ಹಿಂದುಳಿದ ಜಿಲ್ಲೆ ಹಣೆಪಟ್ಟಿ ಕಳಚುವೆ: ಬಿಎಸ್‌ಪಿ ಅಭ್ಯರ್ಥಿ ಶಾನುಲ್ ಹಕ್ ಬುಖಾರಿ

ಭಾನುವಾರ, ಮೇ 26, 2019
31 °C

ಹಿಂದುಳಿದ ಜಿಲ್ಲೆ ಹಣೆಪಟ್ಟಿ ಕಳಚುವೆ: ಬಿಎಸ್‌ಪಿ ಅಭ್ಯರ್ಥಿ ಶಾನುಲ್ ಹಕ್ ಬುಖಾರಿ

Published:
Updated:
Prajavani

ಬೀದರ್‌: ಶಾನುಲ್ ಹಕ್ ಬುಖಾರಿ ಅವರಿಗೆ 70 ವರ್ಷ. ಬದುಕಿನ ಬಹುಭಾಗವನ್ನು ಕಾಂಗ್ರೆಸ್‌ನಲ್ಲೇ ಕಳೆದು ಇದೀಗ ಬಿಎಸ್‌ಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್‌ನಲ್ಲಿದ್ದಾಗ ಚಿಟಗುಪ್ಪ ಪಟ್ಟಣ ಪಂಚಾಯಿತಿ ಸದಸ್ಯ, ಅಧ್ಯಕ್ಷ ಹಾಗೂ ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಮುಸ್ಲಿಮರಿಗೆ ಟಿಕೆಟ್‌ ಕೊಡಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್‌ ತೊರೆದು ಬಿಎಸ್‌ಪಿಯಿಂದ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಅವರು ರಾಜಕೀಯ ಅನುಭವದ ಜತೆಗೆ ತಮ್ಮ ಮನದಾಳವನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

ಕ್ಷೇತ್ರದ ಅಭಿವೃದ್ಧಿಗೆ ರೂಪಿಸಿರುವ ಯೋಜನೆಗಳು ಏನು?

ಬೀದರ್‌ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಕುಂಠಿತಗೊಂಡಿದೆ. ಹಿಂದೆ ಇಂದಿರಾ ಗಾಂಧಿ ಅವರು ಕೈಗಾರಿಕೆಗಳೇ ಇಲ್ಲದ ಜಿಲ್ಲೆ ಎಂದು ಘೋಷಣೆ ಮಾಡಿ ಕೈಗಾರಿಕೋದ್ಯಮ ಆರಂಭಿಸಲು ಅನೇಕ ರೀತಿಯ ರಿಯಾಯಿತಿ ಹಾಗೂ ಸೌಕರ್ಯ ಕಲ್ಪಿಸಿಕೊಟ್ಟರು. ಆದರೆ, ನೆರೆಯ ರಾಜ್ಯದ ಉದ್ಯಮಿಗಳು ಇಲ್ಲಿ ಸೌಲಭ್ಯಗಳನ್ನು ಬಾಚಿಕೊಂಡು ತಮ್ಮ ರಾಜ್ಯಗಳಿಗೆ ಮರಳಿದರು. ಸಂಸತ್ತಿನಲ್ಲಿ ಧ್ವನಿ ಎತ್ತಿ ಹಿಂದುಳಿದ ಜಿಲ್ಲೆಯ ಹಣೆಪಟ್ಟಿ ಕಳಚಿ ಹೊಸ ಕೈಗಾರಿಕೆಗಳನ್ನು ಆರಂಭಿಸಲು ಉತ್ತೇಜನ ನೀಡುವುದು ಹಾಗೂ ಯುವಕರಿಗೆ ಉದ್ಯೋಗ ಕಲ್ಪಿಸಿಕೊಡುವುದು ನನ್ನ ಉದ್ದೇಶ.

ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಬಿಎಸ್‌ಪಿ ಖಾತೆ ತೆರೆಯಲು ಸಾಧ್ಯವಿದೆಯೇ ?

ನನಗೆ ತಿಳಿದಿರುವ ಪ್ರಕಾರ ಜಿಲ್ಲೆಯಲ್ಲಿ 4.60 ಲಕ್ಷ ಪರಿಶಿಷ್ಟರು, 4.20 ಲಕ್ಷ ಮುಸ್ಲಿಂರು, 2.25 ಲಕ್ಷ ಲಿಂಗಾಯತ ಹಾಗೂ 2.18 ಲಕ್ಷ ಮರಾಠ ಮತದಾರರು ಇದ್ದಾರೆ. ಕ್ಷೇತ್ರದ ಮತದಾರರು ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳ ಆಡಳಿತ ನೋಡಿದ್ದಾರೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ. ಪರಿಶಿಷ್ಟರು ಹಾಗೂ ಮುಸ್ಲಿಮರು ಒಗ್ಗೂಡಿದರೆ ಒಂದು ಪವಾಡ ಆಗುವುದರಲ್ಲಿ ಯಾವುದೇ ಸಂದೇಹ ಇಲ್ಲ. ಬಿಎಸ್‌ಪಿ ಸುಲಭವಾಗಿ ಖಾತೆ ತೆರೆಯಲಿದೆ ಎನ್ನುವುದು ನನ್ನ ವಿಶ್ವಾಸ.

ಬಿಜೆಪಿ–ಕಾಂಗ್ರೆಸ್‌ ಎದುರಾಳಿಗಳನ್ನು ಹೇಗೆ ಎದುರಿಸುತ್ತೀರಿ?

ಮುಸ್ಲಿಮರು ಇವತ್ತಿನವರೆಗೂ ತಮಗಾಗಿ ಏನನ್ನೂ ಕೇಳಿರಲಿಲ್ಲ. ಈ ಬಾರಿ ಕಾಂಗ್ರೆಸ್‌ ಟಿಕೆಟ್‌ ಕೇಳಿದರೂ ಕೊಡಲಿಲ್ಲ. ಹೀಗಾಗಿ ನಾನು ಕಾಂಗ್ರೆಸ್‌ ತೊರೆದು ಬಿಎಸ್‌ಪಿ ಸೇರಬೇಕಾಯಿತು. ಸಮುದಾಯದ ಬೆಂಬಲ ಹಾಗೂ ಕಾಂಗ್ರೆಸ್‌ನ ಕೆಲ ಮುಖಂಡರ ಆಶೀರ್ವಾದ ನನ್ನೊಂದಿಗೆ ಇದೆ. ಕ್ಷೇತ್ರದ ಮತದಾರರು ವಿಧಾನಸಭೆಯಲ್ಲಿ ಒಮ್ಮೆ ಬಿಎಸ್‌ಪಿ ಅಭ್ಯರ್ಥಿಯನ್ನು ಗೆಲ್ಲಿಸಿ ರಾಜ್ಯದ ಜನ ಬೆರಗಾಗುವಂತೆ ಮಾಡಿದ್ದರು. ಲೋಕಸಭೆ ಚುನಾವಣೆಯಲ್ಲಿ ನನಗೆ ಅವಕಾಶ ಕಲ್ಪಿಸುವ ವಿಶ್ವಾಸ ಇದೆ.

ರಾಷ್ಟ್ರೀಯ ಪಕ್ಷಗಳು ಅಲ್ಪಸಂಖ್ಯಾತರನ್ನು ಕಡೆಗಣಿಸಿವೆಯೇ?

ಬಿಜೆಪಿ ಶ್ರೀಮಂತರ ಪಕ್ಷ. ಕಾಂಗ್ರೆಸ್‌ ಮಧ್ಯಮ ಹಾಗೂ ಬಡವರ ಪಕ್ಷ ಎಂದು ಹೇಳಲಾಗುತ್ತದೆ. ಕಾಂಗ್ರೆಸ್ ಮುಸ್ಲಿಂ ಹಾಗೂ ಪರಿಶಿಷ್ಟರನ್ನು ಮತ ಬ್ಯಾಂಕ್‌ ಆಗಿ ಬಳಸಿಕೊಂಡಿದೆ ಮುಸ್ಲಿಮರು ಫಲಾಪೇಕ್ಷೆ ಇಲ್ಲದೆ ರಾಷ್ಟ್ರೀಯ ಪಕ್ಷಗಳನ್ನು ಬೆಂಬಲಿಸುತ್ತ ಬಂದಿದ್ದಾರೆ. ರಾಷ್ಟ್ರೀಯ ಪಕ್ಷಗಳು ಮುಸ್ಲಿಂ ನಾಯಕರನ್ನು ರೂಪಿಸುವಲ್ಲಿ ವಿಫಲವಾಗಿವೆ. ಹೀಗಾಗಿ ನಮ್ಮ ಸಮುದಾಯ ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿದೆ. ರಾಜಕೀಯ ಪ್ರಗತಿಗಾಗಿ ಹೊಸ ದಾರಿ ಹುಡುಕುವುದು ಅನಿವಾರ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !