ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಬದಿ ಗಿಡಗಳು ಮರವಾಗುತ್ತವೆಯೇ?

Last Updated 9 ಅಕ್ಟೋಬರ್ 2017, 19:49 IST
ಅಕ್ಷರ ಗಾತ್ರ

ಬೆಂಗಳೂರು: 'ಬಿಬಿಎಂಪಿಯು ನಗರದ ರಸ್ತೆ ಮತ್ತು ಪಾದಚಾರಿ ಮಾರ್ಗಗಳ ನಡುವೆಯೇ ವಿವಿಧ ಜಾತಿಯ ಗಿಡಗಳನ್ನು ನೆಡುತ್ತಿದೆ. ಈ ಗಿಡಗಳು ಬೆಳೆದು ಮರವಾಗುವ ಸಾಧ್ಯತೆ ಕಡಿಮೆ' ಎಂದು ಮರವಿಜ್ಞಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪಾಲಿಕೆ ಜೂನ್‌ ತಿಂಗಳಲ್ಲಿ ಗ್ರೀನ್‌ಆ್ಯಪ್‌ ರೂಪಿಸಿ, ಆ ಮೂಲಕ 9 ಲಕ್ಷ ಸಸಿಗಳನ್ನು ಸಾರ್ವಜನಿಕರಿಗೆ ವಿತರಿಸುವ ಅಭಿಯಾನ ಆರಂಭಿಸಿತ್ತು. ಹಾಗೆಯೇ 1 ಲಕ್ಷ ಸಸಿಗಳನ್ನು ಮುಖ್ಯ ಮತ್ತು ಉಪರಸ್ತೆಗಳ ಬದಿಯಲ್ಲಿ ನೆಡಲು ಯೋಜಿಸಿತ್ತು.

‘ಈ ಯೋಜನೆಯ ಭಾಗವಾಗಿ ನಗರದ ಎಲ್ಲ ವಿಧಾನಸಭಾ ಕ್ಷೇತ್ರಗಳ 150ಕ್ಕೂ ಹೆಚ್ಚು ವಾರ್ಡ್‌ಗಳ ರಸ್ತೆಗಳ ಬದಿಯಲ್ಲಿ ಗಿಡಗಳನ್ನು ನೆಡಲಾಗುತ್ತಿದೆ. ಕೆಲವು ಪಾಲಿಕೆ ಸದಸ್ಯರು ಬೆಂಬಲಿಗರ ಮೂಲಕ ಕನಿಷ್ಠ 500ರಿಂದ ಗರಿಷ್ಠ 2,500 ಸಸಿಗಳನ್ನು ಗ್ರೀನ್‌ಆ್ಯಪ್‌ ಮೂಲಕ ತರಿಸಿಕೊಂಡು ನೆಡುತ್ತಿದ್ದಾರೆ’ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

ಈ ಅಭಿಯಾನದ ಭಾಗವಾಗಿ ಸಿ.ವಿ.ರಾಮನ್‌ ನಗರ, ಶಾಂತಿನಗರ, ಜಯನಗರ, ಪುಲಿಕೇಶಿನಗರ, ಸರ್ವಜ್ಞನಗರ, ಕೆ.ಆರ್‌.ಪುರ ಕ್ಷೇತ್ರಗಳ ರಸ್ತೆ ಮತ್ತು ಒಳಚರಂಡಿ ಮಾರ್ಗದ ನಡುವೆಯೇ ಒಂದಡಿ ಗುಂಡಿಗಳನ್ನು ತೋಡಿ ಗಿಡಗಳನ್ನು ನೆಡಲಾಗಿದೆ. ಇಲ್ಲಿನ ಒಳಚರಂಡಿಯ ಮೇಲ್ಭಾಗದಲ್ಲಿಯೇ ಪಾದಚಾರಿ ಮಾರ್ಗಗಳಿವೆ.

‘ಗಿಡಗಳನ್ನು ನೆಡಲು ಕನಿಷ್ಠ 2 ಅಡಿ ಆಳ, ಅಗಲದಷ್ಟು ಗುಂಡಿ ತೋಡಬೇಕು. ಪಾಲಿಕೆ ಗಿಡಗಳನ್ನು ನೆಡುತ್ತಿರುವ ವಿಧಾನ ಅವೈಜ್ಞಾನಿಕ’ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

‘ಬೇವು, ನೇರಳೆ, ಹೊಂಗೆ, ಹಲಸುವಿನಂತಹ ಪ್ರತಿ ಗಿಡವನ್ನು 20 ಅಡಿ ಅಂತರದಲ್ಲಿ ಬೆಳೆಸಬೇಕು. ಈ ಗಿಡಗಳ ರೆಂಬೆಕೊಂಬೆಗಳು ಮೇಲ್ಭಾಗದಲ್ಲಿ ಹರಡಿಕೊಂಡಷ್ಟೇ, ಕೆಳಭಾಗದಲ್ಲಿ ಬೇರುಗಳನ್ನು ವಿಸ್ತರಿಸಿಕೊಳ್ಳುತ್ತವೆ. ಬೇರುಗಳು ಆಳವಾಗಿ ಇಳಿದು, ಹರಡಿದಾಗ ಮಾತ್ರ ಗಾಳಿಯ ರಭಸ ಮತ್ತು ನೀರಿನ ಹರಿವಿನ ಒತ್ತಡ ತಡೆದುಕೊಳ್ಳುವ ಸಾಮರ್ಥ್ಯ ಗಿಡಗಳಿಗೆ ಬರುತ್ತದೆ’ ಎಂದು ಭಾರತೀಯ ಮರ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವಿಜ್ಞಾನಿಯೊಬ್ಬರು ತಿಳಿಸಿದರು.

‘ಸ್ಥಳಾವಕಾಶ ಹೆಚ್ಚಿದ್ದಾಗ ಗಿಡಗಳು ಹುಲುಸಾಗಿ ಬೆಳೆಯುತ್ತವೆ. ಆಗ ಮಳೆ–ಗಾಳಿಗೆ ಸುಲಭವಾಗಿ ಉರುಳಿ ಬೀಳುವುದಿಲ್ಲ’ ಎನ್ನುತ್ತಾರೆ ಅವರು.

‘ಪಾಲಿಕೆ ನೆಡುತ್ತಿರುವ ಗಿಡಗಳಿಗೆ ಮೂರು ವರ್ಷಗಳು ರಕ್ಷಾಕವಚ ಹಾಕಿ, ನಿರ್ವಹಣೆ ಮಾಡಬೇಕು. ಆಗ ನಗರದ ಎಲ್ಲ ಪ್ರದೇಶಗಳ ಮಣ್ಣಿನಲ್ಲಿ ಗಿಡಗಳು ಬೆಳೆಯುತ್ತವೆ’ ಎಂದು ಅವರು ಹೇಳಿದರು.

ಶಾಂತಿನಗರದ ನಂಜಪ್ಪ ರಸ್ತೆಯ ಒಳಚರಂಡಿಯ ತ್ಯಾಜ್ಯವನ್ನು ಗಿಡಗಳ ಮೇಲೆಯೇ ಹಾಕಲಾಗಿತ್ತು

‘ಪಾಲಿಕೆಯವರು ಮನೆ ಮುಂದಿನ ರಸ್ತೆ ಬದಿ ಒಂದೂವರೆ ಅಡಿ ಸುತ್ತಳತೆಯ ಗುಂಡಿ ತೋಡಿ ಬೇವಿನ ಗಿಡ ನೆಟ್ಟು ಹೋಗಿದ್ದಾರೆ. ಪಕ್ಕದಲ್ಲಿಯೇ ಮೋರಿಯಿದೆ. ಈ ಚಿಕ್ಕ ಜಾಗದಲ್ಲಿ ಗಿಡ ಬೆಳೆಯುವುದು ಅನುಮಾನ’ ಎಂದು ಶಾಂತಿನಗರದ ಬಂಗಿಯಪ್ಪ ಗಾರ್ಡನ್‌ ನಿವಾಸಿ ಭದ್ರಿನಾಥ್‌ ತಿಳಿಸಿದರು.

‘ಈಗ ಮಳೆಗಾಲ. ನೆಟ್ಟ ಗಿಡಗಳು ಚಿಗುರುತ್ತಿವೆ. ಬೇಸಿಗೆಯಲ್ಲಿ ಇವು ಒಣಗುತ್ತವೆ. ಪಾಲಿಕೆ ಮುಂದಿನ ವರ್ಷ ಗಿಡ ನೆಡುವ ಮತ್ತೊಂದು ಅಭಿಯಾನ ಆರಂಭಿಸುತ್ತದೆ. ಅದಕ್ಕೆ ಮತ್ತಷ್ಟು ಹಣ ವ್ಯಯಿಸುತ್ತದೆ. ಪ್ರತಿವರ್ಷ ಇದೇ ಆಗುತ್ತಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಶಾಂತಿನಗರದಲ್ಲಿ ಗಿಡಗಳ ಬದಿಯಲ್ಲಿಯೇ ಡಾಂಬರು ಹಾಕಿದ್ದಾರೆ. ಚರಂಡಿಗಳಿಂದ ತೆಗೆದ ಹೂಳನ್ನು ಸಸಿಗಳ ಮೇಲೆ ಚೆಲ್ಲಿದ್ದಾರೆ. ಇದರಿಂದ ನೆಟ್ಟ ಗಿಡಗಳು ಬೆಳೆಯುವ ಮುನ್ನವೇ ಮುರಿದು ಬಿದ್ದಿವೆ.

‘ಬಂಡೆ ಮೇಲೂ ಗಿಡ ನೆಡುತ್ತೇವೆ’

‘ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಕಾರ್ಪೊರೇಟರ್‌ಗಳು ವನಮಹೋತ್ಸವ ಆಯೋಜಿಸುತ್ತಾರೆ. ಅವರ ಆದೇಶದಂತೆ ಡಾಂಬರು ರಸ್ತೆಯ ಬದಿಯಲ್ಲಿ  ತರಾತುರಿಯಲ್ಲಿ ಗಿಡಗಳನ್ನು ನೆಡುತ್ತಿದ್ದೇವೆ. ಅವರು ಆದೇಶಿಸಿದರೆ ಬಂಡೆ ಮೇಲೂ ಗಿಡಗಳನ್ನು ನೆಡುವ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಜನಪ್ರತಿನಿಧಿಗಳಿಗೆ ಬುದ್ಧಿ ಹೇಳಲು ಆಗುತ್ತದೆಯೇ’ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ಪ್ರಶ್ನಿಸಿದರು.

ಗ್ರೀನ್‌ಆ್ಯಪ್‌ ಮೂಲಕ ಈವರೆಗೂ ಎಷ್ಟು ಗಿಡಗಳನ್ನು ವಿತರಿಸಲಾಗಿದೆ ಎಂಬ ಮಾಹಿತಿ ಕೇಳಿದಾಗ ‘ಪಾಲಿಕೆಯ ಅರಣ್ಯ ಘಟಕದಲ್ಲಿ ಸ್ಪಷ್ಟ ಮಾಹಿತಿ ಇಲ್ಲ’ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದರು.

ಪಾಲಿಕೆ ವಿತರಿಸುತ್ತಿರುವ ಗಿಡಗಳು

ಬೇವು, ಹೊಂಗೆ, ಮಹಾಗನಿ, ಕಾಡುಬಾದಾಮಿ, ನೇರಳೆ, ನೆಲ್ಲಿ, ಹೊಳೆದಾಸವಾಳ, ತಬೂಬಿಯಾ, ಹೂವರಸಿ, ಚೆರ್ರಿ, ಸಂಪಿಗೆ, ಜಕರಾಂಡ, ಹಲಸು, ಸೀಮಾರೂಬಾ.

* ಮನೆಮುಂದೆ ಗಿಡಗಳಿದ್ದರೆ ಕಾರು, ಬೈಕ್‌ಗಳನ್ನು ನಿಲ್ಲಿಸಲು ಆಗುವುದಿಲ್ಲವೆಂದು ನೆಟ್ಟ ಗಿಡಗಳನ್ನು ಕೆಲವೆಡೆ ಸ್ಥಳೀಯರೇ ಕಿತ್ತು ಹಾಕುತ್ತಿದ್ದಾರೆ.

–ಗೋಕುಲ್‌, ವಿಲ್ಸನ್‌ ಗಾರ್ಡನ್‌ ನಿವಾಸಿ

ಅಂಕಿ–ಅಂಶ

* ₹ 38 ಕೋಟಿ ಬಿಬಿಎಂಪಿ ಬಜೆಟ್‌ನಲ್ಲಿ ಈ ವರ್ಷ ಅರಣ್ಯೀಕರಣಕ್ಕೆ ಮೀಸಲಿಟ್ಟ ಮೊತ್ತ

* ₹ 6 ಕೋಟಿ ರಸ್ತೆ ಬದಿ ಗಿಡ ನೆಡಲು ನಿಗದಿಪಡಿಸಿದ ಹಣ

* 2,55,000 ಗ್ರೀನ್‌ಆ್ಯಪ್‌ ಮೂಲಕ ಸಸಿಗಳಿಗಾಗಿ ಬಂದ ಬೇಡಿಕೆ (ಸೆಪ್ಟೆಂಬರ್‌ ಅಂತ್ಯದವರೆಗೆ)

ಶಾಂತಿನಗರದಲ್ಲಿನ ಉಪರಸ್ತೆಯ ಬದಿಯ ಸಸಿಗೆ ರಕ್ಷಾಕವಚ ಅಳವಡಿಸಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT