ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ | ಸದ್ಯ ಕ್ರಿಮಿನಾಶಕ ಬಳಸದಿರಲು ತಜ್ಞರ ಸಲಹೆ

ಮಿಡತೆ: ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ತುರ್ತು ಸಭೆ
Last Updated 27 ಮೇ 2020, 16:18 IST
ಅಕ್ಷರ ಗಾತ್ರ

ಬೀದರ್: ಹೊಲಗದ್ದೆಗಳಲ್ಲಿನ ಬೆಳೆಗಳನ್ನು ಹಾಳು ಮಾಡುವ ಮಿಡತೆಗಳು ಲಕ್ಷೋಪಾದಿಯಲ್ಲಿ ಜಿಲ್ಲೆಯತ್ತ ನುಗ್ಗಿ ಬರುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಇಲ್ಲಿ ಜಿಲ್ಲಾಧಿಕಾರಿ ಎಚ್.ಆರ್. ಮಹಾದೇವ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಯಿತು.

‘ಜಿಲ್ಲೆಯ ಆಯಾ ತಾಲ್ಲೂಕುಗಳಲ್ಲಿ ಇರುವ ಬೆಳೆಗಳನ್ನು ಮೊದಲು ಗುರುತಿಸಬೇಕು. ಬೆಳೆಗಳನ್ನು ಉಳಿಸಿಕೊಳ್ಳಲು ರೈತರಿಗೆ ತಿಳಿಸಲು ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

‘ಮಿಡತೆಗಳು ಹಸಿರು ಹಣ್ಣು ತಿನ್ನುವ ಕಾರಣ ಸಾಕಷ್ಟು ಮುಂಜಾಗ್ರತೆ ವಹಿಸಬೇಕು. ಕೀಟನಾಶಕಗಳನ್ನು ಎಚ್ಚರಿಕೆಯಿಂದ ಬಳಸಬೇಕು. ಜೈವಿಕ ಕೀಟನಾಶಕಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.

‘ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಾದ್ಯಂತ ಕಬ್ಬು, ತೋಟಗಾರಿಕೆ ಬೆಳೆ ಸೇರಿದಂತೆ ಎಲ್ಲ ಹಸಿರು ಬೆಳೆಗಳ ಸಮೀಕ್ಷೆ ನಡೆಸಬೇಕು. ಪ್ರತಿ ಹಳ್ಳಿಯಲ್ಲೂ ಜಾಗೃತಿ ಮೂಡಿಸಬೇಕು’ ಎಂದು ಸೂಚನೆ ನೀಡಿದರು.

ಪೂರ್ವಭಾವಿಯಾಗಿ ಕ್ರಿಮಿನಾಶಕ ಬಳಸುವುದು ಬೇಡ ಎಂದು ಹಿರಿಯ ಕೀಟ ತಜ್ಞರು ಸಲಹೆ ನೀಡಿದರು.

‘ಮನುಷ್ಯರ ಮೇಲೆ ಪ್ರತಿಕೂಲ ಪರಿಣಾಮ ಬೀರದ ಬೇವಿನ ಎಣ್ಣೆಯನ್ನು ಬೆಳೆ ಮತ್ತು ಗಿಡದ ಮೇಲೆ ಸಿಂಪರಿಸುವುದು ಸೂಕ್ತ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿದ್ಯಾನಂದ ತಿಳಿಸಿದರು.

‘ಈ ಮಿಡತೆಗಳ ಹೆಸರು ಡೆಸರ್ಟ್ ಲೋಕಸ್ಟ್ ಅಂದರೆ ಮರುಭೂಮಿ. ಇವು ಒಣ ಪ್ರದೇಶದಲ್ಲಿ ಬದುಕುತ್ತವೆ. ತಮ್ಮ ದೇಹದ ತೂಕದಷ್ಟೇ ಆಹಾರ ತಿನ್ನುತ್ತವೆ. ಸೂರ್ಯಾಭಿಮುಖವಾಗಿ ಚಲಿಸುತ್ತವೆ. ಸೂರ್ಯ ಮುಳುಗಿದ ಮೇಲೆ ಬಹುತೇಕ ಚಲಿಸುವುದಿಲ್ಲ. ಸೂರ್ಯ ಉದಯವಾದ ಮೇಲೆ ಹಾರಾಟ ಆರಂಭಿಸಿದರೆ 10 ಗಂಟೆ ವರೆಗೆ ನಿರಂತರ ಹಾರಬಲ್ಲ ಸಾಮರ್ಥ್ಯ ಹೊಂದಿವೆದೆ’ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಸುನೀಲಕುಮಾರ ಎನ್.ಎಂ. ಹೇಳಿದರು.

‘ಒಂದು ಹಿಂಡಿನಲ್ಲಿ ಗರಿಷ್ಠ 5 ಕೋಟಿ ವರೆಗೂ ಮಿಡತೆಗಳಿರುತ್ತವೆ. ಒಂದೇ ಬಾರಿಗೆ ದಾಳಿ ಮಾಡುತ್ತವೆ. ಒಂದು ಕಡೆ ಕುಳಿತರೆ ಅಲ್ಲಿನ ಬಹುತೇಕ ಹಸಿರು ಗಿಡಗಳನ್ನು ತಿಂದು ಹಾಳು ಮಾಡುತ್ತವೆ. ಬಿಸಿಲು ಇದ್ದಲ್ಲಿ ಬೇಗ ಬೆಳವಣಿಗೆಯಾಗುತ್ತವೆ’ ಎಂದು ಮಾಹಿತಿ ನೀಡಿದರು.

‘ಯಾವುದೇ ಗಿಡ ಇರಲಿ, ಬೆಳೆ ಇರಲಿ ಎಲ್ಲವನ್ನೂ ನಿರ್ದಾಕ್ಷಿಣ್ಯವಾಗಿ ಭಕ್ಷ್ಯ ಮಾಡುತ್ತವೆ.ಮರಭೂಮಿಯಂತಹ ಪ್ರದೇಶದಲ್ಲಿಯೇ ಇವುಗಳ ಸಂತಾನೋತ್ಪತ್ತಿ ಹೆಚ್ಚು. ಒಂದು ಕೀಟ ಕನಿಷ್ಠ 600 ಮೊಟ್ಟೆ ಇಡುತ್ತದೆ’ ಎಂದು ತಿಳಿಸಿದರು.

‘ಆಫ್ರಿಕಾ ಖಂಡದ ಕೀನ್ಯಾ, ಉಗಾಂಡ ,ಇಥಿಯೊಪಿಯಾ , ತಾಂಜಾನಿಯಾ, ಸೋಮಾಲಿಯಾ , ಸುಡಾನ್ ಮೊದಲಾದ ದೇಶಗಳಲ್ಲಿ ಅತಿ ಹೆಚ್ಚು ಹಾನಿ ಮಾಡಿದ ಬಗ್ಗೆ ಮಾಹಿತಿ ಇದೆ’ ಎಂದು ಹೇಳಿದರು.

‘ಮಿಡತೆಗಳು ಆಫ್ರಿಕಾದಿಂದ ಈಗ ಏಷ್ಯಾಕ್ಕೂ ಬಂದಿವೆ. ಸೋಮಾಲಿಯಾ, ಪಾಕಿಸ್ತಾನದ ಮೂಲಕ ಭಾರತಕ್ಕೆ ಪ್ರವೇಶ ಮಾಡಿವೆ. ಗುಜರಾತ್, ರಾಜಸ್ಥಾನ, ಪಂಜಾಬ್, ಹರಿಯಾಣ, ಮಧ್ಯಪ್ರದೇಶ ದಾಟಿ ಈಗ ಮಹಾರಾಷ್ಟ್ರಕ್ಕೆ ಬಂದಿವೆ’ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್, ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್, ಬೀದರ್ ಉಪ ವಿಭಾಗಾಧಿಕಾರಿ ಅಕ್ಷಯ ಶ್ರೀಧರ್, ಜಿಲ್ಲೆಯ ತಾಲ್ಲೂಕುಗಳ ತಹಶೀಲ್ದಾರರು ಇದ್ದರು.

ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ, ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT