುವತಿಯ ಪಾತ್ರ ಕಂಡು ಬಂದಿಲ್ಲ’ ಎಂದು ಹಿರಿಯ ಅಧಿಕಾರಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಠಾಣೆಯಿಂದ ಓಡಿ ಹೋಗಿದ್ದ!
‘ಯೋಗೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 23ರಂದೇ ಜಯನಗರ ಪೊಲೀಸರು ಪ್ರತಾಪ್‌ನನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದರು.

ಆದರೆ, ಅದೇ ದಿನ ಆತ ಠಾಣೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ’.
ಈ ವಿಷಯ ತಿಳಿದ ನಗರದ  ಇನ್‌ಸ್ಪೆಕ್ಟರ್‌ವೊಬ್ಬರು, ‘ಹೀಗೆ ತಪ್ಪಿಸಿಕೊಂಡು ಓಡಾಡುವುದು ಸರಿಯಲ್ಲ.

ಮಗನನ್ನು ಪೊಲೀಸರ ವಶಕ್ಕೆ ಒಪ್ಪಿಸು’ ಎಂದು ಶಿವಕುಮಾರ್‌ ಅವರಿಗೆ ಬುದ್ಧಿ ಹೇಳಿದ್ದರು. ಅವರ ಮಾತಿನಂತೆ ಜುಲೈ 28ರಂದು ಜಯನಗರ ಠಾಣೆಗೆ ಕರೆ ಮಾಡಿದ್ದ ಶಿವಕುಮಾರ್, ಪೊಲೀಸರನ್ನು ಗ್ರಾಮಕ್ಕೆ ಕರೆಸಿಕೊಂಡು ಮಗನನ್ನು ಅವರ ಜತೆ ಕಳುಹಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿದವು.

* ಶವ ಹೂತಿದ್ದ ಸ್ಥಳವನ್ನು ಆರೋಪಿ ತೋರಿಸಿದ್ದಾನೆ. ರಾಮನಗರ ಉಪವಿಭಾಗಾಧಿಕಾರಿ ಅನುಮತಿ ಪಡೆದು ಮೃತದೇಹವನ್ನು ಸೋಮವಾರ ಹೊರ ತೆಗೆಯಲಾಗುವುದು

– ಹಿರಿಯ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT