‘ಭಾರತ್ ಬಂದ್’: ಸಂಘಟನೆಗಳ ಬೆಂಬಲ

7
ಕಾರ್ಖಾನೆಗಳು ಸ್ಥಗಿತ ಸಾಧ್ಯತೆ: ಸಾರ್ವಜನಿಕ ಸೇವೆಯೂ ವ್ಯತ್ಯಯ

‘ಭಾರತ್ ಬಂದ್’: ಸಂಘಟನೆಗಳ ಬೆಂಬಲ

Published:
Updated:

ರಾಮನಗರ: ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು ಇದೇ 8 ಹಾಗೂ 9ರಂದು ದೇಶವ್ಯಾಪಿ ಬಂದ್ ಕರೆ ನೀಡಿದೆ. ಜಿಲ್ಲೆಯ ಕೆಲವು ಸಂಘಟನೆಗಳು ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ವಿವಿಧ ಸೇವೆಗಳು ವ್ಯತ್ಯಯವಾಗುವ ಸಾಧ್ಯತೆ ಇದೆ.

ಬಿಡದಿ- ಹಾರೋಹಳ್ಳಿ ಕೈಗಾರಿಕೆಗಳ ನೌಕರರು ಬಂದ್‌ ಕರೆಗೆ ಒಗೂಟ್ಟಿದ್ದು, ಇಲ್ಲಿನ ಕಾರ್ಖಾನೆಗಳು ಎರಡು ದಿನ ಕಾಲ ಸ್ತಬ್ಧವಾಗುವ ಸಾಧ್ಯತೆ ಇದೆ. ಕರ್ನಾಟಕ ರಾಜ್ಯ ರೈತ ಸಂಘ, ಅಂಗನವಾಡಿ ನೌಕರರು, ಕೆಎಸ್‌ಆರ್‌ಟಿಸಿ ನೌಕಕರ ಸಂಘ, ಆಟೊ, ಕಾರು ಚಾಲಕ ಸಂಘಟನೆಗಳೂ ಬಂದ್‌ಗೆ ಬೆಂಬಲ ಸೂಚಿಸಿವೆ.

ಏನೇನು ವ್ಯತ್ಯಯ: ಕೆಎಸ್‌ಆರ್‌ಟಿಸಿ ನೌಕರರ ಸಂಘಟನೆಗಳು ಬಂದ್ ಬೆಂಬಲಿಸಿದ್ದು, ಸರ್ಕಾರಿ ಬಸ್‌ಗಳು ರಸ್ತೆಗೆ ಇಳಿಯುವ ಸಾಧ್ಯತೆ ಕಡಿಮೆ. ಮೋಟಾರು ವಾಹನ ತಿದ್ದುಪಡಿ ಮಸೂದೆ ವಿರೋಧಿಸಿ ಬಂದ್ ನಡೆದಿದ್ದು, ಖಾಸಗಿ ಬಸ್‌ಗಳ ಸಂಚಾರವೂ ಅನುಮಾನವಾಗಿದೆ. ಇದಲ್ಲದೆ ಲಾರಿ, ಟ್ರಕ್‌ಗಳೂ ಸಂಚಾರ ಸ್ಥಗಿತಗೊಳಿಸಲಿವೆ.

‘ಸರ್ಕಾರಿ ಬಸ್ ಸೇವೆ ಎಂದಿನಂತೆಯೇ ಆರಂಭಗೊಳ್ಳಲಿದೆ. ಪರಿಸ್ಥಿತಿ ನೋಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಕೆಎಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದರು.

ಆಟೊ ಚಾಲಕರೂ ಬಂದ್ ಬೆಂಲಿಸಿದ್ದು, ವಾಹನಗಳು ರಸ್ತೆಗೆ ಇಳಿಯುವುದು ಅನುಮಾನವಾಗಿದೆ. ಕೆಲವು ವರ್ತಕರು ಸ್ವಯಂ ಪ್ರೇರಿತರಾಗಿ ಬಂದ್‌ಗೆ ಬೆಂಬಲ ಸೂಚಿಸಿ, ಅಂಗಡಿ ಮುಚ್ಚಲು ನಿರ್ಧರಿಸಿದ್ದಾರೆ. ಕಾರ್ಮಿಕ ಮುಖಂಡರು ಅಂಗಡಿ–ಮುಂಗಟ್ಟುಗಳಿಗೆ ಭೇಟಿ ಕೊಟ್ಟು ಬಂದ್‌ಗೆ ಬೆಂಬಲ ಕೋರಲು ಯೋಜಿಸಿದ್ದಾರೆ.

ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆಯಾದರೂ ಬಂದ್‌ ಬಿಸಿ ಹೆಚ್ಚಿದಲ್ಲಿ ತೊಂದರೆ ಆಗಲಿದೆ. ಆಸ್ಪತ್ರೆಗಳು, ಔಷಧ ಅಂಗಡಿಗಳು, ಎಪಿಎಂಸಿ, ರೇಷ್ಮೆ ಮಾರುಕಟ್ಟೆ, ಹಣ್ಣು–ತರಕಾರಿ ಮಳಿಗೆಗಳು ಸೇರಿದಂತೆ ಅಗತ್ಯ ಸೇವೆಗಳಿಗೆ ಯಾವುದೇ ಅಡ್ಡಿ ಇರುವುದಿಲ್ಲ. ರೈಲುಗಳ ಸಂಚಾರವು ಎಂದಿನಂತೆ ಇರಲಿದೆ.

ಮೆರವಣಿಗೆ: ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ 9ರ ಸುಮಾರಿಗೆ ಬಿಡದಿಯ ಕಾಡುಮನೆಯಿಂದ ಬೈಕ್‌ ರ‍್ಯಾಲಿ ಆರಂಭಗೊಳ್ಳಲಿದೆ. ಬಳಿಕ ಕಾರ್ಖಾನೆಗಳಿಗೆ ಭೇಟಿ ಕೊಟ್ಟು ಬಂದ್‌ ಬೆಂಬಲಕ್ಕೆ ಮನವಿ ಮಾಡಲಿದ್ದಾರೆ. ಬಿಡದಿ ಚೌಕಿಮಠದ ಆವರಣದಲ್ಲಿ ಬಹಿರಂಗ ಸಮಾವೇಶ ನಡೆಯಲಿದೆ. ಮಧ್ಯಾಹ್ನ ರಾಮನಗರದಲ್ಲಿಯೂ ಮೆರವಣಿಗೆ, ಸಮಾವೇಶ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !