ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಟಗುಪ್ಪ | ದಶಕದ ನಂತರ ನಿರ್ಣಾದಲ್ಲಿ ಭತ್ತ ನಾಟಿ ಆರಂಭ

ಉತ್ತಮ ಮುಂಗಾರು ಮಳೆ: ರೈತರಲ್ಲಿ ಹರ್ಷ
ವೀರೇಶ್.ಎನ್.ಮಠಪತಿ
Published 8 ಜುಲೈ 2024, 5:27 IST
Last Updated 8 ಜುಲೈ 2024, 5:27 IST
ಅಕ್ಷರ ಗಾತ್ರ

ಚಿಟಗುಪ್ಪ: ತಾಲ್ಲೂಕಿನ ನಿರ್ಣಾ ಗ್ರಾಮದ ರೈತರಲ್ಲಿ ಈ ವರ್ಷದ ಮುಂಗಾರು ಮಳೆ ಹರ್ಷ ತಂದಿದೆ. ಹವಾಮಾನ ವೈಪರಿತ್ಯ, ಸಕಾಲಕ್ಕೆ ಬಾರದ ಮಳೆಯಿಂದ ಬೇಸತ್ತ ರೈತರು ದಶಕಗಳಿಂದ ಭತ್ತ ನಾಟಿ ಮಾಡುವುದನ್ನೆ ನಿಲ್ಲಿಸಿದ್ದರು.

ಕಲ್ಯಾಣ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದ ಜನ ಮದುವೆ, ಶುಭ ಕಾರ್ಯ, ಸಭೆ ಸಮಾರಂಭಗಳಿಗೆ ಇಲ್ಲಿಗೆ ಬಂದು ಭತ್ತ ಖರಿದಿಸುತ್ತಿದ್ದ ಕಾಲವೊಂದಿತ್ತು. ಆದರೆ ಭತ್ತದ ಬೆಳೆಗೆ ಬೇಕಾಗುವಷ್ಟು ಮಳೆ ಆಗದಕ್ಕೆ ಕಳೆದ 10-12 ವರ್ಷಗಳಿಂದ ಗ್ರಾಮದ ರೈತರು ಭತ್ತ ನಾಟಿ ಮಾಡುವ ಸಾಹಸಕ್ಕೆ ಮುಂದಾಗಿರಲಿಲ್ಲ, ಈ ವರ್ಷದ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಉತ್ತಮವಾಗಿ ಬರುತ್ತಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಭತ್ತ ನಾಟಿ ಕಾರ್ಯ ಭರದಿಂದ ಸಾಗಿದೆ.

ಭತ್ತ ನಾಟಿ ಮಾಡಲು ಬೀಜ ಹಾಕಿದ್ದು ಸಸಿಗಳು ಫಲವತ್ತಾಗಿ ಬೆಳೆದಿವೆ, ಹೀಗಾಗಿ ಬಹುತೇಕ ರೈತರು ನಾಟಿ ಕಾರ್ಯ ಆರಂಭಿಸಿದ್ದಾರೆ.

‘ಹಲವು ವರ್ಷಗಳಿಂದ ಭತ್ತದ ಬೆಳೆಯಿಂದ ವಂಚಿತರಾಗಿದ್ದ ನಮಗೆ ಈ ಹಂಗಾಮಿನಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಒಳ್ಳೆಯ ಫಸಲು ಪಡೆಯುವ ನಿಟ್ಟಿನಲ್ಲಿ ಭೂತಾಯಿಯನ್ನು ನಂಬಿ ಭತ್ತ ನಾಟಿಗೆ ಅಣಿಯಾಗಿದ್ದೆವೆʼ ಎಂದು ಗ್ರಾಮದ ರೈತ ರಾಮಪ್ಪ ‘ಪ್ರಜಾವಾಣಿʼಗೆ ತಿಳಿಸಿದರು.

‘ಭತ್ತ ನಾಟಿ ಮಾಡಲು ಕೃಷಿ ಕಾರ್ಮಿಕರ ಕೂಲಿ ಹೆಚ್ಚಾಗಿದೆ, ಕೇವಲ ಮಳೆಯನ್ನು ಆಧಾರವಾಗಿಟ್ಟುಕೊಂಡು ಮುಂದಿನ ಫಸಲು ಬರುವವರೆಗಿನ ಸವಾಲುಗಳು ಎದುರಿಸಲು ಗಟ್ಟಿ ನಿರ್ಧಾರ ಮಾಡಿ ನಾಟಿ ಕಾರ್ಯ ಆರಂಭಿಸಲಾಗಿದೆ’ ಎಂದು ರೈತ ಮಲ್ಲಪ್ಪ ನುಡಿಯುತ್ತಾರೆ.

ರಸಗೊಬ್ಬರ, ಕ್ರಿಮಿನಾಶಕ ಔಷಧಿಗಳ ಬೆಲೆಯೂ ಹೆಚ್ಚಾಗಿದೆ, ಫಸಲು ಬಂದ ಮೇಲೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಲಭಿಸಿದಾಗ ಮಾತ್ರ ಭತ್ತ ಬೆಳೆದ ರೈತರ ಬದುಕು ಹಸನಾಗುತ್ತದೆ. ದಶಕದ ಕನಸು ನನಸಾಗುತ್ತದೆ, ಮತ್ತೆ ದೂರ ದೂರದ ಜನ ಗ್ರಾಮಕ್ಕೆ ಬಂದು ಭತ್ತ ಖರಿದಿಸುತ್ತಾರೆ.

ನಾಟಿ ಮಾಡಿದ ಭತ್ತದ ಫಸಲು ರೈತರ ಕೈಗೆ ಬರಲು ಕೊನೆಯವರೆಗೂ ಮಳೆರಾಯನ ಕೃಪೆ ಹಿಗೆಯೇ ಇರಬೇಕಾಗುತ್ತದೆ. ಹೀಗಾಗಿ ಭತ್ತದ ಬೆಳೆ ಬಿಸಿ ತುಪ್ಪದಂತಿದೆ.
ಸುಭಾಷ ಕುಂಬಾರ್‌, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT