ಸೋಮವಾರ, ಡಿಸೆಂಬರ್ 9, 2019
26 °C
ವೆಲ್‌ಮೆಗ್ನಾ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ: ತಹಶೀಲ್ದಾರ್ ಕೀರ್ತಿ ಸಲಹೆ

ಸರ್ಕಾರದ ಸೌಲಭ್ಯಗಳ ಲಾಭ ಪಡೆಯಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಅಂಗವಿಕರು ಸರ್ಕಾರದ ವಿವಿಧ ಸೌಲಭ್ಯಗಳ ಲಾಭ ಪಡೆಯಬೇಕು’ ಎಂದು ತಹಶೀಲ್ದಾರ್ ಕೀರ್ತಿ ಚಾಲಕ್ ಹೇಳಿದರು.

ಇಲ್ಲಿಯ ವೆಲ್‌ಮೆಗ್ನಾ ನೇತ್ರ ಆಸ್ಪತ್ರೆಯಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಅಂಗವಿಕಲರ ಏಳಿಗೆಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ’ ಎಂದು ತಿಳಿಸಿದರು.

‘ವೆಲ್‌ಮೆಗ್ನಾ ಗುಡ್ ನ್ಯೂಸ್ ಸಂಸ್ಥೆಯು ಮಾನವೀಯ ನೆಲೆಯಲ್ಲಿ ಕುಷ್ಠರೋಗಿಗಳು ಸೇರಿದಂತೆ ದೈಹಿಕ ಅಂಗವೈಕಲ್ಯ ಹೊಂದಿದವರ ಸೇವೆ ಮಾಡುತ್ತಿದೆ. ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರಗಳ ಮೂಲಕ ಬಡವರಿಗೆ ನೆರವಾಗುತ್ತಿದೆ. ಸಂಸ್ಥೆಯ ನಿರ್ದೇಶಕಿ ಡಾ. ಸಿಬಿಲ್ ಸಾಲಿನ್ಸ್ ಅವರ ಸೇವೆ ಶ್ಲಾಘನೀಯವಾಗಿದೆ’ ಎಂದು ಹೇಳಿದರು.

‘ಅಂಗವಿಕಲರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಕಷ್ಟು ಉದಾಹರಣೆಗಳು ಇವೆ. ಕಾರಣ, ಅಂಗವಿಕಲರು ಕೀಳರಿಮೆಯನ್ನು ತೊಡೆದು ಹಾಕಬೇಕು. ಜೀವನದಲ್ಲಿ ಆತ್ಮವಿಶ್ವಾಸದೊಂದಿಗೆ ಮುನ್ನಡೆಯಬೇಕು’ ಎಂದು ವೆಲ್‌ಮೆಗ್ನಾ ಗುಡ್ ನ್ಯೂಸ್ ಸಂಸ್ಥೆಯ ನಿರ್ದೇಶಕಿ ಡಾ. ಸಿಬಿಲ್ ಸಾಲಿನ್ಸ್ ತಿಳಿಸಿದರು.

‘ಸರ್ಕಾರದ ವಿವಿಧ ಸೌಲಭ್ಯಗಳನ್ನು ಅರ್ಹ ಅಂಗವಿಕಲರಿಗೆ ತಲುಪಿಸಬೇಕು. ಅವರಲ್ಲಿ ಅಂಗವೈಕಲ್ಯ ಮೆಟ್ಟಿ ನಿಲ್ಲುವ ಆತ್ಮಸ್ಥೈರ್ಯ ಬೆಳೆಸಬೇಕು’ ಎಂದು ಸಲಹೆ ಮಾಡಿದರು.

‘ದಾನಗಳಲ್ಲೇ ಶ್ರೇಷ್ಠವಾದದ್ದು ರಕ್ತದಾನ. ರಕ್ತದಾನವು ಜೀವ ಉಳಿಸಲು ನೆರವಾಗುತ್ತದೆ’ ಎಂದು ವೆಲ್‌ಮೆಗ್ನಾ ನೇತ್ರ ಆಸ್ಪತ್ರೆಯ ಆಡಳಿತಾಧಿಕಾರಿಯಾದ ನಗರಸಭೆ ಮಾಜಿ ಸದಸ್ಯ ಫಿಲೋಮನ್‌ರಾಜ್‌ ಪ್ರಸಾದ್ ಹೇಳಿದರು.

‘ರಕ್ತದಾನದ ಬಗ್ಗೆ ಕೆಲವರಲ್ಲಿ ತಪ್ಪು ಕಲ್ಪನೆಗಳು ಇವೆ. ರಕ್ತದಾನದಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಬದಲಾಗಿ, ರಕ್ತದಾನವು ಕ್ರೀಯಾಶೀಲತೆ ಹೆಚ್ಚಿಸುತ್ತದೆ. ಆರೋಗ್ಯ ವೃದ್ಧಿಗೂ ಸಹಕಾರಿಯಾಗುತ್ತದೆ’ ಎಂದು ಹೇಳಿದರು.

‘ವೆಲ್‌ಮೆಗ್ನಾ ಗುಡ್ ನ್ಯೂಸ್ ಸಂಸ್ಥೆಯು ವೈದ್ಯಕೀಯ ಸೇವೆ ಜತೆಗೆ ಸಾಮಾಜಿಕ ಚಟುವಟಿಕೆಗಳಲ್ಲೂ ನಿರತವಾಗಿದೆ. ಉಚಿತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ, ರಕ್ತದಾನ ಶಿಬಿರಗಳನ್ನು ಸಂಘಟಿಸುತ್ತಿದೆ. ಊಟ, ವಸತಿ, ಔಷಧಿ ಜತೆಗೆ ನೂರಾರು ಕುಷ್ಠರೋಗಿಗಳ ಆರೈಕೆ ಮಾಡುತ್ತಿದೆ’ ಎಂದು ತಿಳಿಸಿದರು.

ಜಿಲ್ಲಾ ರಕ್ತನಿಧಿ ಕೇಂದ್ರದ ಡಾ. ರಾಜೇಶ ಪಾರಾ, ಆಸ್ಪತ್ರೆಯ ಡಾ. ವೀರೇಂದ್ರ ಪಾಟೀಲ, ಪುಟ್ಟರಾಜ ಬಲ್ಲೂರಕರ್, ಸಂಧ್ಯಾ, ಶಾಮಣ್ಣ, ಅನಿತಾ, ಅಬ್ದುಲ್ ಸಮದ್ ಇದ್ದರು.

ವೆಲ್‌ಮೆಗ್ನಾ ನೇತ್ರ ಆಸ್ಪತ್ರೆ ಹಾಗೂ ಜಿಲ್ಲಾ ರಕ್ತ ನಿಧಿ ಕೇಂದ್ರದ ಸಹಯೋಗದಲ್ಲಿ ಏರ್ಪಡಿಸಿದ್ದ ಶಿಬಿರದಲ್ಲಿ 25 ಜನ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.

ಪ್ರತಿಕ್ರಿಯಿಸಿ (+)