ಸೋಮವಾರ, ಡಿಸೆಂಬರ್ 6, 2021
24 °C

ರಸ್ತೆ ಸುಧಾರಣೆ ಆಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ತಾಲ್ಲೂಕಿನ ನಾರಾಯಣಪುರ ಮತ್ತು ಕಿಟ್ಟಾ ಗ್ರಾಮದ ನಡುವಿನ ರಸ್ತೆಯು ಹದಗೆಟ್ಟಿದ್ದು, ವಾಹನ ಸಂಚರಕ್ಕೆ ಸಂಕಷ್ಟ ತಂದೊಡ್ಡಿದೆ.

ಈ ರಸ್ತೆಯ ಮೂಲಕ ಭಾಲ್ಕಿ ಹಾಗೂ ಇತರೆ ಗ್ರಾಮಗಳಿಗೆ ಸಂಚರಿಸಲಾಗುತ್ತದೆ. ನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ರಸ್ತೆಯ ತುಂಬ ತಗ್ಗುಗಳು ಬಿದ್ದಿದ್ದರಿಂದ ಪ್ರಯಾಣಿಕ ಹಾಗೂ ಚಾಲಕರಿಗೆ ದೊಡ್ಡ ಸಮಸ್ಯೆಯಾಗಿದೆ. ಸಂಬಂಧಿತ ಅಧಿಕಾರಿಗಳು ಇತ್ತ ಗಮಹರಿಸಿ ಡಾಂಬರೀಕರಣಕ್ಕೆ ಮುಂದಾಗಬೇಕು.

–ರಾಮಚಂದ್ರ ಕಿಟ್ಟಾ, ನಿವಾಸಿ

ಬಸ್ ಸೌಲಭ್ಯ ಕಲ್ಪಿಸಿ

ಬಸವಕಲ್ಯಾಣ: ತಾಲ್ಲೂಕಿನ ನಿರ್ಗುಡಿ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕು.

ನಿರ್ಗುಡಿ ಗ್ರಾಮದಿಂದ ನಿತ್ಯ ನೂರಾರು ವಿದ್ಯಾರ್ಥಿಗಳು ಬಸವಕಲ್ಯಾಣದ ಶಾಲಾ ಕಾಲೇಜುಗಳಿಗೆ ತೆರಳುತ್ತಾರೆ. ಬಸ್‌ಗಳ ಅಭಾವದಿಂದಾಗಿ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತರಗತಿಗೆ ಹಾಜರಾಗಲು ಆಗುತ್ತಿಲ್ಲ. ಬಸ್ ಸೌಕರ್ಯ ಒದಗಿಸುವಂತೆ ಶಾಸಕರಿಗೆ ಮನವಿ ಪತ್ರ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಈಗಲಾದರೂ ವಿದ್ಯಾರ್ಥಿಗಳ ಅನುಕೂಲಕ್ಕೆ ಬಸ್ ಸೇವೆ ಕಲ್ಪಿಸಲು ಅಧಿಕಾರಿಗಳು ಮುಂದಾಗಲಿ.

–ರವೀಂದ್ರ ಕವಡಿಯಾಳೆ, ವಿದ್ಯಾರ್ಥಿ

ಬೀದರ್; ಎಪಿಎಂಸಿ ಸ್ಥಳಾಂತರ ಮಾಡಿ

ಬೀದರ್: ನಗರದ ಗಾಂಧಿಗಂಜ್‍ನಲ್ಲಿ ಇರುವ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು (ಎಪಿಎಂಸಿ) ವಿಶಾಲವಾದ ಸ್ಥಳಕ್ಕೆ ಸ್ಥಳಾಂತರಿಸಬೇಕು. ಸದ್ಯದ ಮಾರುಕಟ್ಟೆ ಕಿರಿದಾಗಿದ್ದು, ಉತ್ಪನ್ನಗಳ ಮಾರಾಟ, ಖರೀದಿ ಮತ್ತು ವಾಹನಗಳ ನಿಲುಗಡೆಗೆ ತೊಂದರೆಯಾಗುತ್ತಿದೆ. ಈ ಕುರಿತು ಕೃಷಿ ಸಚಿವ ಬಿ.ಸಿ. ಪಾಟೀಲ ಅವರಿಗೂ ಪತ್ರ ಬರೆಯಲಾಗಿದೆ.

ಹಿಂದೆ ಮಾರುಕಟ್ಟೆಯಲ್ಲಿ ಕೃಷಿಗೆ ಸಂಬಂಧಿಸಿದ ಚಟುವಟಿಕೆಗೆ ಮಾತ್ರ ನಿವೇಶನ ಮತ್ತು ಅನುಮತಿ ಕೊಡಲಾಗುತ್ತಿತ್ತು. ಇತ್ತೀಚಿಗೆ ಕೃಷಿಯೇತರ ವ್ಯಾಪಾರಕ್ಕೂ ಅನುಮತಿ ನೀಡಲಾಗುತ್ತಿದೆ. ನಿವೇಶನಗಳನ್ನೂ ಮಾರಾಟ ಮಾಡಲಾಗುತ್ತಿದೆ. ರೈತರು, ಗ್ರಾಹಕರು, ವ್ಯಾಪಾರಸ್ಥರ ಹಿತದೃಷ್ಟಿಯಿಂದ ಮಾರುಕಟ್ಟೆಯನ್ನು ವಿಶಾಲ ಭೂಪ್ರದೇಶಕ್ಕೆ ಸ್ಥಳಾಂತರಿಸಬೇಕು

–ಬಿ.ಜಿ.ಶೆಟಕಾರ, ಅಧ್ಯಕ್ಷ, ವೀರೇಂದ್ರ ಶಾಸ್ತ್ರಿ, ಕಾರ್ಯದರ್ಶಿ, ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ

ರಸ್ತೆ ದುರಸ್ತಿ ಮಾಡಿ

ಜನವಾಡ: ಬೀದರ್ ತಾಲ್ಲೂಕಿನ ಬಾವಗಿ ಗ್ರಾಮದ ಬಸವೇಶ್ವರ ವೃತ್ತದಿಂದ ಗುರು ಭದ್ರೇಶ್ವರ ದೇವಸ್ಥಾನದ ವರೆಗಿನ ರಸ್ತೆ ಹಾಳಾಗಿದೆ.

ರಸ್ತೆ ಮಧ್ಯೆ ತಗ್ಗು ದಿನ್ನೆಗಳು ಸೃಷ್ಟಿಯಾಗಿರುವ ಕಾರಣ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಭದ್ರೇಶ್ವರರಿಗೆ ಕರ್ನಾಟಕ ಹಾಗೂ ನೆರೆಯ ರಾಜ್ಯಗಳಲ್ಲೂ ಭಕ್ತರು ಇದ್ದಾರೆ. ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸುತ್ತಾರೆ. ರಸ್ತೆ ಸರಿ ಇಲ್ಲದ ಕಾರಣ ಭಕ್ತರು ಹಾಗೂ ಗ್ರಾಮಸ್ಥರು ತೊಂದರೆ ಅನುಭವಿಸಬೇಕಾಗಿದೆ.

ಭಕ್ತರು ಮತ್ತು ಗ್ರಾಮಸ್ಥರ ಹಿತದೃಷ್ಟಿಯಿಂದ ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.

ಲೋಕೇಶ ಕನಶೆಟ್ಟಿ, ಬಾವಗಿ ಗ್ರಾಮಸ್ಥ

ಚರಂಡಿ ವ್ಯವಸ್ಥೆ ಕಲ್ಪಿಸಿ

ಕಮಲನಗರ: ತಾಲ್ಲೂಕಿನ ಹೊಳಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಿಯ್ಯಾಳ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರುವ್ಯದರಿಂದ ನೀರು ರಸ್ತೆ ಮೇಲೆ ಹರಿಯುತ್ತಿದೆ.

ವಿವಿಧ ಯೋಜನೆಗಳ ಅಡಿ ಕೆಲ ಕಾಮಗಾರಿಗಳು ನಡೆದಿವೆ. ಆದರೆ, ಅನುಷ್ಠಾನದಲ್ಲಿನ ಸಮಸ್ಯೆಯಿಂದಾಗಿ ಜನರಿಗೆ ಅನುಕೂಲವಾಗುತ್ತೀಲ್ಲ. ಹೀಗಾಗಿ ಅಲ್ಲಿನ ಜನರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಕೂಡಲೇ ಸಂಬಂಧಪಟ್ಟವರು ಗ್ರಾಮದ ಸರ್ಕಾರಿ ಆಸ್ಪತ್ರೆಯ ಎಡಬದಿಯ ಮುಂಭಾಗದ ಬಡಾವಣೆಯ ರಸ್ತೆ ಪಕ್ಕದಲ್ಲಿ ಚರಂಡಿ ನಿರ್ಮಿಸಿ, ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು.

–ಬಡಾವಣೆ ನಿವಾಸಿಗಳು, ಕೊರಿಯ್ಯಾಳ‌

ಕಸ ತೆರವುಗೊಳಿಸಿ

ಭಾಲ್ಕಿ: ಹಳೇ ಪಟ್ಟಣದ ಚವಡಿ, ಗಡಿ ಗಣೇಶ, ಕುಂಬಾರ ಗಲ್ಲಿ, ಆಶ್ರಮ ಪಕ್ಕದ ಏರಿಯಾ, ಪಾಪವ್ವ ನಗರ ಸೇರಿದಂತೆ ಅನೇಕ ಕಡೆಗಳಲ್ಲಿನ ಚರಂಡಿ ಕಸ, ಕಡ್ಡಿಗಳಿಂದ ತುಂಬಿ ಹೋಗಿದ್ದು, ಮನೆಗಳ, ಮಳೆಯ ನೀರು ಸರಾಗವಾಗಿ ಮುಂದೆ ಹರಿಯಲು ಸಾಧ್ಯವಾಗುತ್ತಿಲ್ಲ.‌‌

ಚರಂಡಿಯಲ್ಲಿನ ಕೊಳಚೆ ನೀರು ಮನೆಗಳ ಅಕ್ಕ ಪಕ್ಕ, ಚರಂಡಿಯಲ್ಲಿ ಒಂದೆಡೆ ಸಂಗ್ರಹಗೊಳ್ಳುತ್ತಿದ್ದು, ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ. ಇದರಿಂದ ಜನರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ.

ಸಂಬಂಧಪಟ್ಟ ಜನಪ್ರತಿನಿಧಿ ಮತ್ತು ಅಧಿಕಾರಿಗಳು ಈ ಸಮಸ್ಯೆ ಬಗಿಹರಿಸಲು ತಮ್ಮ ಚಿತ್ತ ಹರಿಸಿ ಶೀಘ್ರದಲ್ಲಿ ಚರಂಡಿಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ಬ್ಲಿಚಿಂಗ್ ಪೌಡರ್ ಸಿಂಪಡಣೆ ಮಾಡಬೇಕು.

–ಪಟ್ಟಣ ನಿವಾಸಿಗಳು, ಭಾಲ್ಕಿ

ಕಮಲನಗರ: ರಸ್ತೆ ತಗ್ಗು ಗುಂಡಿ ಮುಚ್ಚಿ

ಕಮಲನಗರ: ತಾಲ್ಲೂಕಿನ ಡಿಗ್ಗಿ-ಕಮಲನಗರ ನಡುವಿನ ರಸ್ತೆಯು ಮಳೆ ನೀರಿನಿಂದ ಹಾಳಾಗಿದೆ.

ನಿತ್ಯ ಈ ರಸ್ತೆಯಲ್ಲ ನೂರಾರು ವಾಹನಗಳ ಸಂಚರಿಸುತ್ತವೆ. ಜಲ್ಲಿ ಕಲ್ಲುಗಳು ತೇಲಿದ್ದು, ಬೈಕ್‌ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಸಂಬಂಧಿಸಿದವರು ತಕ್ಷಣವೇ ರಸ್ತೆ ದುರಸ್ತಿಗೆ ಮುಂದಾಗಬೇಕು.

–ಬಿ.ಸಂತೋಷ, ಸ್ಥಳೀಯ ನಿವಾಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.