ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗ ಕಚ್ಚಿ ಬಾಲಕನ ಸ್ಥಿತಿ ಗಂಭೀರ

ಶಿವಪುರ: ಮಂಗಗಳ ಹಾವಳಿಯಿಂದ ಗ್ರಾಮದಲ್ಲಿ ಭಯದ ವಾತಾವರಣ
Last Updated 6 ಜೂನ್ 2019, 19:45 IST
ಅಕ್ಷರ ಗಾತ್ರ

ಬಸವಕಲ್ಯಾಣ: ತಾಲ್ಲೂಕಿನ ಶಿವಪುರದಲ್ಲಿ 5 ದಿನಗಳಿಂದ ಮಂಗಗಳ ಹಾವಳಿ ಹೆಚ್ಚಾಗಿದೆ. ಮಂಗಗಳು ಕಚ್ಚಿರುವುದರಿಂದ ಮೂರು ವರ್ಷದ ಬಾಲಕ ಅಮಿತ್‌ ಮಾರುತಿಯ ಸ್ಥಿತಿ ಗಂಭೀರವಾಗಿದೆ.

ಬಾಲಕನ ತೊಡೆ ಹಾಗೂ ಕಾಲುಗಳಿಗೆ ತೀವ್ರ ಗಾಯಗಳಾಗಿವ. ಸ್ಥಳೀಯ ಆಸ್ಪತ್ರೆಯವರು ಚಿಕಿತ್ಸೆ ನೀಡಲು ಹಿಂದೇಟು ಹಾಕಿದ್ದರಿಂದ ಮಹಾರಾಷ್ಟ್ರದ ಉಮರ್ಗಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಲೇಜು ವಿದ್ಯಾರ್ಥಿಯಾದ ರಮೇಶ ಗೌರಕರ್, ವೃದ್ಧರಾದ ರತ್ನಮ್ಮ ಟೀಚರ್, ತಮ್ಮಾರೆಡ್ಡಿ ವಡಗೆ, ಅನಿಲ ಶರಣಪ್ಪ ಹಾಗೂ ಇತರರಿಗೆ ಮಂಗಗಳು ಕಚ್ಚಿವೆ. ಎಲ್ಲರ ಕಾಲು, ಬೆನ್ನು, ತೊಡೆಗಳಿಗೆ ಹಲ್ಲುಗಳಿಂದ ಹಿಡಿದು ಜಗ್ಗಿದ್ದರಿಂದ ಒಳಗಿನ ಮಾಂಸ ಕಾಣುತ್ತಿದ್ದು ರಕ್ತ ಸೋರುತ್ತಿದೆ. ಇವರೆಲ್ಲರೂ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

‘ನಾನು ಮನೆ ಅಂಗಳದಲ್ಲಿ ಮಲಗಿದ್ದಾಗ ಬೆಳಿಗ್ಗೆ ಜಗಳವಾಡುತ್ತ ಬಂದ ಎರಡು ಮಂಗಗಳು ಮೈಮೇಲೆ ಬಿದ್ದವು. ಅದರಲ್ಲಿ ಒಂದು ಕಾಲನ್ನು ಹಿಡಿದು ತೀವ್ರ ಗಾಯ ಮಾಡಿದೆ. ಇದಕ್ಕೆ ಖಾಸಗಿ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು ಸಾವಿರಾರು ರೂಪಾಯಿ ಖರ್ಚು ಆಗಿದೆ’ ಎಂದು ಕಾಲೇಜು ವಿದ್ಯಾರ್ಥಿಯಾದ ರಮೇಶ ಗೌರಕರ್ ತಿಳಿಸಿದರು.

‘ಐದು ದಿನಗಳಿಂದ ಕೆಲ ಮಂಗಗಳು ಹುಚ್ಚುಹುಚ್ಚಾಗಿ ವರ್ತಿಸುತ್ತಿದ್ದು ಮನೆ ಮಾಳಿಗೆಗಳ ಮೇಲೆ ಕೂರುತ್ತವೆ. ಅಂಗಳಕ್ಕೆ ಬಂದು ಸಿಕ್ಕಸಿಕ್ಕವರಿಗೆ ಕಚ್ಚಿ ಗಾಯ ಮಾಡುತ್ತಿದ್ದು ಈ ಮಂಗಗಳ ಹಾವಳಿ ತಡೆಯಬೇಕು ಎಂದು ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದೆವು. ಆದರೆ, ಅಲ್ಲಿನ ಸಿಬ್ಬಂದಿಯವರು ಅರ್ಜಿ ತೆಗೆದುಕೊಳ್ಳಲಿಲ್ಲ. ಆದ್ದರಿಂದ ಅಂಚೆ ಮೂಲಕ ಅರ್ಜಿ ಕಳುಹಿಸಬೇಕಾಯಿತು' ಎಂದು ಅವರು ಗೋಳು ತೋಡಿಕೊಂಡರು.

‘ಮಂಗಗಳ ಹಾವಳಿಯಿಂದ ಗ್ರಾಮಸ್ಥರು ಭೀತಿಯಲ್ಲಿದ್ದಾರೆ. ಮಹಿಳೆಯರು ಹಾಗೂ ಮಕ್ಕಳು ರಸ್ತೆಗೆ ಬಾರದೆ ಮನೆಯಲ್ಲೇ ಕುಳಿತುಕೊಳ್ಳಬೇಕಾಗುತ್ತಿದೆ. ಹೀಗಾಗಿ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಕೆಲ ಮಕ್ಕಳು ಶಾಲೆಗೆ ಹೋಗದಂತಾಗಿದ್ದು ಶೀಘ್ರದಲ್ಲಿ ಮಂಗಗಳ ಕಾಟದಿಂದ ತಪ್ಪಿಸಬೇಕು' ಎಂದು ಗಂಗಮ್ಮ ಒತ್ತಾಯಿಸಿದರು.

ಹುಚ್ಚು ಮಂಗಗಳ ಹಾವಳಿ ತಡೆಯಬೇಕು ಹಾಗೂ ಮಂಗಗಳು ಕಚ್ಚಿದ್ದರಿಂದ ಗಾಯಗೊಂಡವರಿಗೆ ಆಸ್ಪತ್ರೆ ಖರ್ಚು ಒದಗಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ವಲಯ ಅರಣ್ಯ ಅಧಿಕಾರಿಗಳಿಗೆ ಗುರುವಾರ ಕೂಡ ಮನವಿ ಸಲ್ಲಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ವೀರಣ್ಣ ರಾಜೋಳೆ, ಮಹೇಂದ್ರ ಲಷ್ಕರೆ, ಪ್ರಮುಖರಾದ ಚಂದ್ರಾಮರೆಡ್ಡಿ, ಜಗನ್ನಾಥ ಮೂಲಗೆ, ಸಂಗಮೇಶ ಕಿಣಗಿ ಸೇರಿ 29 ಜನ ಮನವಿಪತ್ರಕ್ಕೆ ಸಹಿ ಹಾಕಿದ್ದಾರೆ.

ಶೀಘ್ರ ಕ್ರಮ ತೆಗೆದುಕೊಳ್ಳದಿದ್ದರೆ ಧರಣಿ ನಡೆಸಲಾಗುವುದು ಎಂದೂ ಎಚ್ಚರಿಕೆ ನೀಡಿದ್ದಾರೆ.

*
ನನ್ನ ಕಾಲಿಗೂ ಮಂಗ ಕಚ್ಚಿದೆ. ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ತಿಳಿಸಿದರೆ, ನಿಷ್ಕಾಳಜಿ ತೋರುತ್ತಾರೆ. ಇನ್ನು ಮುಂದಾದರೂ ಅವರು ಸೂಕ್ತ ಕ್ರಮ ಕೈಗೊಳ್ಳಲಿ.
-ರಮೇಶ ಗೌರಕರ್, ವಿದ್ಯಾರ್ಥಿ ಶಿವಪುರ

*
ಮಂಗಗಳ ಹಾವಳಿ ತಡೆಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಪಿಡಿಒ ಜತೆ ಚರ್ಚಿಸಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು.
-ಮಹೇಂದ್ರ ಮೌರ್ಯ, ವಲಯ ಅರಣ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT