ಬುಧವಾರ, ಅಕ್ಟೋಬರ್ 20, 2021
24 °C
ಅಭಿನಂದನಾ ಸಮಾರಂಭ

ಪ್ರಧಾನಿಯಿಂದ ಜನ ಮೆಚ್ಚುವ ಕಾರ್ಯ: ಭಗವಂತ ಖೂಬಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ‘ಬಡವರ ಬಂಧುವಾಗಿ ಕಾರ್ಯ ನಿರ್ವಹಿಸಿ ಜನವಿಶ್ವಾಸಕ್ಕೆ ಪಾತ್ರರಾಗಿದ್ದರಿಂದ ಶರಣು ಸಲಗರ ಅವರು ಈ ಕ್ಷೇತ್ರದ ಉಪ ಚುನಾವಣೆಯಲ್ಲಿ 71 ಸಾವಿರ ಮತಗಳನ್ನು ಪಡೆದು ವಿಜೇತರಾದರು' ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದ್ದಾರೆ.

ನಗರದ ತೇರು ಮೈದಾನದ ಸಭಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಉಪ ಚುನಾವಣೆಯಲ್ಲಿ ಪಕ್ಷ ಗೆಲ್ಲಲು ಕಾರಣರಾದ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಪ್ರಧಾನಿ ಮೋದಿಯವರು ಜನಮೆಚ್ಚುವ ಕಾರ್ಯ ಕೈಗೊಳ್ಳುತ್ತಿರುವ ಕಾರಣ ಇಡೀ ವಿಶ್ವವೇ ಅವರನ್ನು ಹೊಗಳುತ್ತಿದೆ. ಕಾಂಗ್ರೆಸ್ ನಾಮಾವಶೇಷ ಆಗುವ ಸ್ಥಿತಿಯಲ್ಲಿದೆ. ಎಲ್ಲ ಸಮಾಜಗಳ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಯುವ ಪೀಳಿಗೆ ಕಾಂಗ್ರೆಸ್ ಆಡಳಿತವನ್ನೇ ನೋಡದಂತೆ ಎಲ್ಲ ಚುನಾವಣೆಗಳಲ್ಲೂ ಪಕ್ಷ ಗೆಲ್ಲುವಂತೆ ಮಾಡಬೇಕಾಗಿದೆ’ ಎಂದು ತಿಳಿಸಿದರು.

ಶಾಸಕ ಶರಣು ಸಲಗರ ಮಾತನಾಡಿ, `ಬಸವರಾಜ ಬೊಮ್ಮಾಯಿ ಹಾಗೂ ಭಗವಂತ ಖೂಬಾ ಒಳಗೊಂಡು ಅನೇಕ ಮುಖಂಡರು ಹದಿನೈದು ದಿನ ಇಲ್ಲಿ ಠಿಕಾಣಿ ಹೂಡಿ ನನ್ನ ಗೆಲುವಿಗೆ ಶ್ರಮಿಸಿದ್ದಾರೆ.  70 ವರ್ಷಗಳಲ್ಲಿ ಅನೇಕ ದೇಶಗಳು ಪ್ರಗತಿ ಪಥದಲ್ಲಿ ಸಾಗಿವೆ. ಆದರೆ ಕಾಂಗ್ರೆಸ್ ಎಲ್ಲ ಸಮಸ್ಯೆಗಳನ್ನು ಹಾಗೆಯೇ ಉಳಿಸಿದೆ. ಆದ್ದರಿಂದ ಪ್ರಧಾನಿ ಮೋದಿಯವರು ಹಾಗೂ ಸಚಿವ ಭಗವಂತ ಖೂಬಾ ಅವರ ಉತ್ತಮ ಕಾರ್ಯಗಳಿಂದ ದೇಶದೋನ್ನತಿ ಆಗುವಲ್ಲಿ ಸಂಶಯವಿಲ್ಲ' ಎಂದರು.

ಸೊಲ್ಲಾಪುರ ಸಂಸದ ಜಯಸಿದ್ದೇಶ್ವರ ಸ್ವಾಮೀಜಿ, ಮಾಜಿ ಶಾಸಕ ಎಂ.ಜಿ.ಮುಳೆ ಮಾತನಾಡಿದರು.

ಬಿಜೆಪಿ ವಿಭಾಗೀಯ ಪ್ರಭಾರಿ ಈಶ್ವರಸಿಂಗ ಠಾಕೂಡ, ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ವಕಾರೆ, ಪ್ರಧಾನ ಕಾರ್ಯದರ್ಶಿ ಹಣಮಂತ ಧನಶೆಟ್ಟಿ, ವೀರಣ್ಣ ಕಾರಬಾರಿ ಮಾತನಾಡಿದರು. ಮಾಜಿ ಶಾಸಕ ಪ್ರಕಾಶ ಖಂಡ್ರೆ, ರೌಫೊದ್ದೀನ್ ಕಚೇರಿವಾಲೆ, ರಾಜ್ಯ ಸಮಿತಿ ಸದಸ್ಯರಾದ ದೀಪಕ ಗಾಯಕವಾಡ, ಅನಿಲ ಭೂಸಾರೆ, ರವಿ ಚಂದನಕೇರೆ, ಪ್ರದೀಪ ವಾತಡೆ, ಸಂಜಯ ವಾಡೀಕರ್, ಸಿದ್ದು ಪಾಟೀಲ, ಶಿವರಾಜ ಗಂದಗೆ, ಸೂರ್ಯಕಾಂತ ಚಿಲ್ಲಾಬಟ್ಟೆ, ಶಂಕರ ನಾಗದೆ, ಮಲ್ಲಿಕಾರ್ಜುನ ಕುಂಬಾರ ಮೊದಲಾದವರು ಪಾಲ್ಗೊಂಡಿದ್ದರು.

ಸಸ್ತಾಪುರ ಬಂಗ್ಲಾದಿಂದ ತ್ರಿಪುರಾಂತ ವಾಲ್ಮೀಕಿ ಚೌಕ್ ವರೆಗೆ ಬೈಕ್ ಮೆರವಣಿಗೆ ನಡೆಸಿ ಅಲ್ಲಿಂದ ಮುಖ್ಯರಸ್ತೆಯ ಮೂಲಕ ಸಭಾ ಭವನದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ವಾದ್ಯ ಮೇಳದವರು ಪಾಲ್ಗೊಂಡಿದ್ದರು. ಎಲ್ಲೆಡೆ ಸ್ವಾಗತ ಕಮಾನುಗಳನ್ನು, ಪಕ್ಷದ ಧ್ವಜ, ಕಟೌಟ್ ಕಟ್ಟಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.