ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್ | ಬತ್ತಿದ ಕೊಳವೆ ಬಾವಿ: ಒಣಗಿದ 4 ಎಕರೆ ಕಬ್ಬು

Published 14 ಮೇ 2024, 15:37 IST
Last Updated 14 ಮೇ 2024, 15:37 IST
ಅಕ್ಷರ ಗಾತ್ರ

ಔರಾದ್: ನೀರಾವರಿ ಮಾಡಿಕೊಂಡು ಉಪಜೀವನ ನಡೆಸುತ್ತಿರುವ ತಾಲ್ಲೂಕಿನ ನಾಗೂರ (ಬಿ) ರೈತ ಮಾರುತಿ ಖಂಡೆ ಅವರಿಗೆ ಈಗ ಸಂಕಷ್ಟ ಬಂದೊದಗಿದೆ.

ಇವರ ಹೊಲದಲ್ಲಿನ ಎರಡೂ ಕೊಳವೆ ಬಾವಿಯಲ್ಲಿನ ನೀರು ಬುರುವುದು ಏಕಾ ಏಕಿ ನಿಂತು ಹೋಗಿದೆ. ಹೀಗಾಗಿ ಬೆಳೆದು ನಿಂತ 4 ಎಕರೆ ಕಬ್ಬಿಗೆ ನೀರು ಹಾಕಲು ಆಗದೆ ಆತಂಕದ ಸ್ಥಿತಿಯಲ್ಲಿದ್ದಾರೆ.

‘ಮೊದಲು ನಮ್ಮಲ್ಲಿ ಒಂದು ಕೊಳವೆ ಬಾವಿ ಇತ್ತು. ಅದರಿಂದ ಎರಡು ಎಕರೆ ಕಬ್ಬು ನಾಟಿ ಮಾಡಿ ಉಪಜೀವನ ನಡೆಸುತ್ತಿದ್ದೆವು. ಮಕ್ಕಳ ಓದಿಗೆ ಒಂದಿಷ್ಟು ಅನುಕೂಲವಾಗಲೆಂದು ಕಳೆದ ವರ್ಷ ಮತ್ತೊಂದು ಕೊಳವೆ ಬಾವಿ ಕೊರೆದು ಒಟ್ಟು 4 ಎಕರೆ ಕಬ್ಬು ನಾಟಿ ಮಾಡಿದ್ದೇವೆ. ಆದರೆ ಕಳೆದ ಒಂದು ತಿಂಗಳ ಹಿಂದೆ ಎರಡೂ ಕೊಳವೆ ಬಾವಿ ಕೈಕೊಟ್ಟಿರುವುದರಿಂದ ಈಗ ಏನು ಮಾಡಬೇಕು ಎಂಬ ಚಿಂತೆಯಲ್ಲಿದ್ದೇವೆ’ ಎಂದು ರೈತ ಮಾರುತಿ ಖಂಡೆ ಕಳವಳ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಎರಡು ಎಕರೆಯಲ್ಲಿ 150 ಟನ್ ಕಬ್ಬಿನ ಇಳುವರಿ ಬಂದಿತ್ತು. ಈ ಬಾರಿ 300 ಟನ್ ಇಳುವರಿ ನಿರೀಕ್ಷೆಯಲ್ಲಿದ್ದ ನಮಗೆ ಅಘಾತ ನೀಡಿದೆ. ನೀರು ಖರೀದಿ ಮಾಡಿ ಹಾಕಬೇಕೆಂದರೆ ಅಕ್ಕ-ಪಕ್ಕದವರ ಬಾವಿಗಳು ಬತ್ತಿವೆ. ಹೀಗಾಗಿ ಈ ಬಾರಿ ನಮಗೆ ಸುಮಾರು ₹ 6 ಲಕ್ಷಕ್ಕೂ ಜಾಸ್ತಿ ಹಾನಿಯಾಗಿದೆ’ ಎಂದು ರೈತ ಖಂಡೆ ತಿಳಿಸಿದ್ದಾರೆ.

‘ಕಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿದ್ದಲ್ಲಿ ಈ ಬಾರಿ ಮಳೆ ಬಹಳ ಕಡಿಮೆಯಾಗಿದೆ. ನಮ್ಮ ಊರಿನ ಪಕ್ಕದಲ್ಲಿರುವ ಮಸ್ಕಲ್ ಕರೆ ಬತ್ತಿರುವುದರಿಂದ ನಮ್ಮ ಊರಿಗೆ ದೊಡ್ಡ ನೀರಿನ ಕೊರತೆ ಎದುರಾಗಿದೆ. ಕುಡಿಯುವ ನೀರು ಪೂರೈಕೆ ಸೇರಿದಂತೆ ಅನೇಕ ರೈತರ ಕೊಳವೆ ಬಾವಿಗೂ ಕಂಟಕ ಎದುರಾಗಿದೆ. ಈ ವರ್ಷದ ಬೇಸಿಗೆ ಬೆಳೆ ಪೂರ್ಣ ಪ್ರಮಾಣದಲ್ಲಿ ಒಣಗಿ ಹೋಗಿವೆ’ ಎಂದು ನಾಗೂರ ರೈತ ಸಂತೋಷ ಮಸ್ಕಲೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT