ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದರ ಸಾಂಸ್ಕೃತಿಕ ಭವನಕ್ಕೆ 18 ಗುಂಟೆ ಜಾಗ

ರಾಜ್ಯಮಟ್ಟದ ತತ್ವಪದಕಾರರ ಸಮಾವೇಶದಲ್ಲಿ ಜಿಲ್ಲಾಧಿಕಾರಿ ಗೋವಿಂದ ರಡ್ಡಿ ಭರವಸೆ
Last Updated 7 ಫೆಬ್ರುವರಿ 2023, 16:28 IST
ಅಕ್ಷರ ಗಾತ್ರ

ಬೀದರ್: ‘;ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ಉತ್ಸವ, ಸಮ್ಮೇಳನ ಹಾಗೂ ಸಮಾವೇಶಗಳಿಗಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಜಿಲ್ಲೆಗೆ ಬರುವ ಕಲಾವಿದರಿಗೆ ಉಳಿದುಕೊಳ್ಳಲು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಒಂದು ಸಾಂಸ್ಕೃತಿಕ ಭವನದ ಅವಶ್ಯಕತೆ ಇದೆ. ಇದಕ್ಕೆ 18 ಗುಂಟೆ ಜಮೀನು ಮಂಜೂರು ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಗೋವಿಂದ ರಡ್ಡಿ ಭರವಸೆ ನೀಡಿದರು.

ಜಾನಪದ ಕಲಾವಿದರ ಬಳಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ತತ್ವಪದಕಾರರ ಸಮಾವೇಶ, ಹಿರಿಯ ಕಲಾವಿದರ ಸನ್ಮಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಬೀಳ್ಕೊಡುಗೆ ಹಾಗೂ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ಬೀದರ್ ಶರಣರ, ಸಂತರ, ಮಹಾತ್ಮರ ಪುಣ್ಯಭೂಮಿಯಾಗಿದೆ. ಇಲ್ಲಿ ವಚನಸಾಹಿತ್ಯ, ಜನಪದ, ಸಾಹಿತ್ಯ ಹಾಗೂ ತತ್ವಪದಗಳ ಸಮಾವೇಶಗಳು ಜರುಗುತ್ತಿರುವುದು ಶ್ಲಾಘನೀಯ. ಸ್ಥಳೀಯ ಹಲವು ಸಂಘ-ಸಂಸ್ಥೆಗಳು ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ತಿಳಿಸಿದರು.

‘ಪ್ರತಿಯೊಬ್ಬರೂ ಕಲೆಯನ್ನು ಪೂಜಿಸಬೇಕು. ಆರಾಧಿಸಬೇಕು. ಪ್ರೋತ್ಸಾಹಿಸಬೇಕು. ಕಲೆಗೆ ಮತ್ತು ಕಲಾವಿದರಿಗೆ ಜಿಲ್ಲಾಡಳಿತ ಸಹಾಯ ಸಹಕಾರ ನೀಡಲು ಸಿದ್ಧವಿದೆ’ ಎಂದು ಹೇಳಿದರು.

ಜಾನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ಮಾತನಾಡಿ, ’ತತ್ವಪದಕಾರರ ಸಮಾವೇಶ ಮಾಡುವುದು ನನ್ನ ಬಹುದಿನಗಳ ಕನಸಾಗಿತ್ತು. ಆಧುನಿಕತೆಯ ಪ್ರಭಾವದಿಂದ ತತ್ವಪದಗಳ ಅಳಿವಿನ ಅಂಚಿನಲ್ಲಿವೆ. ಅವುಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಸಮಾವೇಶದ ಉದ್ದೇಶವಾಗಿದೆ’ ಎಂದು ಹೇಳಿದರು.

‘ಜನಪದ ಕಲಾವಿದರು ಜಿಲ್ಲೆಗೆ ವಿವಿಧ ಉತ್ಸವಗಳಿಗೆ ಬಂದಾಗ ವಸತಿಗಾಗಿ ಸಾಕಷ್ಟು ತೊಂದರೆಯಾಗುತಿತ್ತು. ಬೀದರ್ ಉತ್ಸವದ ಸಂದರ್ಭದಲ್ಲಿ ಕಲಾವಿದರು ಖಾಸಗಿ ಕಲ್ಯಾಣ ಮಂಟಪದ ಹೊರಗಡೆ ಚಳಿಯೂ ಲೆಕ್ಕಿಸದೇ ಮಲಗಿದ್ದನ್ನು ಕಂಡು ನನ್ನ ಹೃದಯ ಮಿಡಿಯಿತು. ಹೀಗಾಗಿ ಅಂದೇ ಕಲಾವಿದರ ವಸತಿಗಾಗಿ ಹಾಗೂ ಸಾಂಸ್ಕೃತಿಕ ಚಟುವಟಿಕೆ ನಡೆಸಲು ಜಿಲ್ಲಾಡಳಿತ ವತಿಯಿಂದ 18 ಗುಂಟೆ ಜಮೀನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೆ. ಕಲಾವಿದರ ಮನವಿಗೆ ಸ್ಪಂದಿಸಿ ಜಮೀನು ಮಂಜೂರು ಮಾಡಿದೆ. ಪತ್ರ ವ್ಯವಹಾರಗಳು ಪೂರ್ಣಗೊಳ್ಳಬೇಕಿದೆ’ ಎಂದು ತಿಳಿಸಿದರು.

ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ‘ತತ್ವಪದಗಳು ಬದುಕಿನ ಚಿಂತನೆಯ ಸಂದೇಶಗಳಾಗಿವೆ. ಈ ಪದಗಳು ಮನುಷ್ಯನಿಗೆ ಶಿಸ್ತು, ಸಂಯಮ ಮತ್ತು ಸಂಸ್ಕಾರ ಕಲಿಸಿಕೊಡುವಲ್ಲಿ ಗುರುವಿನ ಸ್ಥಾನದಲ್ಲಿ ನಿಲ್ಲುತ್ತವೆ’ ಎಂದರು.

‌ಡಾ.ಎಸ್.ಎಸ್.ಸಿದ್ದಾರೆಡ್ಡಿ ಫೌಂಡೇಶನ್ ಅಧ್ಯಕ್ಷೆ ಗುರಮ್ಮ ಸಿದ್ದಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕಲಾವಿದರಾದ ದಿಲೀಪ ಕಾಡವಾದ, ರಮೇಶ ಕೊಳಾರ ಹಾಗೂ ಶಿವಕುಮಾರ ಪಾಂಚಾಳ ನಾಡಗೀತೆ ಹಾಗೂ ಪ್ರಾರ್ಥನೆ ಗೀತೆ ಹಾಡಿದರು.

ಬೆಂಗಳೂರಿಗೆ ವರ್ಗಾವಣೆಯಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಹಾಗೂ ಬೀದರ್ ಪ್ರಭಾರ ವಹಿಸಿಕೊಂಡ ಡಾ. ಗೌತಮ ಅರಳಿ ಅವರನ್ನು ಸನ್ಮಾನಿಸಲಾಯಿತು. ಹಾಗೂ ಕಲಖೋರ ತಾಂಡಾದ ಭಾರತಿಬಾಯಿ ರಾಠೋಡ್ ಅವರನ್ನು ಸನ್ಮಾನಿಸಲಾಯಿತು.
ಬೆಂಗಳೂರಿನ ಕರ್ನಾಟಕ ಯುವ ಸಂಘ-ಸಂಸ್ಥೆಗಳ ರಾಜ್ಯಾಧ್ಯಕ್ಷ ಶಿವಕುಮಾರ ಹೊಸಹಟ್ಟಿ, ರಾಜ್ಯ ಕಾರ್ಯದರ್ಶಿ ಫಣೀಂದ್ರ ಪ್ರಸಾದ್ ಇದ್ದರು. ಸುನೀಲ ಕಡ್ಡೆ, ಯೇಸುದಾಸ್ ಅಲಿಯಂಬರೆ, ಪಾರ್ವತಿ ಸೋನಾರೆ, ರೇಖಾ ಅಪ್ಪಾರಾವ್ ಸೌದಿ, ಎಸ್.ವಿ.ಕಲ್ಮಠ, ಬಾಬುರಾವ್ ದಾನಿ ಇದ್ದರು.

ತತ್ವಪದಗಳ ಗಾಯನ:

ಕಲಾವಿದರಾದ ರಾಯಚೂರಿನ ಶರಣಪ್ಪ ಗೋನಾಳ, ಜಂಬಣ್ಣ ಹಸಮಕಲ್, ನಾರಾಯಣಪ್ಪ ಮಾಡಸಿರವಾರ, ರಾಮನಗರದ ತೂಬಿನಕೆರೆ ರಂಗಸ್ವಾಮಯ್ಯ, ಮಂಡ್ಯದ ಚಂದ್ರಶೇಖರ ಗೋರವಾಲೆ, ಬೆಳಗಾವಿಯ ಫಕೀರಪ್ಪ ಬಡಿಗೇರ, ಬೀದರ್‌ನ ಸುಶೀಲಮ್ಮ ಚಿಟ್ಟಾ, ಮಾರುತಿ ಝರೆಪ್ಪ ಹಾಗೂ ಅಮೃತಪ್ಪ ಔರಾದಕರ್ ತತ್ವಪದಗಳನ್ನು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT