ಶಿವಮೊಗ್ಗ: ದಿನವಿಡೀ ತೆರೆದಿದ್ದ ಪೆಟ್ರೋಲ್ ಬಂಕ್‌ಗಳು, ಮುಖ್ಯ ಉದ್ದೇಶವೇ ವಿಫಲ

7
ಬಂದ್‌ಗೆ ಮಿಶ್ರ ಪ್ರತಿಕ್ರಿಯೆ, ರಸ್ತೆಗಿಳಿಯದ ಬಸ್‌ಗಳು

ಶಿವಮೊಗ್ಗ: ದಿನವಿಡೀ ತೆರೆದಿದ್ದ ಪೆಟ್ರೋಲ್ ಬಂಕ್‌ಗಳು, ಮುಖ್ಯ ಉದ್ದೇಶವೇ ವಿಫಲ

Published:
Updated:
Deccan Herald

ಶಿವಮೊಗ್ಗ: ಪೆಟ್ರೋಲ್, ಡೀಸೆಲ್‌, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕರೆ ನೀಡಿದ್ದ ಭಾರತ್‌ ಬಂದ್‌ಗೆ ಜಿಲ್ಲೆಯಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು, ನಗರ ಸಾರಿಗೆ ಬಸ್‌ಗಳು ಮುಂಜಾವಿನಿಂದಲೇ ರಸ್ತೆಗೆ ಇಳಿಯಲಿಲ್ಲ. ಆಟೊರಿಕ್ಷಾಗಳು, ಕಾರು, ದ್ವಿಚಕ್ರ ವಾಹನಗಳು ಎಂದಿನಂತೆ ರಸ್ತೆಗೆ ಇಳಿದಿದ್ದವು. ಮುಖ್ಯಬಸ್‌ ನಿಲ್ದಾಣ, ಬಿ.ಎಚ್. ರಸ್ತೆ, ನೆಹರು ರಸ್ತೆ ಹೊರತುಪಡಿಸಿದರೆ ನಗರದ ಬಹುತೇಕ ಭಾಗಗಳಲ್ಲಿ ಅಂಗಡಿ ಮುಂಗಟ್ಟುಗಳು ನಿತ್ಯದಂತೆ ಕಾರ್ಯನಿರ್ವಹಿಸಿದರು.

ಮುಂಜಾಗ್ರತಾ ಕ್ರಮವಾಗಿ ಶಾಲಾ–ಕಾಲೇಜುಗಳಿಗೆ ಹಿಂದಿನ ರಾತ್ರಿಯೇ ಜಿಲ್ಲಾಡಳಿತ ರಜೆ ಘೋಷಿಸಿದ್ದ ಕಾರಣ ಶಾಲಾ ಬಸ್‌ಗಳು ತಂಗುದಾಣ ಬಿಟ್ಟು ಕದಲಿಲ್ಲ. ಖಾಸಗಿ, ಅನುದಾನಿ, ಸರ್ಕಾರಿ ಶಾಲಾ–ಕಾಲೇಜುಗಳು ಬಾಗಿಲು ಮುಚ್ಚಿದ್ದವು. ಸರ್ಕಾರಿ ಕಚೇರಿಗಳು ಬಾಗಿಲು ತೆರೆದಿದ್ದರೂ ಸಾರ್ವಜನಿಕರು ಅತ್ತ ಸುಳಿಯಲಿಲ್ಲ. ಬ್ಯಾಂಕಿಂಗ್ ವಹಿವಾಟು ಕ್ಷೀಣಿಸಿತ್ತು. ಹಲವೆಡೆ ವಾಣಿಜ್ಯ ಮಳಿಗೆಗಳು ಬಾಗಿಲು ತೆರೆದಿದ್ದರೂ ವ್ಯಾಪಾರ ಇರಲಿಲ್ಲ.

ಚಿತ್ರಮಂದಿರಗಳು ಬಾಗಿಲು ಮುಚ್ಚಿದ್ದವು. ಹೊರ ಊರುಗಳಿಂದ ಬಂದಿದ್ದ ಪ್ರಯಾಣಿಕರು ಬಸ್‌ಗಳಿಲ್ಲದೇ ಪರದಾಡಿದರು. ಪ್ರಮುಖ ಬಸ್‌ನಿಲ್ದಾಣಗಳು ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದ್ದವು. ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಶಾಪ್, ಪೆಟ್ರೋಲ್ ಬಂಕ್, ಹಾಲಿನ ಕೇಂದ್ರಗಳ ಕಾರ್ಯ ನಿರ್ವಹಣೆಗೆ ಅಡ್ಡಿಯಾಗಲಿಲ್ಲ.

ಮುಖ್ಯ ಉದ್ದೇಶವೇ ವಿಫಲ

ಕಾಂಗ್ರೆಸ್‌ ಬಂದ್‌ಗೆ ಕರೆ ನಿಡಿದ ಪ್ರಮುಖ ಉದ್ದೇಶವೇ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ. ನಗರದ ಬಹುತೇಕ ಪೆಟ್ರೋಲ್ ಬಂಕ್‌ಗಳು ಬಾಗಿಲು ತೆರೆದಿದ್ದವು. ವಾಹನಗಳು ಸಾಲುಗಟ್ಟಿ ಇಂಧನ ತುಂಬಿಸಿಕೊಂಡವು. ಇದು ಬಂದ್‌ ವೈಫಲ್ಯಕ್ಕೆ ಕನ್ನಡಿಯಾಗಿತ್ತು.

ಕಾಂಗ್ರೆಸ್ ಪ್ರತಿಭಟನಾ ಜಾಥಾ

ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ರಾಮಣ್ಣಶ್ರೇಷ್ಟಿ ಪಾರ್ಕ್‌ನಿಂದ ಬೆಳಿಗ್ಗೆ 10ಕ್ಕೆ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ಗಾಂಧಿ ಬಜಾರ್, ಅಮೀರ್ ಅಹಮದ್ ವೃತ್ತ, ನೆಹರು ರಸ್ತೆ, ಗೋಪಿವೃತ್ತ,  ಬಾಲರಾಜ ಅರಸು ರಸ್ತೆ, ಮಹಾವೀರ ವೃತ್ತದ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿದರು. ಎತ್ತಿನ ಗಾಡಿಗಳ ಜತೆ, ಬೈಕ್‌ ರ‍್ಯಾಲಿ ಮೂಲಕವೂ ಪ್ರತಿಭಟನೆ ನಡೆಸಲಾಯಿತು. 

ಅಗತ್ಯ ವಸ್ತುಗಳ ಬೆಲೆ ಹೆಚ್ಚಳದ ಪರಿಣಾಮ ಜನ ಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಲೆ ಏರಿಕೆ ತಡೆಯುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಅಚ್ಚೇ ದಿನ ಬರುತ್ತದೆ ಎಂದು ನಂಬಿಸಿ ಜನರಿಗೆ ದ್ರೋಹ ಬಗೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೆಟ್ರೋಲ್ ಮೇಲಿನ ತೆರಿಗೆ 12 ಬಾರಿ ಏರಿಕೆ ಮಾಡಲಾಗಿದೆ. 2014ರಲ್ಲಿ ಪ್ರತಿ ಲೀಟರ್‌ಗೆ ₨ 9.2 ಇದ್ದ ತೆರಿಗೆ ₨ 19.48 ಹೆಚ್ಚಳ ಮಾಡಲಾಗಿದೆ. 2014ರಲ್ಲಿ ಡೀಸೆಲ್ ಮೇಲಿನ ಅಬಕಾರಿ ₨ 3.46 ಇತ್ತು. ಈಗ ₨ 15.33ಕ್ಕೆ ಏರಿಕೆಯಾಗಿದೆ. ಅಡುಗೆ ಅನಿಲ ಸಿಲಿಂಡರ್ ಬೆಲೆ ₨ 414 ಇತ್ತು. ಈಗ ₨ 860 ತಲುಪಿದೆ. ಕೇಂದ್ರ ಜನಸಾಮಾನ್ಯರ ಮೇಲೆ ಬರೆ ಎಳೆಯುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ತೀ.ನಾ. ಶ್ರೀನಿವಾಸ್, ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರಪ್ಪ, ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಕೆಪಿಸಿಸಿ ಕಾರ್ಯದರ್ಶಿ ಕೆ. ದೇವೆಂದ್ರಪ್ಪ, ‘ಕಾಡಾ’ ಮಾಜಿ ಅಧ್ಯಕ್ಷರಾದ ಎಚ್.ಎಸ್. ಸುಂದರೇಶ್, ಇಸ್ಮಾಯಿಲ್ ಖಾನ್, ಬಲ್ಕಿಶ್ ಬಾನು, ಮಾಧ್ಯಮ ವಕ್ತಾರ ಸಿ.ಎಸ್. ಚಂದ್ರಭೂಪಾಲ, ಪಾಲಿಕೆ ವಿಶ್ವನಾಥ್ ಕಾಶಿ, ವಿಜಯಲಕ್ಷ್ಮೀ ಪಾಟೀಲ್, ಎಲ್. ರಾಮೇಗೌಡ, ದೀಪಕ್‌ಸಿಂಗ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಕಾಂಗ್ರೆಸ್ ಕರೆ ನೀಡಿದ್ದ ಬಂದ್‌ಗೆ ಜೆಡಿಎಸ್, ಕೆಲವು ಕನ್ನಡಪರ ಸಂಘಟನೆಗಳು, ಆಟೊ ಮಾಲೀಕರು ಹಾಗೂ ಚಾಲಕರ ಸಂಘ, ಖಾಸಗಿ ಬಸ್ ಮಾಲೀಕರ ಸಂಘ, ಲಾರಿ ಮಾಲೀಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ನೀಡಿದ್ದವು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !