ಶನಿವಾರ, ನವೆಂಬರ್ 16, 2019
21 °C
ಶೋಷಿತ ವರ್ಗಗಳ ಜನಜಾಗೃತಿ ಸಮಾವೇಶ ಇಂದು

ಜಿಲ್ಲೆಯ 12 ಸಾವಿರ ಜನ ಸೇರುವ ನಿರೀಕ್ಷೆ

Published:
Updated:

ಬೀದರ್‌: ಶೋಷಿತ ವರ್ಗಗಳ ಒಕ್ಕೂಟ ಭಾನುವಾರ ಆಯೋಜಿಸಿರುವ ಶೋಷಿತ ವರ್ಗಗಳ ಜನಜಾಗೃತಿ ಸಮಾವೇಶ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಂಸದೆ ಸಾವಿತ್ರಿಬಾಯಿ ಫುಲೆ  ಅಭಿನಂದನಾ ಸಮಾರಂಭಕ್ಕೆ ಇಲ್ಲಿನ ಗಣೇಶ ಮೈದಾನ ಸಿದ್ದಗೊಂಡಿದೆ.

ಎರಡು, ಮೂರು ದಿನಗಳಿಂದ ಮೋಡ ಕವಿದ ವಾತಾವರಣದ ಜತೆಗೆ ಸಾಧಾರಣ ಮಳೆಯೂ ಸುರಿದ ಕಾರಣ ಗಣೇಶ ಮೈದಾನದಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಗಟ್ಟಿಮುಟ್ಟಾದ ಪೆಂಡಾಲ್‌ ನಿರ್ಮಿಸಲಾಗಿದೆ. ಐದು ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಶೋಷಿತ ಸಮುದಾಯಗಳ ಮುಖಂಡರಿಗೆ ಕುಳಿತುಕೊಳ್ಳಲು ವಿಶಾಲವಾದ ವೇದಿಕೆಯನ್ನೂ ಸಿದ್ಧಪಡಿಸಲಾಗಿದೆ.
ಒಟ್ಟು 12 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಮಾಜಿ ಸಂಸದೆ ಸಾವಿತ್ರಿಬಾಯಿ ಫುಲೆ, ಶಾಸಕರಾದ ಈಶ್ವರ ಖಂಡ್ರೆ, ರಹೀಂ ಖಾನ್, ಬಿ.ನಾರಾಯಣರಾವ್‌, ವಿಧಾನ ಪರಿಷತ್‌ ಸದಸ್ಯರಾದ ಎಚ್‌.ಎಂ.ರೇವಣ್ಣ, ವಿಜಯಸಿಂಗ್ ಹಾಗೂ ಅರವಿಂದಕುಮಾರ ಅರಳಿ ಪಾಲ್ಗೊಳ್ಳಲಿದ್ದಾರೆ.

ಕುಂಬಾರ, ವಿಶ್ವಕರ್ಮ, ಹಡಪದ ಅಪ್ಪಣ್ಣ, ನಾವಿ ಸಮಾಜ, ಭೋವಿ, ಬಂಜಾರಾ, ಈಡಿಗ, ಕಬ್ಬಲಿಗ, ಗೋಂದಳಿ ಸೇರಿ ಒಟ್ಟು 20 ಸಮುದಾಯಗಳ ಗಣ್ಯರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ತಳಸಮುದಾಯದಲ್ಲಿ ಒಗ್ಗಟ್ಟು ಮೂಡಿಸುವುದು ಸಮಾವೇಶದ ಉದ್ದೇಶವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.  

ವಿ.ಪಿ.ಸಿಂಗ್‌ ಪ್ರಧಾನಿಯಾಗಿದ್ದಾಗ ಮಂಡಲ್‌ ಆಯೋಗ ರಚಿಸಿದ್ದರು. ಡಿ.ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಶೋಷಿತರ ಅಭಿವೃದ್ಧಿಗಾಗಿ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಶೋಷಿತ ಸಮುದಾಯಗಳ 22 ಪಂಗಡಗಳಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟರು. ಹಿಂದುಳಿದ ವರ್ಗಗಳ ಮುಖಂಡರು ಅಧಿಕಾರದ ಚುಕ್ಕಾಣಿ ಹಿಡಿದಾಗ ಮಾತ್ರ ಶೋಷಿತ ಸಮುದಾಯಗಳು ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ. ಈ ದಿಸೆಯಲ್ಲಿ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಸಮಾವೇಶ ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ.

‘ವಾರದ ಹಿಂದೆಯೇ ನಗರದಲ್ಲಿ ಸಮಾವೇಶದ ಜಾಗೃತಿಗಾಗಿ ಭಿತ್ತಿಪತ್ರ ಹಾಗೂ ಕರಪತ್ರ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳಲಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ ತಿಳಿಸಿದರು.

ಶನಿವಾರ ಬೆಳಿಗ್ಗೆ ಗೀತಾ ಚಿದ್ರಿ, ಸಮಾವೇಶದ ಸಂಯೋಜಕರಾದ ಬಸವರಾಜ ಮಾಳಗೆ, ಆನಂದ ದೇವಪ್ಪ, ಅನಿಲಕುಮಾರ ಬೆಲ್ದಾರ್, ಅಮೃತರಾವ್‌ ಚಿಮಕೋಡ, ಗೋವರ್ಧನ್‌ ರಾಠೋಡ್ ಹಾಗೂ ಲೋಕೇಶ ಮೇತ್ರೆ ಮೊದಲಾದವರು ಗಣೇಶ ಮೈದಾನಕ್ಕೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು. 

ಪ್ರತಿಕ್ರಿಯಿಸಿ (+)