ಬುಧವಾರ, ಮಾರ್ಚ್ 29, 2023
23 °C
ವಾಣಿಜ್ಯ ಬಳಕೆ ಕಟ್ಟಡಕ್ಕೆ ವಸತಿ ತೆರಿಗೆ ಪಾವತಿ

ಬೆಸ್ಕಾಂ ಮಾಹಿತಿ ಪಡೆದ ಬಿಬಿಎಂಪಿ: ವಂಚಕರಿಂದ ₹130 ಕೋಟಿ ಸಂಗ್ರಹ

ಆರ್‌. ಮಂಜುನಾಥ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಆಸ್ತಿ ವಿವರವನ್ನು ತಪ್ಪಾಗಿ ನಮೂದಿಸಿ ತೆರಿಗೆ ವಂಚಿಸುತ್ತಿರುವವರನ್ನು ಪತ್ತೆಹಚ್ಚಿ, ಕ್ರಮ ಕೈಗೊಳ್ಳುವ ಅಭಿಯಾನವನ್ನು ಬಿಬಿಎಂಪಿ ಆರಂಭಿಸಿದೆ. ಈ ಮೂಲಕ ಸುಮಾರು ₹130 ಕೋಟಿ ಅಧಿಕ ತೆರಿಗೆಯನ್ನು ಈವರೆಗೆ ಸಂಗ್ರಹಿಸಲಾಗಿದೆ.

ಬೆಸ್ಕಾಂ ವಿದ್ಯುತ್‌ ಬಿಲ್‌ ಆಧರಿಸಿ ಆಸ್ತಿ ತೆರಿಗೆಯನ್ನು ಅದರೊಂದಿಗೆ ಪರಿಶೀಲಿಸಲಾಗುತ್ತಿದೆ. 20 ಸಾವಿರಕ್ಕೂ ಹೆಚ್ಚು ಆಸ್ತಿಗಳ ತೆರಿಗೆ ಪ್ರಕರಣದಲ್ಲಿ ಕಡಿಮೆ ತೆರಿಗೆ ಪಾವತಿಯಾಗುತ್ತಿರುವುದು ಕಂಡುಬಂದಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಯಂ ಘೋಷಣೆ ಆಸ್ತಿ ತೆರಿಗೆ ವ್ಯವಸ್ಥೆ ಜಾರಿಯಲ್ಲಿ ಇದರಂತೆ ಆಸ್ತಿ ಮಾಲೀಕರು ಸಲ್ಲಿಸುವ ದಾಖಲೆಯಂತೆ ತೆರಿಗೆ ನಿರ್ಧರಿತವಾಗುತ್ತದೆ. ಇದರಲ್ಲಿ ಹಲವು ರೀತಿಯ ತಪ್ಪು ಮಾಹಿತಿ ಇದ್ದು, ವಾಣಿಜ್ಯ ಬಳಕೆಯಲ್ಲಿರುವ ಆಸ್ತಿಗೆ ವಸತಿ ತೆರಿಗೆ ಪಾವತಿಸಲಾಗುತ್ತಿದೆ.

‘ಬೆಸ್ಕಾಂನಿಂದ ನಾವು ಡೇಟಾ ತೆಗೆದುಕೊಂಡಿದ್ದೇವೆ. ಸುಮಾರು 25 ಸಾವಿರ ಆಸ್ತಿಗಳ ಮಾಹಿತಿಯನ್ನು ಪಡೆದುಕೊಂಡಿದ್ದೇವೆ. ಇದನ್ನು ಆಸ್ತಿ ತೆರಿಗೆಯೊಂದಿಗೆ ಪರಿಶೀಲಿಸಿದ್ದೇವೆ. ವಸತಿ ಕಟ್ಟಡ ಎಂದು ಆಸ್ತಿ ತೆರಿಗೆ ಪಾವತಿಸಲಾಗುತ್ತಿದೆ. ಆದರೆ, ಬೆಸ್ಕಾಂನಿಂದ ವಾಣಿಜ್ಯ ಸಂಪರ್ಕ ಪಡೆದಿದ್ದಾರೆ. ಇದು ಆಸ್ತಿ ತೆರಿಗೆಯನ್ನು ವಂಚಿಸಿದಂತಾಗಿದೆ’ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ದೀಪಕ್‌ ತಿಳಿಸಿದರು.

‘ಪ್ರಥಮ ಹಂತವಾಗಿ ನಾವು ಬೆಸ್ಕಾಂನಿಂದ ವಾಣಿಜ್ಯ ಬಳಕೆಯ ವಿದ್ಯುತ್‌ ಸಂಪರ್ಕವನ್ನು ಯಾರಿಗೆ ನೀಡಿದ್ದಾರೆ ಎಂಬ ಮೂಲ ಮಾಹಿತಿಯನ್ನು ಪಡೆದುಕೊಂಡಿದ್ದೇವೆ. ಈ ಸಂಪರ್ಕದ ಕಟ್ಟಡದವರು ವಸತಿ ಅಥವಾ ವಾಣಿಜ್ಯ ಆಸ್ತಿ ತೆರಿಗೆ ಯಾವುದು ಎಂದು ಪಾವತಿಸುತ್ತಿದ್ದಾರೆ ಎಂದು ಪರಿಶೀಲಿಸಲಾಗಿದೆ. ನಮಗೆ ಸಾಕಷ್ಟು ವ್ಯತ್ಯಾಸ ಕಂಡುಬಂದಿದ್ದು, ಸುಮಾರು ₹130 ಕೋಟಿ ಹೆಚ್ಚು ಆಸ್ತಿ ತೆರಿಗೆ ಈ ಪ್ರಕ್ರಿಯೆಯಿಂದಲೇ ಪಾವತಿ ಮಾಡಿಸಿಕೊಳ್ಳಲಾಗಿದೆ’ ಎಂದರು.

‘ವಸತಿ ದರದಲ್ಲಿ ಆಸ್ತಿ ತೆರಿಗೆ ಮಾಡುತ್ತಿದ್ದು, ವಾಣಿಜ್ಯ ಬಳಕೆಯಾಗುತ್ತಿದ್ದರೆ ಆ ಬಗ್ಗೆ ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ. ವಾಣಿಜ್ಯ ಬಳಕೆ ಎಂಬುದು ಸಾಬೀತಾದ ಮೇಲೆ ತೆರಿಗೆಯನ್ನು ನಿರ್ಧಾರ ಮಾಡಿ, ಎಷ್ಟು ದಿನಗಳಿಂದ ಪಾವತಿ ಮಾಡಿಲ್ಲವೋ ಅದಕ್ಕೆಲ್ಲ ಬಡ್ಡಿ, ದಂಡ ಎಲ್ಲವನ್ನೂ ಹಾಕಿ ಪಾವತಿ ಮಾಡಿಸಿಕೊಳ್ಳಲಾಗುತ್ತಿದೆ’ ಎಂದರು.

‘ಸುಮಾರು 25 ಸಾವಿರ ಆಸ್ತಿಗಳ ಬಗ್ಗೆ ಬೆಸ್ಕಾಂನಿಂದ ಮಾಹಿತಿ ಪಡೆಯಲಾಗಿದ್ದು, 20 ಸಾವಿರ ಆಸ್ತಿಗಳ ಪರಿಶೀಲನೆ ಆಗಿದೆ. ಇನ್ನುಳಿದ ಐದು ಸಾವಿರಷ್ಟು ಆಸ್ತಿಗಳ ಪರಿಶೀಲನೆ ಬಾಕಿ ಇದೆ. ಇದು ಮುಗಿದ ಮೇಲೆ ಮುಂದಿನ ಹಂತದಲ್ಲಿ ಬಿಬಿಎಂಪಿ ವ್ಯಾಪ್ತಿಯ ಎಲ್ಲ ಆಸ್ತಿಗಳ ಪರಿಶೀಲನೆ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು