ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ, ಶ್ರೀರಾಮಸೇನೆ, ವಿಎಚ್‌ಪಿ ಕಾರ್ಯಕರ್ತರಿಂದ ವಿಜಯೋತ್ಸವ

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು
Last Updated 5 ಆಗಸ್ಟ್ 2019, 15:33 IST
ಅಕ್ಷರ ಗಾತ್ರ

ಬೀದರ್: ಕೇಂದ್ರ ಸರ್ಕಾರವು ಸಂವಿಧಾನದ ಕಲಂ 370 ಮತ್ತು 35–ಎ ಕಲಂ ರದ್ದುಪಡಿಸಿರುವುದನ್ನು ಸ್ವಾಗತಿಸಿ ಬಿಜೆಪಿ, ವಿಶ್ವ ಹಿಂದೂ ಪರಿಷತ್‌ ಹಾಗೂ ಶ್ರೀರಾಮ ಸೇನೆಯ ಕಾರ್ಯಕರ್ತರು ನಗರದ ಕೆಇಬಿ ಕಚೇರಿ ಮುಂಭಾಗದ ಹನುಮಾನ ಮಂದಿರದ ಆವರಣದಲ್ಲಿ ಸೋಮವಾರ ವಿಜಯೋತ್ಸವ ಆಚರಿಸಿದರು.

ಕಾರ್ಯಕರ್ತರು ಹನುಮಾನ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪರವಾಗಿ ಘೋಷಣೆಗಳನ್ನು ಕೂಗಿದರು. ಪಟಾಕಿ ಸಿಡಿಸಿ, ಸಿಹಿ ವಿತರಿಸಿದರು. ಡೊಳ್ಳು ಬಾರಿಸಿ ಕುಣಿದು ಕುಪ್ಪಳಿಸಿದರು.

ಶ್ರೀರಾಮ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ವೀರಶೆಟ್ಟಿ ಖ್ಯಾಮಾ, ವಿಎಚ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣ ಸಾಳೆ, ಕಾಶೀನಾಥ ಬೆಲ್ದಾಳೆ, ಲಕ್ಷ್ಮಣ ರಾಠೋಡ, ಭಗತ್‌ಸಿಂಗ್‌ ಯೂತ್‌ ಬ್ರಿಗೇಡ್‌ನ ಜಸ್‌ಪ್ರೀತ್‌ ಸಿಂಗ್ (ಮೊಂಟಿ), ಜಗನ್ನಾಥ ಕರಂಜೆ, ಅಮೃತ ಪಾಟೀಲ, ವಿಜಯಕುಮಾರ ಪಾಟೀಲ, ಮಲ್ಲುಸ್ವಾಮಿ, ರವಿ ಕೋಡಗೆ, ಸಂಜು ಜೀರಗೆ, ವಿಶ್ವಾನಾಥ ಉಪ್ಪೆ, ಪೆಂಟರಾಡ್ಡಿ ಅಮಲಾಪುರ, ಶಂಕರ ಖ್ಯಾಮಾ, ಪ್ರಕಾಶ ಕೋಡಗೆ ಪಾಲ್ಗೊಂಡಿದ್ದರು.

ಕೇಂದ್ರದ ಐತಿಹಾಸಿಕ ನಿರ್ಧಾರ
ಬೀದರ್‌:
ಏಕ್ ದೇಶ್ ಮೇ, ದೋ ವಿಧಾನ್, ದೋ ಪ್ರಧಾನ್ ಔರ್ ದೋ ನಿಷಾನ್ ನಹಿ ಚಲೇಗಾ’ ಎಂದು ಹೇಳಿದ್ದ ಡಾ. ಶ್ಯಾಮಪ್ರಸಾದ ಮುಖರ್ಜಿಯವರ ಕನಸು ಇಂದು ನನಸಾಗಿದೆ ಎಂದು ಸಂಸದ ಭಗವಂತ ಖೂಬಾ ಹರ್ಷವ್ಯಕ್ತಪಡಿಸಿದ್ದಾರೆ.

‘ಭಾರತದ ಮುಕುಟ, ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ 60 ವರ್ಷಗಳ ವರೆಗೆ ಸಂವಿಧಾನದ ಕಲಂ 370 ಮತ್ತು 35–ಎ ಕಲಂ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದು ಲಡಾಖ್, ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಿರುವುದು ಐತಿಹಾಸಿಕ ನಿರ್ಧಾರವಾಗಿದೆ ಎಂದು ಹೇಳಿದ್ದಾರೆ.

ಉಗ್ರರ ಪೈಶಾಚಿಕ ಕೃತ್ಯಕ್ಕೆ ಮಡಿದ ಲಕ್ಷಾಂತರ ಸೈನಿಕರಿಗೆ ಗೌರವ ಸಲ್ಲಿಸಿದಂತಾಗಿದೆ. ಜಮ್ಮು ಮತ್ತು ಕಾಶ್ಮೀರದ ಲಕ್ಷಾಂತರ ನಾಗರಿಕರಿಗೆ ದೊರೆತ ನೈತಿಕ ಗೆಲುವು ದೊರೆತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಷಾ ಅವರ ಐತಿಹಾಸ ನಿರ್ಧಾರ ದೇಶದ ಘನತೆಯನ್ನು ಹೆಚ್ಚಿಸಿದೆ ಎಂದು ಬಣ್ಣಿಸಿದ್ದಾರೆ.

ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿ ಅಲೆ ಏಳಲಿದೆ. ಕತ್ತಲೆಯಲ್ಲಿ ಮುಳುಗಿದ್ದ ಜನರಿಗೆ ಬೆಳಕು ನೀಡಿದಂತಾಗಲಿದೆ. ಜಮ್ಮು–ಕಾಶ್ಮೀರದಲ್ಲಿ ಭಯೋತ್ಪಾದಕರ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದ ರಾಜಕಾರಣಿಗಳ ದಿಕ್ಕು ತಪ್ಪಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT