ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ಕರೆ ಕಾಯಿಲೆಗೆ ನಗರದ ಮೇಲೆ ಅಕ್ಕರೆ!

ಇಂದು ವಿಶ್ವ ಮಧುಮೇಹಿ ದಿನ
Last Updated 13 ನವೆಂಬರ್ 2014, 19:38 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಸದ್ದಿಲ್ಲದೆ ಮಧುಮೇಹ (ಸಕ್ಕರೆ ಕಾಯಿಲೆ) ವ್ಯಾಪಕವಾಗಿ ಹಬ್ಬುತ್ತಿದೆ. ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ­ಯಲ್ಲಿ ಬೆಂಗಳೂರು ನಾಲ್ಕನೇ ಸ್ಥಾನ­ದಲ್ಲಿದ್ದರೆ, ನವದೆಹಲಿ ಮೊದಲ ಸ್ಥಾನದಲ್ಲಿದೆ.

ಈ ಆತಂಕಕಾರಿ ಅಂಶವನ್ನು ಕೈಗಾ­ರಿಕಾ ಮತ್ತು ವಾಣಿಜ್ಯ ವೇದಿಕೆಗಳ ಸಂಘದ (ಅಸೋಚಾಂ) ಸಮೀಕ್ಷಾ ವರದಿ ಬಹಿರಂಗಪಡಿಸಿದೆ.
ಬೆಂಗಳೂರಿನಲ್ಲಿ ಶೇ 26.5 ರಷ್ಟು ಮಂದಿ ಮಧುಮೇಹದಿಂದ ಬಳಲುತ್ತಿ­ದ್ದಾರೆ. ಇದರಲ್ಲಿ ಮಹಿಳೆಯರೇ ಹೆಚ್ಚಿ­ದ್ದಾರೆ ಎಂದು ಸಮೀಕ್ಷಾ ವರದಿ ಹೇಳಿದೆ.

ನ.14 ರ ‘ವಿಶ್ವ ಮಧುಮೇಹಿ ದಿನ’ದ ಅಂಗವಾಗಿ ‘ಅಸೋಚಾಂ’ ನವ­ದೆಹಲಿ, ಮುಂಬೈ, ಬೆಂಗಳೂರು, ಕೋಲ್ಕತ್ತ, ಚೆನ್ನೈ, ಚಂಡೀಗಡ, ಅಹ್ಮದಾ­ಬಾದ್‌, ಹೈದರಾಬಾದ್‌, ಪುಣೆ, ಡೆಹ್ರಾ­ಡೂನ್‌ ನಗರಗಳಲ್ಲಿ ಈ ಸಮೀಕ್ಷೆ ನಡೆಸಿದೆ.

ದೇಶದಲ್ಲಿ 2035ರ ವೇಳೆಗೆ 12.5 ಕೋಟಿ ಮಂದಿ ಮಧುಮೇಹಿಗಳಾಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ. ಈಗಲೇ ಜೀವನಶೈಲಿ ಬದಲಾವಣೆ ಮಾಡಿ­ಕೊಳ್ಳದಿದ್ದರೆ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ವರದಿ ತಿಳಿಸಿದೆ.

ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಮಧು­ಮೇಹಿಗಳ ಸಂಖ್ಯೆ ಹೆಚ್ಚಳ ಆಗು­ತ್ತಿ­ರು­ವುದನ್ನು ವರದಿ ಗುರುತಿಸಿದೆ. 2006­ರಲ್ಲಿ 2.5 ಕೋಟಿಯಷ್ಟಿದ್ದ ಮಧು­ಮೇಹಿಗಳ ಸಂಖ್ಯೆ 2014ರಲ್ಲಿ 6.8 ಕೋಟಿಯಷ್ಟಾಗಿದೆ ಎಂದು ತಿಳಿಸಿದೆ.

ಆಹಾರದಲ್ಲಿ ಹೆಚ್ಚಾಗಿ ಬಳಸುತ್ತಿ­ರುವ ಎಣ್ಣೆ, ಬೆಣ್ಣೆ  ತುಪ್ಪದಿಂದ ಜನರಲ್ಲಿ ಬೊಜ್ಜು ಮತ್ತು ಅಧಿಕ ರಕ್ತ­ದೊತ್ತಡ ಸಮಸ್ಯೆ ಹೆಚ್ಚಾಗಿದೆ. ಇದ­ರಿಂದ, ಪುರುಷರಲ್ಲಿ ಶೇ 25 ಹಾಗೂ ಮಹಿಳೆ­ಯರಲ್ಲಿ ಶೇ 42 ರಷ್ಟು ಮಧು­ಮೇಹದ ಪ್ರಮಾಣ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

‘ಇನ್ಸುಲಿನ್‌  ಪ್ರಮಾಣ ಕಡಿಮೆ ಆಗುವ ಮಧುಮೇಹದಿಂದ ಶೇ 98 ರಷ್ಟು ಮಂದಿ ಬಳಲುತ್ತಿದ್ದಾರೆ. ಅವ­ರಲ್ಲಿ 30 ರಿಂದ 40 ವರ್ಷ­ದೊಳ­ಗಿನ­ವರು ಮಧುಮೇಹದ ಅಪಾಯಕಾರಿ ಸ್ಥಿತಿ­ಯ­ಲ್ಲಿದ್ದಾರೆ. ಅಲ್ಲದೇ, 20 ರಿಂದ 30 ವರ್ಷ­ದೊಳಗಿನ ಶೇ 28 ರಷ್ಟು  ಮಂದಿಗೆ ಮಧುಮೇಹ ಸಮಸ್ಯೆ ಕಾಣಿಸಿ­ಕೊಳ್ಳುವ ಸಾಧ್ಯತೆಯಿದೆ’ ಎಂದು ವಿವರಿಸಲಾಗಿದೆ.

‘ಮಧುಮೇಹದಿಂದ ಹೃದಯ­ರೋಗ, ಕಿಡ್ನಿ, ಕಣ್ಣು, ನರವ್ಯೂಹಗಳ ಮೇಲೆ ಪರಿಣಾಮ ಬೀರುವುದರಿಂದ, ಅದನ್ನು ತಡೆಗಟ್ಟುವ ಅಗತ್ಯವಿದೆ.  ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸ­ಬೇಕಾಗಿದೆ’ ಎಂದು ವರದಿ ಒತ್ತಿ ಹೇಳಿದೆ.

ಮಧುಮೇಹ ವಿಶ್ವವ್ಯಾಪಿ ಹರಡುವ ಕಾಯಿಲೆಯಾಗಿದ್ದು, ವಿಶ್ವದಲ್ಲಿ 2025­ರೊಳಗೆ ಈ ಕಾಯಿಲೆಯಿಂದ ಬಳಲು­ವವರ ಸಂಖ್ಯೆ 45 ಕೋಟಿಗೆ ತಲುಪಲಿದೆ ಎಂದು ವಿವರಿಸಲಾಗಿದೆ.

ಜೀವನಶೈಲಿ ಕಾರಣ: ಮಧುಮೇಹ ಸಮಸ್ಯೆ ಹೆಚ್ಚಾಗಿರುವ ಕುರಿತು ಪ್ರತಿ­ಕ್ರಿಯಿ­ಸಿದ ಕರ್ನಾಟಕ ಮಧುಮೇಹ ಸಂಸ್ಥೆಯ (ಕೆಐಡಿ) ನಿರ್ದೇಶಕ ಕೆ.ಆರ್‌.­ನರಸಿಂಹಶೆಟ್ಟಿ, ‘ಆನುವಂಶಿಕ ಮಧು­ಮೇಹ ಪ್ರಮಾಣ ಹೆಚ್ಚಾಗಿಲ್ಲ. ಆದರೆ, ಜೀವನಶೈಲಿ ಬದಲಾವಣೆಯಿಂದಲೇ ಇತ್ತೀ­ಚೆಗೆ ಮಧುಮೇಹ ಪ್ರಮಾಣ ಹೆಚ್ಚಾಗಿದೆ’ ಎಂದು ಹೇಳುತ್ತಾರೆ.

‘ಕೆಲಸದ ಒತ್ತಡ, ಬದಲಾದ ಆಹಾ­ರದ ಪದ್ಧತಿ, ಬೊಜ್ಜು, ವ್ಯಾಯಾಮ ಮಾಡದೇ ಇರುವುದು ಈ ಎಲ್ಲ ಕಾರಣ­ಗಳಿಂದ ಸಾಕಷ್ಟು ಯುವ ಜನರು ಮಧುಮೇಹ ಕಾಯಿಲೆಗೆ ಒಳಗಾಗುತ್ತಿ­ದ್ದಾರೆ’ ಎನ್ನುತ್ತಾರೆ.

‘ಸತತವಾಗಿ ಕಂಡುಬರುವ ಸುಸ್ತು, ತೂಕ ಕಳೆದುಕೊಳ್ಳುವುದು, ಅತಿಯಾದ ಬಾಯಾರಿಕೆ ಮತ್ತು ಪದೇ ಪದೇ ಮೂತ್ರ ವಿಸರ್ಜನೆಯಾಗುವುದು ಮಧು­ಮೇಹದ ಪ್ರಮುಖ ಲಕ್ಷಣಗಳು. ನಿಯ­ಮಿತ ಆಹಾರ ಸೇವನೆ, ಆರೋಗ್ಯ­ಯುತ ಜೀವನ ಶೈಲಿ ಹಾಗೂ ವೈದ್ಯಕೀಯ ತಪಾಸಣೆ­ಯಿಂದ ಮಧು­ಮೇಹ­ವನ್ನು ದೂರ­ಗೊಳಿಸ­ಬಹುದು’ ಎಂದು ಸಲಹೆ ನೀಡುತ್ತಾರೆ.

‘ವಂಶವಾಹಿ ಮತ್ತು ಬದಲಾದ ಜೀವನ ಶೈಲಿ ಸೇರಿದಂತೆ ಹಲವಾರು ಕಾರಣಗಳಿಂದ ಯುವ ಜನರಲ್ಲಿ ಮಧು­ಮೇಹ ಪ್ರಮಾಣ ಹೆಚ್ಚುತ್ತಿದೆ. ವಿಶೇಷ­­ವಾಗಿ ಈ ಕಾಯಿಲೆಯಿಂದ ಜನರಲ್ಲಿ ಸಕ್ಕರೆ ಅಂಶ ಹೆಚ್ಚಾಗುವುದು ಮಾತ್ರ­ವ­ಲ್ಲದೇ, ಹೃದಯಾ­ಘಾತ, ಕಾಲಿನ ಗಾಯ, ಮೂತ್ರನಾಳ ಸೋಂಕು, ಕಿಡ್ನಿ ವೈಫಲ್ಯ... ಹೀಗೆ ಹಲವಾರು ಸಮಸ್ಯೆ­ಗಳು ಕಂಡು­ಬರುತ್ತಿವೆ’ ಎಂದು ಹೇಳುತ್ತಾರೆ.

‘ನ.21 ರಿಂದ ಮಧುಮೇಹ:
ಅಂತರರಾಷ್ಟ್ರೀಯ ವಿಚಾರ ಸಂಕಿರಣ’

ಮಧುಮೇಹದ ಕುರಿತು ಜಾಗೃತಿ ಮೂಡಿಸಲು ನ. 21 ರಿಂದ 23 ರವರೆಗೆ ನಗರದಲ್ಲಿ ಮಧುಮೇಹದ ಕುರಿತು ವಿಚಾರ ಸಂಕಿರಣವನ್ನು ಆಯೋಜನೆ ಮಾಡಲಾಗುವುದು. ಸುಮಾರು 6,000 ತಜ್ಞರು ಭಾಗವಹಿಸಲಿದ್ದಾರೆ.

– ಡಾ. ಕೆ.ಆರ್‌.ನರಸಿಂಹ ಶೆಟ್ಟಿ, ನಿರ್ದೇಶಕ, ಕರ್ನಾಟಕ ಮಧುಮೇಹ ಸಂಸ್ಥೆ.

ಹೃದಯಾಘಾತದ ಸಾಧ್ಯತೆ ಜಾಸ್ತಿ

ಮಧುಮೇಹ ಇರುವವರಿಗೆ ಹೃದಯಾಘಾತವಾಗುವ ಸಾಧ್ಯತೆ 5 ರಷ್ಟು ಜಾಸ್ತಿ ಇರುತ್ತದೆ. ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್‌ ಅಂಶ ಹೆಚ್ಚಾಗುತ್ತದೆ. ಅಲ್ಲದೇ, ಮಧುಮೇಹಿ­ಗಳಲ್ಲಿ ಪ್ಲೇಟ್‌ಲೆಟ್‌ ರಕ್ತಕಣಗಳು ಒಂದಕ್ಕೊಂದು ಅಂಟಿ­ಕೊಳ್ಳು­ತ್ತವೆ. ಮಧುಮೇಹ ನೇರವಾಗಿ ರಕ್ತನಾಳಗಳ ಮೇಲೆ ಪರಿಣಾಮ ಬೀರುತ್ತದೆ.  ಹೃದಯ ಮತ್ತು ಮಿದುಳಿನವರೆಗೂ ಹಾದುಹೋಗುವ ರಕ್ತನಾಳಗಳಿಗೆ ಧಕ್ಕೆ ತರು­ತ್ತದೆ. ಹೃದಯದ ಒಳಭಾಗದಲ್ಲಿ ರಕ್ತನಾಳವನ್ನು ಹಿಗ್ಗಿಸುವ ಕ್ರಮ ಕಡಿಮೆಯಾಗುತ್ತದೆ.
-– ಡಾ.ಸಿ.ಎನ್.ಮಂಜುನಾಥ್, ನಿರ್ದೇಶಕ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ.

ಬೇಕು ಉತ್ತಮ ಆಹಾರ ಕ್ರಮ

ಮಧುಮೇಹವನ್ನು ದೂರವಿಡಲು, ಸೂಕ್ತ ದೇಹ ತೂಕವನ್ನು ಕಾಪಾಡಿ­ಕೊಳ್ಳ­ಬೇಕು. ಜೀವನಶೈಲಿ ಮತ್ತು ಆಹಾರ ಕ್ರಮಗಳನ್ನು ಪಾಲಿಸಬೇಕು. ಕಿಡ್ನಿಗೆ ನೆರವು ನೀಡುವ ಔಷಧಗಳನ್ನು ವೈದ್ಯರ ಸಲಹೆಯ ಮೇರೆಗೆ ಸೇವಿಸಬೇಕು. ಈ ಎಲ್ಲ ಕ್ರಮ ಅನುಸರಿಸಿದರೆ ಮಧುಮೇಹದಿಂದ ಕಿಡ್ನಿಗೆ ತಗಲುವ ದುಷ್ಪರಿ­ಣಾಮ­ಗಳ ತೀವ್ರತೆ ಕಡಿಮೆಯಾಗಿ, ಕಿಡ್ನಿ ತನ್ನ ಕಾರ್ಯಕ್ಷಮತೆಯನ್ನು ತಕ್ಕ ಮಟ್ಟಿಗೆ ಕಾಪಾಡಿಕೊಳ್ಳಬಹುದು.
– ಡಾ.ಚಂದ್ರಶೇಖರ ರಟ್ಕಲ್‌, ವಿಕ್ಟೋರಿಯಾ ಆಸ್ಪತ್ರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT