ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ ಲೋಕಸಭೆ; ಏಪ್ರಿಲ್‌ 12ರಿಂದ ನಾಮಪತ್ರ

ಮೇ 7ರಂದು ಮತದಾನ; ಮತದಾನಕ್ಕೆ 2024 ಮತಗಟ್ಟೆ; 18.45 ಲಕ್ಷ ಅರ್ಹ ಮತದಾರರು
Published 18 ಮಾರ್ಚ್ 2024, 0:30 IST
Last Updated 18 ಮಾರ್ಚ್ 2024, 0:30 IST
ಅಕ್ಷರ ಗಾತ್ರ

ಬೀದರ್‌: ‘ಬೀದರ್‌ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಚುನಾವಣೆ ನಡೆಯಲಿದ್ದು, ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು.

ಬೀದರ್‌ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಜಿಲ್ಲೆಯ 6 ಹಾಗೂ ಕಲಬುರಗಿ ಜಿಲ್ಲೆಯ ಆಳಂದ, ಚಿಂಚೋಳಿ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಇದುವರೆಗೆ ಒಟ್ಟು 18.45 ಲಕ್ಷ ಅರ್ಹ ಮತದಾರರು ನೋಂದಣಿ ಮಾಡಿಸಿಕೊಂಡಿದ್ದು, ಮತದಾನಕ್ಕೆ 2024 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ಚುನಾವಣೆಗೆ ಏಪ್ರಿಲ್‌ 12ರಂದು ಅಧಿಸೂಚನೆ ಹೊರಡಿಸಲಾಗುವುದು. ಅದೇ ದಿನದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ನಾಮಪತ್ರ ಸಲ್ಲಿಕೆಗೆ ಏ. 19 ಕೊನೆಯ ದಿನ. ನಾಮಪತ್ರಗಳ ಪರಿಶೀಲನೆ ಏ. 20, ನಾಮಪತ್ರ ಹಿಂಪಡೆಯಲು ಏ. 22 ಕೊನೆಯ ದಿನವಾಗಿದೆ. ಮೇ 7ರಂದು ಮತದಾನ, ಜೂನ್‌ 4ರಂದು ಮತ ಎಣಿಕೆ ನಡೆಯಲಿದೆ. ಶನಿವಾರದಿಂದಲೇ ಕ್ಷೇತ್ರ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಗೆ ಬಂದಿದೆ ಎಂದು ವಿವರಿಸಿದರು.

ಚುನಾವಣೆಯಲ್ಲಿ ಭಾವಚಿತ್ರವಿರುವ ಮತದಾರರ ಪಟ್ಟಿ ಉಪಯೋಗಿಸಲಾಗುವುದು. ಮತದಾನ ಪ್ರಕ್ರಿಯೆಯಲ್ಲಿ ಎಲ್ಲರೂ ಪಾಲ್ಗೊಳ್ಳಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಅಂಗವಿಕಲರಿಗೆ ವೀಲ್‌ ಚೇರ್‌, ಹಿರಿಯ ನಾಗರಿಕರಿಗೆ ಮನೆಯಿಂದ ಮತಗಟ್ಟೆಗೆ ಕರೆತರಲು ಸಾರಿಗೆ ವ್ಯವಸ್ಥೆ, ಕುಡಿಯುವ ನೀರು, ನೆರಳು, ಶೌಚಾಲಯ ವ್ಯವಸ್ಥೆ ಮಾಡಲಾಗುವುದು ಎಂದರು.

‘ಚುನಾವಣಾ ಸಭೆ, ರ್‍ಯಾಲಿ, ವಾಹನ, ಚುನಾವಣಾ ಕಚೇರಿ, ಧ್ವನಿವರ್ಧಕಗಳ ಬಳಕೆಗೆ ಅನುಮತಿ ಪಡೆಯುವುದು ಕಡ್ಡಾಯ. ಇದಕ್ಕಾಗಿ ಅನುಮತಿ ಪಡೆಯಲು ಸುವಿಧಾ; ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಲಾಗಿದೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಅದರ ಪ್ರಯೋಜನ ಪಡೆಯಬಹುದು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ದಿಲೀಪ್‌ ಬದೋಲೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ಹಾಜರಿದ್ದರು.

ಅಂಕಿ ಅಂಶ

* ಏ. 12ರಿಂದ ನಾಮಪತ್ರ ಸಲ್ಲಿಕೆ ಆರಂಭ * ಏ. 19 ನಾಮಪತ್ರ ಸಲ್ಲಿಕೆಗೆ ಕೊನೆ ದಿನ * ಏ.20 ನಾಮಪತ್ರಗಳ ಪರಿಶೀಲನೆ * ಏ. 22 ನಾಮಪತ್ರ ಹಿಂಪಡೆಯಲು ಕೊನೆ ದಿನ * ಮೇ 7ರಂದು ಮತದಾನ * ಜೂನ್‌ 4ರಂದು ಮತ ಎಣಿಕೆ

ಬೀದರ್‌ ಲೋಕಸಭಾ ಕ್ಷೇತ್ರದ ಮತಕ್ಷೇತ್ರವಾರು ಮತದಾರರು ಹಾಗೂ ಮತಗಟ್ಟೆಗಳ ವಿವರ

ಕ್ಷೇತ್ರಗಳ ಹೆಸರು;ಮತಗಟ್ಟೆಗಳು;ಪುರುಷರು;ಮಹಿಳೆಯರು;ಇತರೆ;ಒಟ್ಟು ಬಸವಕಲ್ಯಾಣ–47;278;129018;120098;05;249121 ಹುಮನಾಬಾದ್‌–48; 255;128579;122382;14;250975 ಬೀದರ್‌ ದಕ್ಷಿಣ–49;229;107227;101783;04;209014 ಬೀದರ್‌–50;248;117534;115615;19;233168 ಭಾಲ್ಕಿ–51;263;121467;112938;03;234408 ಔರಾದ್‌–52;255;115852;107905;00;223757 ಚಿಂಚೋಳಿ–42;242;103757;99736;15;203508 ಆಳಂದ–46;254 125970;115474;34;241478 ಒಟ್ಟು;2024;949404;895931;94;1845429 ಮೂಲ: ಜಿಲ್ಲಾ ಚುನಾವಣಾಧಿಕಾರಿ ಕಚೇರಿ

30 ‘ಸಖಿ’ ಮತಗಟ್ಟೆಗಳು

ಬೀದರ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು 2024 ಮತಗಟ್ಟೆಗಳಲ್ಲಿ 30 ‘ಸಖಿ’ ಮತಗಟ್ಟೆ ಸ್ಥಾಪಿಸಲಾಗುವುದು. ಅಲ್ಲಿ ಎಲ್ಲರೂ ಮಹಿಳಾ ಸಿಬ್ಬಂದಿಯೇ ಕೆಲಸ ನಿರ್ವಹಿಸುತ್ತಾರೆ. ಮಹಿಳಾ ಮತದಾರರನ್ನು ಆಕರ್ಷಿಸಲು ‘ಸಖಿ’ ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ಒಂದು ಕಡೆ ಬಿದ್ರಿ ಕಲೆಗೆ ಸಂಬಂಧಿಸಿದ ಕೇಂದ್ರ ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು.

₹50 ಸಾವಿರ ನಗದಿಗೆ ಅವಕಾಶ

‘ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ದಾಖಲೆ ಇಲ್ಲದೆ ₹50 ಸಾವಿರದವರೆಗೆ ನಗದು ಇಟ್ಟುಕೊಂಡು ಕೊಂಡೊಯ್ಯಬಹುದು. ಅದಕ್ಕಿಂತ ಹೆಚ್ಚಿನ ಹಣವಿದ್ದರೆ ಕಡ್ಡಾಯವಾಗಿ ದಾಖಲೆಗಳನ್ನು ತೋರಿಸಬೇಕು. ಚುನಾವಣಾಧಿಕಾರಿಗಳಿಗೆ ಅದರ ವಿವರ ಕೊಡಬೇಕು. ಸೂಕ್ತ ಮಾಹಿತಿ ಕೊಡದಿದ್ದಲ್ಲಿ ಹಣ ಜಪ್ತಿ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು. ‘ಜಿಲ್ಲೆಯಲ್ಲಿ ಒಟ್ಟು 18 ಚೆಕ್‌ ಪೋಸ್ಟ್‌ಗಳನ್ನು ತೆರೆಯಲಾಗಿದೆ. ಪ್ರತಿಯೊಂದು ವಾಹನಗಳ ತಪಾಸಣೆ ಮಾಡಲಾಗುವುದು. ‌‌ಚುನಾವಣೆ ಸಂದರ್ಭದಲ್ಲಿ ಸಮಾಜಘಾತುಕ ಶಕ್ತಿಗಳು ಅನಗತ್ಯ ಕಿರಿಕಿರಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಳೆದ ಒಂದು ವರ್ಷದಲ್ಲಿ 21 ಜನರನ್ನು ಗಡಿಪಾರು ಮಾಡಲಾಗಿದ್ದು ಇತ್ತೀಚೆಗೆ ಎಂಟು ಜನರ ವಿರುದ್ಧ ಕ್ರಮ ಜರುಗಿಸಲಾಗಿದೆ. ಒಬ್ಬನಿಗೆ ಗೂಂಡಾ ಪ್ರಕರಣದಡಿ ಬಂಧಿಸಿ ಕಲಬುರಗಿ ಜೈಲಿಗೆ ಕಳುಹಿಸಲಾಗಿದೆ ಎಂದು ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌. ತಿಳಿಸಿದರು.

ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ

‘ಸಾಮಾಜಿಕ ಜಾಲತಾಣಗಳ ಮೇಲೆ ವಿಶೇಷ ನಿಗಾ ವಹಿಸಲಾಗುವುದು. ಇದಕ್ಕಾಗಿ ಪ್ರತ್ಯೇಕ ತಂಡ ರಚಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘಿಸಿ ವಿಷಯ ಹಂಚಿಕೊಳ್ಳುವವರ ವಿರುದ್ಧ ಹಾಗೂ ಗ್ರುಪ್‌ ಅಡ್ಮಿನ್‌ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ‘ಕಾಸಿಗಾಗಿ ಸುದ್ದಿ’ ಮೇಲೂ ನಿಗಾ ವಹಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ವಿವರಿಸಿದರು. ಎಲ್ಲಾದರೂ ಅಕ್ರಮ ನಡೆಯುತ್ತಿದ್ದರೆ ಅದರ ಕುರಿತು ‘ಸಿ–ವಿಸಿಲ್‌ ಆ್ಯಪ್‌’ನಲ್ಲಿ ಸಾರ್ವಜನಿಕರು ದೂರು ಸಲ್ಲಿಸಬಹುದು. ಮೊಬೈಲ್‌ನಲ್ಲಿ ಛಾಯಾಚಿತ್ರ ವಿಡಿಯೊ ಸೆರೆಹಿಡಿದು ಕಳಿಸಬಹುದು. ಅದನ್ನು ಆಧರಿಸಿ ಕ್ರಮ ಜರುಗಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT