ಬುಧವಾರ, ಜುಲೈ 28, 2021
24 °C
ಮಾಧ್ಯಮ ಗೋಷ್ಠಿಯಲ್ಲಿ ಸಂಸದ ಭಗವಂತ ಖೂಬಾ ಹೇಳಿಕೆ

ಬೀದರ್‌ ಮಾರ್ಗದ ಎಲ್ಲ ರೈಲುಗಳ ವಿದ್ಯುದ್ದೀಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ಮುಂಬರುವ ಎರಡು ವರ್ಷಗಳ ಅವಧಿಯಲ್ಲಿ ಬೀದರ್‌ ಮಾರ್ಗವಾಗಿ ಸಂಚರಿಸುವ ಎಲ್ಲ ರೈಲುಗಳು ವಿದ್ಯುದ್ದೀಕರಣಗೊಳ್ಳಲಿವೆ’ ಎಂದು ಸಂಸದ ಭಗವಂತ ಖೂಬಾ ಹೇಳಿದರು.

ಕೇಂದ್ರದ ಬಿಜೆಪಿ ಸರ್ಕಾರದ ಎರಡನೆಯ ಅವಧಿಯಲ್ಲಿನ ಮೊದಲ ವರ್ಷದ ಸಾಧನೆಯನ್ನು ವಿವರಿಸಲು ನಗರದಲ್ಲಿ ಮಂಗಳವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ‘ಈಗಾಗಲೇ ಟೆಂಡರ್‌ ಕರೆಯಲಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಶುರುವಾಗಲಿದೆ’ ಎಂದರು.

‘ಬಿಜೆಪಿ ಸರ್ಕಾರದ ಮೊದಲ ಅವಧಿಯಲ್ಲಿ ಬೀದರ್‌ ಮಾರ್ಗವಾಗಿ 13 ಹೊಸ ರೈಲುಗಳ ಸಂಚಾರ ಆರಂಭವಾಗಿದೆ. ಬೀದರ್–ಕಲಬುರ್ಗಿ ರೈಲು ಮಾರ್ಗ ಪೂರ್ಣಗೊಳಿಸಿ ಪ್ರಯಾಣಿಕರಿಗೆ ಸೇವೆಯನ್ನೂ ಒದಗಿಸಲಾಗುತ್ತಿದೆ. ಬೀದರ್–ನಾಂದೇಡ್‌ ರೈಲು ಮಾರ್ಗ ನಿರ್ಮಾಣಕ್ಕೆ ಮಂಜೂರಾತಿ ಪಡೆಯಲಾಗಿದೆ’ ಎಂದು ತಿಳಿಸಿದರು.

‘ಪ್ರಭು ಚವಾಣ್‌ ಅವರು ಸಚಿವರಾದ ಮೇಲೆ ಅವರು ಹಾಗೂ ನಾನು ಸೇರಿ ಕೇವಲ 35 ದಿನಗಳಲ್ಲಿ ಬೀದರ್‌ನಿಂದ ಬೆಂಗಳೂರಿಗೆ ವಿಮಾನಯಾನ ಸೇವೆಯನ್ನು ಶುರು ಮಾಡಿಸಿದೆವು. ವಿಮಾನ ಹಾರಿಸಿ ತೋರಿಸಲಿ ಎಂದು ಕಾಂಗ್ರೆಸ್‌ನವರು ಅಪಹಾಸ್ಯ ಮಾಡಿದ್ದರು. ಅವರಿಗೆ ತಕ್ಕ ಉತ್ತರ ನೀಡಿದ್ದೇವೆ’ ಎಂದು ಹೇಳಿದರು.

‘ಪುಣೆ–ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ಮಾರ್ಗವನ್ನಾಗಿ ಪರಿವರ್ತಿಸಲಾಗಿದೆ. ಬೀದರ್‌–ಔರಾದ್‌ ಹೆದ್ದಾರಿ ನಿರ್ಮಾಣ ಕಾರ್ಯ ಟೆಂಡರ್‌ ಹಂತದಲ್ಲಿದೆ. ಗ್ರಾಮ ಸಡಕ್‌ ಯೋಜನೆಯಡಿ ಕ್ಷೇತ್ರದಲ್ಲಿ 300 ಕಿ.ಮೀ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ 15 ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಭಾಲ್ಕಿ ಶಾಸಕರು ಸಹಕಾರ ನೀಡದ ಕಾರಣ ಭಾಲ್ಕಿಯೊಂದರಲ್ಲಿ ಮಾತ್ರ ಕೇಂದ್ರ ಕಾರ್ಯಾರಂಭ ಮಾಡಿಲ್ಲ. ನಗರದಲ್ಲಿ ಪಾಸ್‌ಪೋರ್ಟ್‌ ಸೇವಾ ಕೇಂದ್ರ, ಕೈಗಾರಿಕೆ ಪ್ರದೇಶದಲ್ಲಿ ಎಸ್‌ಟಿಪಿ ಘಟಕ ಸ್ಥಾಪನೆ, ರೈತರ ಕಬ್ಬಿಗೆ ಪ್ರತಿ ಟನ್‌ಗೆ ₹ 2,250 ಬೆಲೆ ಕೊಡಿಸಿದ್ದು ನಮ್ಮ ಸಾಧನೆಯಾಗಿದೆ’ ಎಂದು ತಿಳಿಸಿದರು.

‘ಕೇಂದ್ರ ಸರ್ಕಾರ ಗರೀಬ್‌ ಕಲ್ಯಾಣ ಯೋಜನೆಯಡಿ ಬಡವರಿಗೆ ₹ 21 .35 ಕೋಟಿ ನೆರವು ಒದಗಿಸಿದೆ. ಬೀದರ್ ಜಿಲ್ಲೆಯ ಅತಿಹೆಚ್ಚು ಜನರಿಗೆ ವಿವಿಧ ಯೋಜನೆಗಳ ಲಾಭ ಪಡೆದುಕೊಂಡಿದ್ದಾರೆ. ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ಯೋಜನೆಗಳಿಂದ ಬೀದರ್‌ ಜಿಲ್ಲೆಗೆ ಒಟ್ಟು ₹ 600 ಕೋಟಿ ಬಂದಿದೆ’ ಎಂದು ಹೇಳಿದರು.

‘ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕೇಂದ್ರ ಸರ್ಕಾರದಿಂದ ಒಂದು ಪೈಸೆ ಬಂದಿಲ್ಲ ಎಂದು ಆರೋಪಿಸಿ ಜಿಲ್ಲೆಯ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರು ಒಂದು ವರ್ಷ ಮೌನವಾಗಿದ್ದರೂ ಸಾಕು ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತೋರಿಸಲಾಗುವುದು’ ಎಂದರು.

‘ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳಿಗೆ ತಲಾ ₹ 10 ಸಾವಿರ ಕೊಡಬೇಕೆಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್‌ ಅಧಿಕಾರ ಅವಧಿಯಲ್ಲಿ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಎಷ್ಟು ಜನರಿಗೆ ಇಂತಹ ನೆರವು ಕೊಡಲಾಗಿದೆ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ಪಕ್ಷದ ವಿಭಾಗೀಯ ಸಹ ಸಂಘಟನಾ ಕಾರ್ಯದರ್ಶಿ ಈಶ್ವರಸಿಂಗ್‌ ಠಾಕೂರ್, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಶೋಕ ಹೊಕ್ರಾಣೆ ಹಾಗೂ ವಕ್ತಾರ ಬಸವರಾಜ ಜೋಜನಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.