ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣೆಬೆನ್ನೂರಿನಿಂದ ರಾಘವೇಂದ್ರ ಸ್ಪರ್ಧೆ ?

ಶಿವಮೊಗ್ಗ ಲೋಕಸಭೆ ಕ್ಷೇತ್ರದ ಮೇಲೂ ಕಣ್ಣು
Last Updated 1 ಡಿಸೆಂಬರ್ 2019, 13:02 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಹಾವೇರಿ ಜಿಲ್ಲೆ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ.

ಉತ್ತರ ಕರ್ನಾಟಕದ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಯಡಿಯೂರಪ್ಪ ಅವರು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಒಂದು ವೇಳೆ ಯಡಿಯೂರಪ್ಪ ಉತ್ತರ ಕರ್ನಾಟಕದಿಂದ ಸ್ಪರ್ಧಿಸದೇ ಇದ್ದರೆ ರಾಘವೇಂದ್ರ ರಾಣೆಬೆನ್ನೂರು ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಿಕಾರಿಪುರದ ಬಗ್ಗೆ ಯಡಿಯೂರಪ್ಪ ಭಾವನಾತ್ಮಕ ಸಂಬಂಧ ಹೊಂದಿರುವ ಕಾರಣ ಆ ಕ್ಷೇತ್ರವನ್ನು ತೊರೆಯುವ ಸಾಧ್ಯತೆ ಕಡಿಮೆ. ಬದಲಿಗೆ ರಾಘವೇಂದ್ರ ಅವರನ್ನು ರಾಣೆಬೆನ್ನೂರಿನಿಂದ ಕಣಕ್ಕಿಳಿಸುವ ಮೂಲಕ ಹಾವೇರಿ ಜಿಲ್ಲೆಯ ಸುತ್ತಮುತ್ತಲಿನ ಮೂರರಿಂದ ನಾಲ್ಕು ಜಿಲ್ಲೆಗಳಲ್ಲಿ ಅಧಿಕ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಬಗ್ಗೆಯೂ ಬಿಜೆಪಿ ಚಿಂತನೆ ನಡೆಸಿದೆ.

‘ಬಿಜೆಪಿಯಿಂದ ಎರಡು ಬಾರಿ ಗೆದ್ದಿದ್ದ ಮಾಜಿ ಶಾಸಕ ಜಿ.ಶಿವಣ್ಣ ಮೃತರಾಗಿರುವುದರಿಂದ, ಕ್ಷೇತ್ರದಲ್ಲಿ ಬಿಜೆಪಿಗೆ ಪ್ರಬಲ ಅಭ್ಯರ್ಥಿಗಳೂ ಇಲ್ಲ. ಲಿಂಗಾಯತರ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ರಾಘವೇಂದ್ರ ಕಣಕ್ಕೆ ಇಳಿದರೆ ಸುಲಭವಾಗಿ ಗೆಲ್ಲಬಹುದು. ಕಾಂಗ್ರೆಸ್‌ ಶಾಸಕ ಕೆ.ಬಿ.ಕೋಳಿವಾಡ ಅವರಿಗೆ ಆಡಳಿತ ವಿರೋಧಿ ಅಲೆ ಇದೆ.

ರಾಣೆಬೆನ್ನೂರು ಶಿಕಾರಿಪುರ ಕ್ಷೇತ್ರದ ಪಕ್ಕದ ಕ್ಷೇತ್ರ ಆಗಿರುವುದರಿಂದ ಯಡಿಯೂರಪ್ಪ ಅವರ ಪ್ರಭಾವ ದಟ್ಟವಾಗಿಯೇ ಇದೆ. ಹೀಗಾಗಿ ಬಿಜೆಪಿಗೆ ಗೆಲುವು ಸುಲಭ’ ಎಂಬುದು ಬಿಜೆಪಿ ಲೆಕ್ಕಾಚಾರ.

ಈಗಾಗಲೇ ರಾಘವೇಂದ್ರ ಅವರು ವಿಸ್ತಾರಕ್‌ ಕಾರ್ಯಕ್ರಮದಡಿ ರಾಣೆಬೆನ್ನೂರು ಕ್ಷೇತ್ರಕ್ಕೆ ಹಲವು ಬಾರಿ ಭೇಟಿ ನೀಡಿ ಕಾರ್ಯಕರ್ತರನ್ನು ಸಂಪರ್ಕಿಸುವ ಕೆಲಸ ಮಾಡಿದ್ದಾರೆ. ಕಾರ್ಯಕರ್ತರಿಂದ ಕ್ಷೇತ್ರದ ಬಗ್ಗೆ ಮಾಹಿತಿಯನ್ನೂ ಪಡೆದಿದ್ದಾರೆ. ಕೊನೆ ಕ್ಷಣದಲ್ಲಿ ಯಡಿಯೂರಪ್ಪ ಶಿಕಾರಿಪುರ ಬಿಟ್ಟು ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಂಡರೆ, ರಾಘವೇಂದ್ರ ಶಿಕಾರಿಪುರದಲ್ಲೇ ಉಳಿಯುತ್ತಾರೆ ಎಂದು ಮೂಲಗಳು ಹೇಳಿವೆ.

2013 ರ ವಿಧಾನಸಭಾ ಚುನಾವಣೆಯಲ್ಲಿ ರಾಣೆಬೆನ್ನೂರಿನಲ್ಲಿ ಕೆ.ಬಿ ಕೋಳಿವಾಡ ಪಕ್ಷೇತರ ಅಭ್ಯರ್ಥಿ ಆರ್‌.ಶಂಕರ್‌ ವಿರುದ್ಧ ಅತಿ ಕಡಿಮೆ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಶಂಕರ್‌ ಕ್ಷೇತ್ರದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದು, ಅಕಸ್ಮಾತ್‌ ಕಾಂಗ್ರೆಸ್‌ ಟಿಕೆಟ್‌ ಮೇಲೆ ಶಂಕರ್‌ ಸ್ಪರ್ಧಿಸಿದರೆ ತಮಗೆ ಕಷ್ಟವಾಗಬಹುದು ಎಂಬ ಸಣ್ಣ ಅಳುಕು ರಾಘವೇಂದ್ರ ಅವರನ್ನು ಕಾಡಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ರಾಜಕೀಯ ಪ್ರವೇಶಿಸಿದ ರಾಘವೇಂದ್ರ, ಕಳೆದ ಲೋಕಸಭಾ ಚುನಾವಣೆಯಲ್ಲಿ ತಂದೆಯವರಿಗಾಗಿ ಆ ಸ್ಥಾನ ತೆರವು ಮಾಡಿದ್ದರು. ಬಳಿಕ ಶಿಕಾರಿಪುರ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದರು. ರಾಣೆಬೆನ್ನೂರು ಕ್ಷೇತ್ರ ಬೇಡವೆಂದಾದರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಅವರು ಸ್ಪರ್ಧಿಸುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು ಎಂದೂ ಮೂಲಗಳು ಹೇಳಿವೆ.

ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿರುವ ಕುಮಾರ ಬಂಗಾರಪ್ಪ ಭವಿಷ್ಯವೂ ಈಗ ಯಡಿಯೂರಪ್ಪ ಅವರ ಕೈಯಲ್ಲಿದೆ. ಸೊರಬ ಅಥವಾ ಸಾಗರ ಕ್ಷೇತ್ರದಲ್ಲಿ ಒಂದನ್ನು ಬಿಟ್ಟುಕೊಡುವ ಕುರಿತು ಬಿಜೆಪಿ ಆಲೋಚಿಸುತ್ತಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಂಸದ ಆಯನೂರು ಮಂಜುನಾಥ್‌ ಅವರೂ ಆಕಾಂಕ್ಷಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT