ಏಡ್ಸ್ ರೋಗವನ್ನು ದೂರವಿಡಿ, ರೋಗಿಯನ್ನಲ್ಲ

ಬೀದರ್: ‘ಅಪರಿಚಿತ ವ್ಯಕ್ತಿಯೊಂದಿಗಿನ ಅನೈತಿಕ ಸಂಬಂಧ ಅನೇಕ ಬಗೆಯ ಸಮಸ್ಯೆಗಳಿಗೆ ಸಿಲುಕುವಂತೆ ಮಾಡುತ್ತದೆ. ಎಚ್ಚರಿಕೆಯಿಂದ ಮಾತ್ರ ಎಚ್‌ಐವಿ ಸೋಂಕಿನಿಂದ ದೂರವಿರಲು ಸಾಧ್ಯ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮ ಟಿ.ಪಿ ಹೇಳಿದರು.
ನಗರದ ಬ್ರಿಮ್ಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಮಾಜದಲ್ಲಿ ಏಡ್ಸ್ ರೋಗ ಪೀಡಿತರನ್ನು ಕನಿಷ್ಠವಾಗಿ ನೋಡುವ ವಾತಾವರಣ ನಿರ್ಮಾಣವಾಗಿದೆ. ನಮ್ಮ ಪರಿಸರದಲ್ಲಿ ಎಚ್‌ಐವಿ ಸೋಂಕಿತರು ಕಂಡು ಬಂದರೆ ಅವರನ್ನು ಕಡೆಗಣನೆಯ ದೃಷ್ಟಿಯಿಂದ ನೋಡಬಾರದು. ರೋಗ ನಿವಾರಣೆಗೆ ಸಹಕರಿಸುವ ಮನೋಭಾವ ಹೊಂದಬೇಕು’ ಎಂದು ತಿಳಿಸಿದರು.
ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ವಿಜಯಕುಮಾರ ಅಂತಪ್ಪನೋರ ಮಾತನಾಡಿ, ‘ಎಚ್ಐವಿ ಸೋಂಕಿತರು ಸಮೀಪದ ಆರೋಗ್ಯ ಕೇಂದ್ರಗಳಿಗೆ ಹೋಗಿ ಕಾಲಕಾಲಕ್ಕೆ ಚಿಕಿತ್ಸೆ ಪಡೆಯಬೇಕು’ ಎಂದು ಸಲಹೆ ನೀಡಿದರು.
ಬ್ರಿಮ್ಸ್ ನಿರ್ದೇಶಕ ಡಾ.ಚಂದ್ರಕಾಂತ ಚಿಲ್ಲರ್ಗಿ ಕಾರ್ಯಕ್ರಮ ಉದ್ಘಾಟಿಸಿದರು. ಆರ್‌ಎನ್‌ಟಿಸಿಪಿ ನೋಡಲ್ ಅಧಿಕಾರಿ ಡಾ.ಮಹೇಶ ತೊಂಡಾರೆ ಉಪನ್ಯಾಸ ನೀಡಿದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ದೀಪಾ ಖಂಡ್ರೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಚ್.ಐ.ವಿ/ಏಡ್ಸ್ ನಿಯಂತ್ರಣ ಹಾಗೂ ಜಾಗೃತಿಗಾಗಿ ಶ್ರಮಿಸಿದ ಎಆರ್‌ಟಿ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ.ಭೀಮರಾವ್ ಸಿಂಗೊಡೆ, ಪ್ರವರ್ಧ ಸಂಸ್ಥೆಯ ಆಪ್ತ ಸಮಾಲೋಚಕ ಕಲ್ಲಪ್ಪ, ಬಸವಕಲ್ಯಾಣ ಸಾರ್ವಜನಿಕ ಆಸ್ಪತ್ರೆ ಐಸಿಟಿಸಿ ಆಪ್ತ ಸಮಾಲೋಚಕಿ ಶಿವಲೀಲಾ, ಔರಾದ್(ಬಿ) ಸಾರ್ವಜನಿಕ ಆಸ್ಪತ್ರೆಯ ತಂತ್ರಜ್ಞ ಮಹಾಂತೇಶ ಹಾಗೂ ಬೆಳದಿಂಗಳು ಸಂಸ್ಥೆಯ ನಾಗೇಂದ್ರ ಅವರಿಗೆ ನೆನಪಿನ ಕಾಣಿಕೆ ಹಾಗೂ ಅಭಿನಂದನಾ ಪತ್ರ ಪ್ರದಾನ ಮಾಡಲಾಯಿತು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಕೃಷ್ಣಾ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಕಾರ್ಯಕ್ರಮ ಅಧಿಕಾರಿ ಡಾ.ರಾಜಶೇಖರ ಪಾಟೀಲ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ ಅಧಿಕಾರಿ ಡಾ.ಅನಿಲಕುಮಾರ ಚಿಂತಾಮಣಿ ಹಾಗೂ ಡಾ.ಇಂದುಮತಿ ಪಾಟೀಲ ಇದ್ದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಪ್ರವರ್ಧ, ಎಲ್‌ಬಿಇಎಸ್, ಎಸ್‌ಟಿಪಿ ಮತ್ತು ಆರ್‌ಡಿಎಸ್‍ಎಸ್, ಬೆಳದಿಂಗಳು ನೆಟ್‌ವರ್ಕ್ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.