ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಟ್ಟಿಯಾದ ಬೀನ್ಸ್, ರೈತರಿಗೆ ಚಾನ್ಸ್

ಮಾರುಕಟ್ಟೆಯಲ್ಲಿ ಹಿರಿತನ ಕಳೆದುಕೊಂಡ ಹಿರೇಕಾಯಿ
Last Updated 17 ಮೇ 2019, 19:46 IST
ಅಕ್ಷರ ಗಾತ್ರ

ಬೀದರ್: ಬೇಸಿಗೆ ರಜೆ ಕಾಲ. ಆರಕ್ಷತೆ, ಮದುವೆ, ಮಗುವಿನ ನಾಮಕರಣ, ಶಾಲು ಕಿರುಗುಣಿ ಕಾರ್ಯಕ್ರಮಗಳು ನಿರಂತರ ನಡೆಯುತ್ತಿವೆ. ಈ ಸಮಾರಂಭಗಳಲ್ಲಿ ಪುಲಾವ್‌, ವೆಜಿಟೇಬಲ್ ಬಿರಿಯಾನಿಗೆ ಹೆಚ್ಚಿನ ಆದ್ಯತೆ ಕಂಡು ಬರುತ್ತಿದೆ. ನೆರೆಯ ಜಿಲ್ಲೆಗಳಿಂದ ಬೀನ್ಸ್‌ ಮಾರುಕಟ್ಟೆಗೆ ಬಾರದ ಕಾರಣ ಮಹಾರಾಷ್ಟ್ರದ ನಾಸಿಕ್‌ನಿಂದ ಆವಕ ಮಾಡಿಕೊಳ್ಳಲಾಗಿದೆ. ಬೀನ್ಸ್‌ಗೆ ಬೇಡಿಕೆ ಹೆಚ್ಚಿ ಬೆಲೆ ಗಗನಕ್ಕೆ ಏರಿದೆ.

ಕಳೆದ ವಾರ ಪ್ರತಿ ಕ್ವಿಂಟಲ್‌ಗೆ ₹ 8,000 ಇದ್ದ ಬೀನ್ಸ್‌ ಬೆಲೆ ದಿಢೀರ್‌ ಒಂದೂವರೆ ಪಟ್ಟು ಹೆಚ್ಚಾಗಿದೆ. ₹ 21 ಸಾವಿರ ತಲುಪಿ ಗ್ರಾಹಕರು ಹುಬ್ಬೇರಿಸುವಂತೆ ಮಾಡಿದೆ. ಪ್ರತಿ ಕೆ.ಜಿ.ಗೆ ₹ 200ರಂತೆ ಮಾರಾಟವಾಗುತ್ತಿದೆ. ಇದರಿಂದ ಬೀನ್ಸ್‌ ಬೆಳೆದ ಮಹಾರಾಷ್ಟ್ರದ ನಾಸಿಕ ಜಿಲ್ಲೆಯ ರೈತರಿಗೆ ನಿರೀಕ್ಷೆಗೂ ಮೀರಿ ಲಾಭವಾಗಿದೆ. ಬೀನ್ಸ್‌ ಬೆಲೆ ಅಬ್ಬರಕ್ಕೆ ಹಿರೇಕಾಯಿ ಹಿರಿತನ ಕಳೆದುಕೊಂಡಿದೆ.

ಸಬ್ಬಸಗಿ ಸೊಪ್ಪು ₹ 4,500, ಬೆಳ್ಳೊಳ್ಳಿ ₹ 2 ಸಾವಿರ, ಬದನೆಕಾಯಿ, ಎಲೆಕೋಸು ಹಾಗೂ ಮೆಂತೆ ಸೊಪ್ಪಿನ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 500 ಏರಿಕೆಯಾಗಿದೆ. ಹಸಿಮೆಣಸಿನಕಾಯಿ, ಆಲೂಗಡ್ಡೆ, ಬಿಟ್‌ರೂಟ್, ಗಜ್ಜರಿ, ಹೂಕೋಸು, ಕೊತಂಬರಿ ಬೆಲೆ ಸ್ಥಿರವಾಗಿದೆ.
ಹಿರೇಕಾಯಿ, ಬೆಂಡೆಕಾಯಿ ಬೆಲೆ ಕ್ವಿಂಟಲ್‌ಗೆ ₹ 2,500 ವರೆಗೆ ಕುಸಿದು ಬೆಂಡಾಗಿವೆ. ಪಾಲಕ್‌ ಸೊಪ್ಪು ₹ 2 ಸಾವಿರ,
ತೊಂಡೆಕಾಯಿ, ಕರಿಬೇವು ತಲಾ ₹ 500 ಹಾಗೂ ಈರುಳ್ಳಿ ಬೆಲೆ ₹ 200ರ ವರೆಗೆ ಇಳಿದಿದೆ.

ಹೈದರಾಬಾದ್‌ನಿಂದ ಈರುಳ್ಳಿ, ಬೆಳ್ಳೂಳ್ಳಿ, ಕ್ಯಾರೆಟ್, ಬಿಟ್‌ರೂಟ್, ತೊಂಡೆಕಾಯಿ ಆವಕವಾಗಿದೆ. ಬೆಳಗಾವಿಯಿಂದ ಮೆಣಸಿನಕಾಯಿ, ನಾಸಿಕನಿಂದ ಬೀನ್ಸ್‌ ಹಾಗೂ ಜಿಲ್ಲೆಯ ಹುಮನಾಬಾದ್, ಚಿಟಗುಪ್ಪ ತಾಲ್ಲೂಕಿನಿಂದ ಎಲೆಕೋಸು, ಹೂಕೋಸು, ಬದನೆಕಾಯಿ, ಮೆಂತೆ ಸೊಪ್ಪು, ಸಬ್ಬಸಗಿ, ಕರಿಬೇವು, ಕೊತಂಬರಿ, ಟೊಮೆಟೊ, ಪಾಲಕ್‌, ಬೆಂಡೆಕಾಯಿ, ಹಿರೇಕಾಯಿ ಮಾರುಕಟ್ಟೆಗೆ ಬಂದಿದೆ.

ಸೊಪ್ಪಿಗೆ ಅಧಿಕ ಬೇಡಿಕೆ ಇದ್ದರೂ ನಾಸಿಕ್‌ ಹಾಗೂ ಹೈದರಾಬಾದ್‌ನಿಂದ ಬೀದರ್‌ ಮಾರುಕಟ್ಟೆಗೆ ತರುವಷ್ಟರಲ್ಲಿ ಬಾಡುತ್ತಿದೆ. ಕಾರಣ ವ್ಯಾಪಾರಿಗಳು ಸೊಪ್ಪು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಬೇರೆ ತರಕಾರಿಗಳ ಬೆಲೆ ಸಹಜವಾಗಿಯೇ ಹೆಚ್ಚಾಗಿದೆ.

‘ಜಿಲ್ಲೆಯಲ್ಲಿ ಮೂರು ತಿಂಗಳಿಂದ ಅಕಾಲಿಕ ಮಳೆಯೂ ಬಂದಿಲ್ಲ. ಮಾರುಕಟ್ಟೆಯಲ್ಲಿ ಬೇಡಿಕೆ ಇರುವಷ್ಟು ತರಕಾರಿ ಪೂರೈಕೆ ಆಗುತ್ತಿಲ್ಲ. ಮದುವೆ ಸಮಾರಂಭಗಳು ನಡೆಯುತ್ತಿರುವ ಕಾರಣ ತರಕಾರಿಗೆ ಹೆಚ್ಚಿನ ಬೇಡಿಕೆ ಬಂದಿದೆ’ ಎಂದು ವಿಷ್ಣು ತರಕಾರಿ ಅಂಗಡಿ ಮಾಲೀಕ ಶಿವಕುಮಾರ ಭಂಡೆ ಹೇಳುತ್ತಾರೆ.

ಬೀದರ್‌ ತರಕಾರಿ ಸಗಟು ಮಾರುಕಟ್ಟೆ

ತರಕಾರಿ(ಪ್ರತಿ ಕ್ವಿಂಟಲ್) ಕಳೆದ ವಾರ ಈ ವಾರ
ಬೀನ್ಸ್‌ 8000-9000, 20000–21000
ಹಿರೇಕಾಯಿ 7000-8000, 5000–5500

ಈರುಳ್ಳಿ, 1200-1500, 1000-1200
ಮೆಣಸಿನಕಾಯಿ 5000-6000, 5000-6000
ಆಲೂಗಡ್ಡೆ 1200-1800, 1600-1800
ಎಲೆಕೋಸು 800-1000, 1500-2000
ಬೆಳ್ಳೂಳ್ಳಿ 5000-8000, 8000-10000
ಗಜ್ಜರಿ( ಕ್ಯಾರೆಟ್) 4,000-4500, 4000–4500

ಬದನೆಕಾಯಿ 4000-4500, 4000–5000
ಮೆಂತೆ ಸೊಪ್ಪು 5000-6000, 6000–6500
ಹೂಕೋಸು 5500-6000, 5000–6000
ಸಬ್ಬಸಗಿ 3000-3500, 7000–8000
ಕೊತಂಬರಿ 7000-8000, 6000–8000
ಕರಿಬೇವು 4000-4500, 2000–3000

ಬಿಟ್‌ರೂಟ್‌ 4000-4500, 4000–4500
ತೊಂಡೆಕಾಯಿ 4000-4500, 3000–3500
ಬೆಂಡೆಕಾಯಿ 4000-5000, 2000–2500
ಟೊಮೆಟೊ 4000-5000, 4000–4500
ಪಾಲಕ್‌ 4000-5000, 2500–3000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT