ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಪರಿಷತ್ ಚುನಾವಣೆಗೆ ಸಿದ್ಧರಾಗಿ -ಸಚಿವ ಪ್ರಭು ಚವಾಣ್

Last Updated 18 ನವೆಂಬರ್ 2021, 4:31 IST
ಅಕ್ಷರ ಗಾತ್ರ

ಔರಾದ್: ‘ಡಿಸೆಂಬರ್ 10ರಂದು ನಡೆಯುವ ವಿಧಾನ ಪರಿಷತ್ ಚುನಾವಣೆ ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಸಲಹೆ ನೀಡಿದರು.

ಪಟ್ಟಣದಲ್ಲಿ ಬುಧವಾರ ಬಿಜೆಪಿ ತಾಲ್ಲೂಕು ಮಟ್ಟದ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಕಳೆದ ಬಾರಿ ನಾವು ವಿಧಾನ ಪರಿಷತ್ ಸ್ಥಾನ ಕಳೆದುಕೊಂಡಿದ್ದೇವೆ. ಈ ಸಲ ಅದು ಮರುಕಳಿಸಬಾರದು. ನಾಳೆ ಇಲ್ಲವೇ ನಾಡಿದ್ದು ಅಭ್ಯರ್ಥಿ ಹೆಸರು ಪ್ರಕಟವಾಗಲಿದೆ. ಅಭ್ಯರ್ಥಿ ಯಾರೇ ಆಗಲಿ ನಮ್ಮ ಕೆಲಸ ನಾವು ಪ್ರಾಮಾಣಿಕವಾಗಿ ಮಾಡಿ ಪಕ್ಷದ ಅಭ್ಯರ್ಥಿ ಗೆಲ್ಲಿಸಿ ತರುವ ಹೊಣೆಗಾರಿಕೆ ಎಲ್ಲರ ಮೇಲಿದೆ’ ಎಂದರು.

‘ಔರಾದ್ ಹಾಗೂ ಕಮಲನಗರ ತಾಲ್ಲೂಕು ಸೇರಿ ಒಟ್ಟು 39 ಗ್ರಾಮ ಪಂಚಾಯಿತಿಯಲ್ಲಿ 670 ಜನ ಸದಸ್ಯರಿದ್ದಾರೆ. ಇವರಲ್ಲಿ 600 ಸದಸ್ಯರ ಮತ ನಮ್ಮ ಪಕ್ಷದ ಅಭ್ಯರ್ಥಿಗೆ ಬರಬೇಕು. ನೀವು ಎಲ್ಲ ಸದಸ್ಯರನ್ನು ನೇರವಾಗಿ ಸಂಪರ್ಕಿಸಿ ಮನವೊಲಿಸಬೇಕು ಇದೇ 20ರಂದು ಬೀದರ್‌ನಲ್ಲಿ ನಡೆಯ ಲಿರುವ ಜನಸ್ವರಾಜ್ ಯಾತ್ರೆಯಲ್ಲಿ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆ ಮತದಾರ ಸದಸ್ಯರು ಭಾಗವಹಿಸುವಂತೆ ನೋಡಿಕೊಳ್ಳಬೇಕು’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳರ್ ಮಾತನಾಡಿ, ‘ಈಗ ನಮ್ಮ ಮುಂದಿರುವುದು ವಿಧಾನ ಪರಿಷತ್ ಹಾಗೂ ಜಿಲ್ಲಾ ತಾಲ್ಲೂಕು ಪಂಚಾಯಿತಿ ಚುನಾವಣೆ. ಇದು ಸಮರ್ಥವಾಗಿ ಎದುರಿಸಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿ ತರುವಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು. ಇದೇ 20ರಂದು ಬೀದರ್‌ನಲ್ಲಿ ನಡೆಯಲಿರುವ ಜನಸ್ವರಾಜ್ ಯಾತ್ರೆಯಲ್ಲಿ ಪಕ್ಷದ ರಾಜಾಧ್ಯಕ್ಷ ನಳೀನಕುಮಾರ ಕಟೀಲ್ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಅಂಬಿಕಾ ಕೇರಬಾ ಪವಾರ್, ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಬಂಡೆಪ್ಪ ಕಂಟೆ, ಶಿವಾಜಿರಾವ ಕಾಳೆ, ಧುರೀಣ ಕಲ್ಲಪ್ಪ ಉಪ್ಪೆ, ವಸಂತ ಬಿರಾದಾರ, ವಿಜಯಕುಮಾರ ಪಾಟೀಲ, ಅರಹಂತ ಸಾವಳೆ, ಪ್ರಕಾಶ ಟೊಣ್ಣೆ, ಚೆನ್ನಬಸಪ್ಪ ಬಿರಾದಾರ, ಶರಣಪ್ಪ ಪಂಚಾಕ್ಷರಿ, ಧೊಂಡಿಬಾ ನರೋಟೆ, ಕಿರಣ ಪಾಟೀಲ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡರು.

‘ಇಬ್ಬರಿಗೂ ಈ ಚುನಾವಣೆ ಸವಾಲು’
‘ರಾಜ್ಯದಲ್ಲಿ ನಾನು ಸಚಿವ. ಕೇಂದ್ರದಲ್ಲಿ ಭಗವಂತ ಖೂಬಾ ಸಚಿವರು. ಹೀಗಿದ್ದಾಗ ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಹೇಳಿದರು.

ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಚುನಾವಣೆ ವಿಷಯ ಪ್ರಸ್ತಾಪಿಸಿ ‘ಪಕ್ಷ ಹಾಗೂ ಸರ್ಕಾರದಲ್ಲಿ ನಮ್ಮ ವರ್ಚಸ್ಸು, ಗೌರವ ಹೆಚ್ಚಿಸಲು ಈ ಚುನಾವಣೆ ಗೆಲ್ಲಲೆಬೇಕು. ಇಲ್ಲವಾದಲ್ಲಿ ಪಕ್ಷದ ವರಿಷ್ಠರಿಗೆ ಮುಖ ತೋರಿಸಲು ಮುಜುಗರ ಅನುಭವಿಸಬೇಕಾಗುತ್ತದೆ. ಹೀಗಾಗಿ ತಾವು ಅದಕ್ಕೆ ಅವಕಾಶ ಕೊಡಬೇಡಿ’ ಎಂದು ಪಕ್ಷದ ವಿವಿಧ ಮೋರ್ಚಾಗಳ ಪ್ರಮುಖರಲ್ಲಿ ಕೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT