ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲ್ಯಾಂಕೊ ಟೋಲ್‌ಗೆ ಬೆಂಕಿ: ಲಾಠಿ ಪ್ರಹಾರ

ಹುಸ್ಕೂರು ಕೋಡಿ ಬಳಿ ಟೋಲ್ ಸಿಬ್ಬಂದಿ–ಗ್ರಾಮಸ್ಥರ ನಡುವೆ ಮಾರಾಮಾರಿ: ಗಾಯ
Last Updated 19 ಏಪ್ರಿಲ್ 2015, 20:36 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ–4ರ ಹುಸ್ಕೂರು ಕೋಡಿ ಬಳಿ ಇರುವ ಲ್ಯಾಂಕೊ ಸಂಸ್ಥೆಯ ಟೋಲ್‌ ಕೇಂದ್ರದಲ್ಲಿ ಭಾನುವಾರ ಶುಲ್ಕ ಪಾವತಿ ವಿಚಾರವಾಗಿ ಕೇಂದ್ರದ ಸಿಬ್ಬಂದಿ ಹಾಗೂ ಸ್ಥಳೀಯ ವಾಹನ ಚಾಲಕನ ನಡುವೆ ಆರಂಭವಾದ ಜಗಳ, ಇಡೀ ಟೋಲ್ ಕೇಂದ್ರ ಧ್ವಂಸವಾಗಲು ಕಾರಣವಾಯಿತು.

ಗಲಾಟೆ ವಿಷಯ ತಿಳಿದು ಸ್ಥಳಕ್ಕೆ ಜಮಾಯಿಸಿದ ಸುತ್ತಮುತ್ತಲ ಗ್ರಾಮಸ್ಥರು, ಕಲ್ಲು ತೂರಾಟ ನಡೆಸಿ ಟೋಲ್‌ನ ಗಾಜುಗಳನ್ನು ಪುಡಿ ಪುಡಿ ಮಾಡಿದರು. ನಂತರ ಒಂದು ಬೂತ್‌ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ಹೊರ ಹಾಕಿದರು. ಪರಿಸ್ಥಿತಿ ಕೈಮೀರಿರುವ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ 150ಕ್ಕೂ ಹೆಚ್ಚು ಪೊಲೀಸರು, ಲಾಠಿ ಪ್ರಹಾರ ಮಾಡಿ ಗುಂಪು ಚದುರಿಸಿದರು.

ಜಗಳಕ್ಕೆ ಕಾರಣ: ಹುಸ್ಕೂರು ಕೋಡಿ ಗ್ರಾಮ ಪಂಚಾಯ್ತಿ ಸದಸ್ಯ ನಾರಾಯಣ ಸ್ವಾಮಿ ಅವರು ಕುಟುಂಬ ಸದಸ್ಯರ ಜತೆ  ಬೆಳಿಗ್ಗೆ 9.30ರ ಸುಮಾರಿಗೆ ಕಾರಿನಲ್ಲಿ ಜಂಗಮಕೋಟೆಗೆ ಹೊರಟಿದ್ದರು.  ಈ ವೇಳೆ ಕಾರನ್ನು ತಡೆದ ಟೋಲ್ ಸಿಬ್ಬಂದಿ, ಸುಂಕ ಪಾವತಿಸಿ ಹೋಗುವಂತೆ ಹೇಳಿದ್ದಾರೆ. ಆಗ ಕಾರು ಚಾಲನೆ ಮಾಡುತ್ತಿದ್ದ ನಾರಾಯಣಸ್ವಾಮಿ ಅವರ ಮಗ ಮಂಜುನಾಥ್, ‘ನಾವು ಸ್ಥಳೀಯರು. ನಮಗೆ ಉಚಿತ ಪಾಸ್ ನೀಡಲಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಇದೇ ವಿಚಾರವಾಗಿ ಜಗಳ ಆರಂಭವಾಗಿದ್ದು, ಪರಸ್ಪರರು ಕೈ–ಕೈ ಮಿಲಾಯಿಸಿದ್ದಾರೆ. ಕೂಡಲೇ   ಒಟ್ಟಾದ ಟೋಲ್‌ ಸಿಬ್ಬಂದಿ, ಮಂಜುನಾಥ್ ಮತ್ತು ನಾರಾಯಣ ಸ್ವಾಮಿ ಅವರನ್ನು ಸಮೀಪದ ಕಚೇರಿಗೆ ಎಳೆದೊಯ್ದು ಮನಬಂದಂತೆ ಥಳಿಸಿದ್ದಾರೆ ಎನ್ನಲಾಗಿದೆ.

ಕಾರಿನಲ್ಲಿದ್ದ ಇತರೆ ಕುಟುಂಬ ಸದಸ್ಯರು, ಕೂಡಲೇ ಊರಿಗೆ ತೆರಳಿ ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ. ರೊಚ್ಚಿಗೆದ್ದ ಗ್ರಾಮಸ್ಥರು, ಕ್ಯಾಬಿನ್‌ನ ಪೀಠೋಪಕರಣ ಧ್ವಂಸ ಮಾಡಿ, ಕಂಪ್ಯೂಟರ್ ಮತ್ತಿತರ ಯಂತ್ರಗಳನ್ನು ಹೊರಗೆಸಿದ್ದಾರೆ. ನಂತರ ಕಚೇರಿಗೆ ನುಗ್ಗಿ ಟೋಲ್‌ ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಗಾಯಗೊಂಡಿರುವ ಮಂಜುನಾಥ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಟೋಲ್ ಸ್ಥಳಾಂತರಕ್ಕೆ ಒತ್ತಡ
‘ಟೋಲ್‌ ಸಿಬ್ಬಂದಿಯ ಬೇಜವಾಬ್ದಾರಿಯೇ ಈ ಘಟನೆಯ ಕಾರಣ. ಹಿಂದೆಯೂ ಇಂಥ ಘಟನೆಗಳು ನಡೆದಿದ್ದವು. ಆಗ ಸ್ಥಳೀಯರೊಂದಿಗೆ ಅನುಸರಿಸಿಕೊಂಡು ಶಾಂತಿ–ಸುವ್ಯವಸ್ಥೆ ಕಾಪಾಡುವಂತೆ ಬುದ್ಧಿ ಹೇಳಲಾಗಿತ್ತು. ಈ ಟೋಲ್‌ ಘಟಕವನ್ನು ಪುರಸಭೆ ವ್ಯಾಪ್ತಿಯಿಂದ ಹೊರಗಿಡುವಂತೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು’ ಎಂದು ಶಾಸಕ ಎನ್‌.ನಾಗರಾಜ್‌ ತಿಳಿಸಿದರು.

ದೂರು– ಪ್ರತಿದೂರು
‘ಮಂಜುನಾಥ್ ನೀಡಿರುವ ದೂರಿನ ಅನ್ವಯ ಟೋಲ್ ಸಿಬ್ಬಂದಿ ವಿರುದ್ಧ ಕೊಲೆ ಯತ್ನ (ಐಪಿಸಿ 307) ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಅದೇ ರೀತಿ ಟೋಲ್ ಸಿಬ್ಬಂದಿಯೂ ಮಂಜುನಾಥ್ ವಿರುದ್ಧ ಪ್ರತಿದೂರು ಕೊಟ್ಟಿದ್ದಾರೆ. ಕೇಂದ್ರದ ಸಿ.ಸಿ ಕ್ಯಾಮೆರಾಗಳಲ್ಲಿ ಗಲಾಟೆಯ ದೃಶ್ಯಗಳು ದಾಖಲಾಗಿವೆ. ಅವುಗಳನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಬಾನೋತ್ ‘ಪ್ರಜಾವಾಣಿ’ಗೆ ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT