ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರ ವಿರುದ್ಧವೂ ವೈಯಕ್ತಿಕ ಹೋರಾಟ ಮಾಡುವುದಿಲ್ಲ- ಡಾ.ಆರ್.ಪಿ. ಶರ್ಮ

Last Updated 8 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

`ಬಿಎಂಟಿಎಫ್ ಬಗ್ಗೆ ಯಾರಿಗೂ ಭಯ ಬೇಡ~

ಬೆಂಗಳೂರು: ಒಂದೆರಡು ತಿಂಗಳಿಂದ ಸದಾ ಸುದ್ದಿಯಲ್ಲಿದ್ದ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ಮುಖ್ಯಸ್ಥ ಡಾ.ರಾಜ್‌ವೀರ್ ಪಿ. ಶರ್ಮ ಅವರಿಗೆ ಈಗ ನಿರಾಳ.

ಬಿಬಿಎಂಪಿ ನೌಕರರ ಪ್ರತಿಭಟನೆಗೆ ಮಣಿದು ದಿಢೀರನೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ರದ್ದುಪಡಿಸಿದೆ. ಇದರಿಂದ 2013ರ ಡಿಸೆಂಬರ್ 31ರವರೆಗೂ ಅವರು ಬಿಎಂಟಿಎಫ್ ಮುಖ್ಯಸ್ಥರ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.

 

ಬಿಎಂಟಿಎಫ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಆರಂಭದ ದಿನಗಳಲ್ಲಿ ಮೌನ ವಹಿಸಿದ್ದ ತಾವು ಇದೀಗ ದಿನಬೆಳಗೆದ್ದರೆ ಸುದ್ದಿಯಲ್ಲಿರುತ್ತೀರಿ? ನಿಮ್ಮ ಕಾರ್ಯ ಶೈಲಿಯಲ್ಲೇನಾದರೂ ಬದಲಾವಣೆ ಮಾಡಿಕೊಂಡಿದ್ದೀರಾ?

ನನ್ನ ಕೆಲಸದಲ್ಲಿ ಏನೂ ಬದಲಾವಣೆಯಾಗಿಲ್ಲ. ಗಾಡಿ ಓಡಿಸುವಾಗ ಆರಂಭದಲ್ಲಿ ನಿಧಾನವಾಗಿಯೇ ಓಡಿಸಬೇಕಾಗುತ್ತದೆ. ಬಿಎಂಟಿಎಫ್ ವ್ಯವಸ್ಥೆಯನ್ನೂ ಅರ್ಥ ಮಾಡಿಕೊಳ್ಳಲು ಕೂಡ ಸ್ವಲ್ಪ ಸಮಯಾವಕಾಶ ಬೇಕಲ್ವಾ? ಇದುವರೆಗೆ ಒಂದು, ಎರಡು, ಮೂರನೇ    ಗೇರ್‌ನಲ್ಲಿ ಗಾಡಿ ಓಡಿಸಿದ್ದೇನೆ. ಮುಂದಿನ ದಿನಗಳಲ್ಲಿ 4 ಹಾಗೂ 5 ಗೇರ್‌ಗಳನ್ನು ಕೂಡ   ಬದಲಾಯಿಸಲು ಪ್ರಯತ್ನಿಸುತ್ತೇನೆ.

ಬಿಎಂಟಿಎಫ್ ಮುಖ್ಯಸ್ಥರಾಗಿ ಡಾ. ಶರ್ಮ ಅಧಿಕಾರ ವಹಿಸಿಕೊಂಡು ಸೆಪ್ಟೆಂಬರ್ 9 (ಭಾನುವಾರ)ಕ್ಕೆ ಒಂದು ವರ್ಷ ತುಂಬಲಿದೆ. ಬಗರ್‌ಹುಕುಂ ಸಾಗುವಳಿ ಜಮೀನು ಮಂಜೂರು ಮಾಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಯರ್ ಡಿ. ವೆಂಕಟೇಶಮೂರ್ತಿ ಹಾಗೂ ಉಪ ಮುಖ್ಯಮಂತ್ರಿ ಆರ್. ಅಶೋಕ ಅವರಿಗೇ ನೋಟಿಸ್ ಜಾರಿಗೊಳಿಸುವ ಮೂಲಕ ಡಾ. ಶರ್ಮ ದೊಡ್ಡ ಸುದ್ದಿಯಾದರು.

ಇತ್ತೀಚೆಗೆ ನಡೆದ ಕೆಲ ಬೆಳವಣಿಗೆಗಳಿಂದ ಬೇಸರಗೊಂಡಿದ್ದ ಡಾ. ಶರ್ಮ ಅವರಿಗೆ ಸಿಎಟಿ ಹೊರಡಿಸಿದ ಆದೇಶ ಸಮಾಧಾನ ತಂದಿದೆ. ಈ ನಡುವೆ, ನಗರ ಪೊಲೀಸ್ ಕಮಿಷನರ್ ಹುದ್ದೆಗೂ ನಾನು ಅರ್ಹ ಎಂಬ ಹೇಳಿಕೆ ನೀಡಿ ಎಲ್ಲರ ಕುತೂಹಲ ಕೆರಳಿಸಿದ್ದ ಡಾ. ಶರ್ಮ, `ಪ್ರಜಾವಾಣಿ~ಗೆ ನೀಡಿದ ಸಂದರ್ಶನ  ಸಂದರ್ಶನದ ಆಯ್ದ ಭಾಗ ಇಲ್ಲಿದೆ.

-ಕೇಂದ್ರ ಆಡಳಿತ ನ್ಯಾಯಮಂಡಳಿ ನೀಡಿದ ಆದೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ?
ಸಿಎಟಿ ನೀಡಿದ ಆದೇಶವನ್ನು ನಾನು ಗೌರವಿಸುತ್ತೇನೆ. ಇನ್ನು ಮುಂದೆಯೂ ಸಾರ್ವಜನಿಕ ಹಿತಾಸಕ್ತಿ ಕಾಪಾಡಲು `ಸೇವಕ~ನಂತೆ ದುಡಿಯುತ್ತೇನೆ. ಸರ್ಕಾರಕ್ಕೂ ಒಳ್ಳೆಯ ಹೆಸರು ತರಲು ಪ್ರಯತ್ನಿಸುತ್ತೇನೆ.

-ದಿಢೀರನೆ ನೀವು ನಗರ ಪೊಲೀಸ್ ಕಮಿಷನರ್ ಆಗುವ ಬಯಕೆ ವ್ಯಕ್ತಪಡಿಸಿದ್ದೀರಿ? ಇದರ ಹಿಂದಿನ ಗುಟ್ಟು ಏನಿರಬಹುದು?
ಇದೆಲ್ಲಾ ಸುಳ್ಳು. ಎಡಿಜಿಪಿ ರ‌್ಯಾಂಕ್ ಶ್ರೇಣಿ ಪೊಲೀಸ್ ಅಧಿಕಾರಿಯಾದ ನಾನು ನಗರ ಪೊಲೀಸ್ ಕಮಿಷನರ್ ಹುದ್ದೆಗೂ ಅರ್ಹನಿದ್ದೇನೆ ಎಂಬ ಮನದಾಳದ ಅಭಿಲಾಷೆ. ಆದರೆ, ಕಮಿನಷರ್ ಹುದ್ದೆ ಬೇಕು ಎಂದೂ ಸರ್ಕಾರಕ್ಕೆ ಒತ್ತಾಯ ಮಾಡಿಲ್ಲ. ಈ ಬಗ್ಗೆ ಯಾರೂ ತಪ್ಪಾಗಿ ಅರ್ಥೈಸುವ ಅಗತ್ಯವಿಲ್ಲ.

-ಬಗರ್‌ಹುಕುಂ ಸಾಗುವಳಿ ಜಮೀನು ಮಂಜೂರು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿಗಳಿಗೇ ನೋಟಿಸ್ ಜಾರಿ ಮಾಡಿದ್ದೀರಿ? ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?
   ನೋ ಕಾಮೆಂಟ್ಸ್.

-ಮೊದಲಿನಿಂದಲೂ ಹಲ್ಲು ಕಿತ್ತ ಹಾವಿನಂತಿದ್ದ ಬಿಎಂಟಿಎಫ್, ಡಾ.ಶರ್ಮ ಮುಖ್ಯಸ್ಥರಾದ ನಂತರವಷ್ಟೇ ಏಕೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ?

ನನಗೆ ಸರ್ಕಾರ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದೇನೆ. ಆಸ್ತಿಗಳನ್ನು ರಕ್ಷಣೆ ಮಾಡುವುದು, ತನಿಖೆ ಮಾಡುವುದು, ಅಧಿಕಾರಿಗಳ ಲೋಪ ಎತ್ತಿ ಹಿಡಿಯುವುದು ನನ್ನ ಕೆಲಸ. ಆ ಕೆಲಸವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದ್ದೇನೆ. ಬಿಎಂಟಿಎಫ್‌ಗಾಗಿ ಸರ್ಕಾರ 7 ಕೋಟಿ ಖರ್ಚು ಮಾಡಿದೆ. ಅದರಿಂದ ಜನರಿಗೆ ಪ್ರಯೋಜನ ಆಗಬೇಕಲ್ಲವೇ?

-ಬಿಬಿಎಂಪಿ ಎಂಜಿನಿಯರ್‌ಗಳನ್ನೇ ಗುರಿಯಾಗಿಟ್ಟುಕೊಂಡು ಬಿಎಂಟಿಎಫ್ ಕೆಲಸ ಮಾಡುತ್ತಿದೆ ಎಂಬ ಆರೋಪದ ಬಗ್ಗೆ ಏನು ಹೇಳುತ್ತೀರಿ?
ಬಿಎಂಟಿಎಫ್ ಜನ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸ್ನೇಹಿ ಸಂಸ್ಥೆ. ಯಾರಿಗೂ ಕಾರ್ಯಪಡೆ ಬಗ್ಗೆ ಭಯ ಇರಬಾರದು. ಕಾನೂನು ಪಾಲಿಸಲು ನಮಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಜನರ ಸಹಕಾರ ಬೇಕು. ನಾನು ಕಾನೂನುರೀತ್ಯ ಕೆಲಸ ಮಾಡುವುದರಿಂದ ಕೆಲವರಿಗೆ ತೊಂದರೆಯಾಗುವುದಾದಲ್ಲಿ ಅದಕ್ಕೆ ನಾನೇನು ಮಾಡಲು ಸಾಧ್ಯವಿಲ್ಲ.

-ಬಿಎಂಟಿಎಫ್ ಮುಖ್ಯಸ್ಥರಾಗಿ ಒಂದು ವರ್ಷ ಆಯ್ತು? ಬಿಬಿಎಂಪಿ ವ್ಯವಸ್ಥೆಗೆ ಬಗ್ಗೆ ನಿಮಗೇನನ್ನಿಸುತ್ತದೆ?
ಬಿಬಿಎಂಪಿ ವ್ಯವಸ್ಥೆ ಬಗ್ಗೆ ಮಾತನಾಡಲು ನಾನೇನೂ ನ್ಯಾಯಾಧೀಶ ಅಲ್ಲ. ಪಾಲಿಕೆ ಆಡಳಿತದ ಬಗ್ಗೆ ನಾನೇಕೆ ಪರಾಮರ್ಶೆ ನಡೆಸಲಿ. ಅದಕ್ಕೆ ಪ್ರತ್ಯೇಕವಾದ ಆಯುಕ್ತರು, ಜನಪ್ರತಿನಿಧಿಗಳು ಹಾಗೂ ಅದಕ್ಕಿಂತಲೂ ಮೇಲೆ ಸರ್ಕಾರ ಇರುವಾಗ ನಾನು ಹೇಳಿಕೆ ನೀಡುವುದು ಸರಿ ಬರುವುದಿಲ್ಲ.

-ಕಟ್ಟಡ ಬೈಲಾ ಉಲ್ಲಂಘನೆ ಪ್ರಕರಣಕ್ಕೆ ಬಂದರೆ ಸಣ್ಣ ಪುಟ್ಟದಕ್ಕೆಲ್ಲಾ ಡಾ. ಶರ್ಮ ನೋಟಿಸ್ ಕೊಡಿಸುವ ಕೆಲಸ ಮಾಡುತ್ತಿದ್ದಾರೆ. ಇದು ಪಾಲಿಕೆ ಎಂಜಿನಿಯರ್‌ಗಳ ಸಹಜ ದೂರು? ಎಂಜಿನಿಯರ್‌ಗಳೇ ನಿಮ್ಮ ಗುರಿಯೇ?
ಒಂದು ಪ್ರಕರಣ ದಾಖಲಾದ ಮೇಲೆ ಅದು ದೊಡ್ಡದು ಅಥವಾ ಚಿಕ್ಕದು ಎನ್ನುವ ಪ್ರಶ್ನೆ ಉದ್ಭವಿಸುವುದಿಲ್ಲ. ನನ್ನ ದೃಷ್ಟಿಯಲ್ಲಿ ಅಪರಾಧ ಅಪರಾಧವೇ. ಅದಕ್ಕೆ ದೊಡ್ಡದು ಅಥವಾ ಚಿಕ್ಕದು ಎಂಬ ಯಾವುದೇ ವ್ಯತ್ಯಾಸ ಇಲ್ಲ.

-ಎಲ್ಲ ಸರ್ಕಾರಿ ಆಸ್ತಿಗಳನ್ನೂ ಸಂರಕ್ಷಿಸುವುದು ಬಿಎಂಟಿಎಫ್ ಜವಾಬ್ದಾರಿ? ಆದರೆ, ಬಿಬಿಎಂಪಿಯೇ ನಿಮ್ಮ `ಟಾರ್ಗೆಟ್~ ಏಕೆ?

ನಿಮ್ಮ ವಾದ ಖಂಡಿತಾ ತಪ್ಪು. ಕಂದಾಯ, ಬಿಡಿಎ, ಕೆಐಎಡಿಬಿಗೆ ಸೇರಿದ ಆಸ್ತಿ ಉಲ್ಲಂಘನೆ ಪ್ರಕರಣಗಳ ಬಗ್ಗೆಯೂ ಬಿಎಂಟಿಎಫ್ ಅನೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಕಟ್ಟಡ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಹೆಚ್ಚಿನ ದೂರುಗಳು ದಾಖಲಾಗುತ್ತಿರುವುದು ನಿಜ. ಬಹುಶಃ ಬಿಎಂಟಿಎಫ್ ಪಾಲಿಕೆ ಕಚೇರಿ ಆವರಣದಲ್ಲಿರುವುದು ಕೂಡ ಇದಕ್ಕೆ ಮುಖ್ಯ ಕಾರಣ ಇರಬಹುದು. ಈ ಕಾರಣಕ್ಕಾಗಿಯೇ ಪಾಲಿಕೆ ಕಚೇರಿ ಆವರಣದಿಂದ ಹೊರಗೆ ಬಿಎಂಟಿಎಫ್‌ಗೆ ಜಾಗ ನೀಡುವಂತೆ ನಗರಾಭಿವೃದ್ಧಿ ಸಚಿವರನ್ನು ಈಗಾಗಲೇ ಕೋರಿದ್ದೇನೆ.

-ಬಿಎಂಟಿಎಫ್ ಮುಖ್ಯಸ್ಥರಾಗಿ 2013ರ ಅಂತ್ಯದವರೆಗೂ ಮುಂದುವರಿಯುತ್ತೀರಿ?  ಪಾಲಿಕೆಯ ಭ್ರಷ್ಟ ಅಧಿಕಾರಿಗಳ ವಿರುದ್ಧ ಹೋರಾಟ ಮುಂದುವರಿಸುತ್ತೀರಾ?

ರಾಜ್ಯ ಸರ್ಕಾರದ ಆದೇಶದ ಪ್ರಕಾರ ನಾನು ಕೆಲಸ ನಿರ್ವಹಿಸುತ್ತೇನೆ. ಅದು ಬಿಟ್ಟರೆ ಯಾರ ವಿರುದ್ಧವೂ ನನ್ನ ವೈಯಕ್ತಿಕ ಹೋರಾಟ ಇಲ್ಲ. ಅಂತಹ ಯಾವುದೇ ಉದ್ದೇಶ ನನಗಿಲ್ಲ.

-ಭ್ರಷ್ಟ ಅಧಿಕಾರಿಗಳ ವಿರುದ್ಧ ಚಾಟಿ ಬೀಸುವ ಡಾ. ಶರ್ಮ ಅವರೇ ದೊಡ್ಡಗುಬ್ಬಿಯಲ್ಲಿ ನಿಯಮಬಾಹಿರವಾಗಿ ಮನೆ ನಿರ್ಮಿಸುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಏನು ಹೇಳುತ್ತೀರಿ?
ಯಾವುದೇ ರೀತಿಯಲ್ಲಿ ನನ್ನನ್ನು ನೇರವಾಗಿ ಎದುರಿಸಲಾಗದವರು ಈ ರೀತಿಯ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT