ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಯಕ್ತಿಕ ಸೇಡಿನಿಂದ ಸುಳ್ಳು ಆರೋಪ

ಸುದ್ದಿಗೋಷ್ಠಿಯಲ್ಲಿ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ವಾಗ್ದಾಳಿ
Last Updated 18 ಮೇ 2020, 15:07 IST
ಅಕ್ಷರ ಗಾತ್ರ

ಬೀದರ್‌: ‘ಸಂಸದ ಭಗವಂತ ಖೂಬಾ ಅವರು ವೈಯಕ್ತಿಕ ಸೇಡಿನಿಂದಾಗಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಶಾಸಕ ಈಶ್ವರ ಖಂಡ್ರೆ ವಾಗ್ದಾಳಿ ನಡೆಸಿದರು.

‘ಖಂಡ್ರೆ ಅವರು ಕೇವಲ 5 ಸಾವಿರ ಮನೆಗಳನ್ನು ಮಂಜೂರು ಮಾಡಿಸಿ 25 ಸಾವಿರ ಮನೆಗಳನ್ನು ಮಂಜೂರು ಮಾಡಿಸಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದರು. ಸತ್ಯ ಗೊತ್ತಾದ ಮೇಲೆ ತಮ್ಮ ಹೇಳಿಕೆಯನ್ನೇ ತಿರುಚತೊಡಗಿದ್ದಾರೆ’ ಎಂದು ಸೋಮವಾರ ಇಲ್ಲಿ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

‘ಗಂಭೀರ ಆರೋಪಗಳಿದ್ದರೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲು ಮಾಡಬಹುದು. ನಾನು ಅದನ್ನು ಎದುರಿಸಲು ಸಿದ್ಧನಿದ್ದೇನೆ. ವಸತಿ ಯೋಜನೆ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ಅಧಿಕಾರಿಗಳೇ ನೀಡಿದ್ದಾರೆ. ಅಧಿಕಾರಿಗಳು ಒಪ್ಪಿಗೆ ಸೂಚಿಸಿದ ನಂತರವೇ ಹಕ್ಕುಪತ್ರ ಅಟೊಮೆಟಿಕ್‌ ಆಗಿ ಜನರೇಟ್‌ ಆಗುತ್ತದೆ. ಅದರಲ್ಲಿ ನನ್ನ ಪಾತ್ರ ಏನೂ ಇಲ್ಲ. ಆದರೆ, ಸಂಸದರು ಕನಿಷ್ಠ ಜ್ಞಾನವೂ ಇಲ್ಲದಂತೆ ಮಾತನಾಡುತ್ತಿದ್ದಾರೆ’ ಎಂದು ಮಾತಿನಿಂದ ಚುಚ್ಚಿದರು.

‘ಮನೆ ಪೂರ್ಣಗೊಂಡ ನಂತರ 15 ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಬೇಕು. ಆದರೆ, ಆರು ತಿಂಗಳಾದರೂ ಹಣ ಜಮಾ ಮಾಡಿಲ್ಲ. ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್‌.ಎಸ್.ಮಹಾದೇವ ಪ್ರಸಾದ ಅವರು ವಸತಿ ಯೋಜನೆಯಲ್ಲಿ ಅಕ್ರಮ ಎಸಗಿ ಅಮಾನತುಗೊಂಡಿದ್ದರು. ಕುರಿ ಕಾಯಲು ತೋಳವನ್ನು ನೇಮಕ ಮಾಡಿದಂತೆ ಅವರಿಂದ ತನಿಖೆ ನಡೆಸಿದ್ದಾರೆ’ ಎಂದು ಕುಟುಕಿದರು.

‘30 ವರ್ಷಗಳಿಂದ ರಾಜಕೀಯದಲ್ಲಿ ಇದ್ದೇನೆ. ಎಂದೂ ಸುಳ್ಳು ಹೇಳಿಲ್ಲ. ಸುಳ್ಳು ಸಾಯಲಿದೆ. ಸತ್ಯ ಉಳಿಯಲಿದೆ. ಸಣ್ಣಪುಟ್ಟ ಲೋಪಗಳು ಆಗಿದ್ದರೆ ಸರಿಪಡಿಸಲಿ. ಆದರೆ, ಫಲಾನುಭವಿಗಳ ಹಣ ತಡೆ ಹಿಡಿಯುವುದು ಬೇಡ. ಸಾಲ ಮಾಡಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಸರ್ಕಾರ ಹಣ ಬಿಡುಗಡೆ ಮಾಡದಿದ್ದರೆ ಫಲಾನುಭವಿಗಳು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿ ಬರಲಿದೆ. ಇದಕ್ಕೆ ಸರ್ಕಾರ ನೇರ ಹೊಣೆಯಾಗಲಿದೆ’ ಎಂದು ಎಚ್ಚರಿಸಿದರು.

‘ವಸತಿ ಸಚಿವ ಸೋಮಣ್ಣ ಅವರು ಬೆಂಗಳೂರಲ್ಲಿ ಒಂದು ಲಕ್ಷ ಮನೆಗಳನ್ನು ಕಟ್ಟಿಕೊಡಲು ಯೋಜನೆ ರೂಪಿಸಿದ್ದಾರೆ. ಅದಕ್ಕೆ ಹಣ ಹೊಂದಿಸಲು ಇಲ್ಲಿಯ ಫಲಾನುಭವಿಗಳ ಹಣ ತಡೆ ಹಿಡಿಯಲಾಗಿದೆ. ಸರ್ಕಾರದ ಬಳಿ ಹಣ ಇಲ್ಲದಿದ್ದರೆ ಸ್ಪಷ್ಟಪಡಿಸಬೇಕು. ಆದರೆ ಜನರನ್ನು ತಪ್ಪು ದಾರಿಗೆ ಎಳೆಯುವುದು ಸರಿಯಲ್ಲ’ ಎಂದರು.

‘ಐದು ಸಾವಿರ ಫಲಾನುಭವಿಗಳ ಹಣವನ್ನು ಒಂದೂವರೆ ವರ್ಷದಿಂದ ಪಾವತಿಸಿಲ್ಲ. ಈ ವಿಷಯವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಗಮನಕ್ಕೆ ತರಲಾಗುವುದು. ಆದರೂ ಹಣ ಬಿಡುಗಡೆ ಮಾಡದಿದ್ದರೆ ಲಾಕ್‌ಡೌನ್‌ ಮುಗಿದ ನಂತರ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT