ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್ ಖಾತೆಗೆ ಕನ್ನ ಹಾಕಿದರೆ 1930ಗೆ ಕರೆ ಮಾಡಿರಿ: ಫೋನ್ ಇನ್‌ನಲ್ಲಿ ಎಸ್‌ಪಿ

ಪ್ರಜಾವಾಣಿ ಫೋನ್ ಇನ್ ಕಾರ್ಯಕ್ರಮ
Last Updated 16 ಫೆಬ್ರುವರಿ 2023, 13:57 IST
ಅಕ್ಷರ ಗಾತ್ರ

ಬೀದರ್: ‘ಬ್ಯಾಂಕ್ ಖಾತೆಗಳಿಂದ ಹಣ ಕದಿಯುವ ಪ್ರಕರಣಗಳು ಅಧಿಕವಾಗುತ್ತಿವೆ. ಹಣ ಕಳೆದುಕೊಂಡವರು ಪ್ರಕರಣ ದಾಖಲಿಸಲು ವಿಳಂಬ ಮಾಡುತ್ತಿರುವ ಕಾರಣ ಹಣ ಕಳ್ಳರ ಪಾಲಾಗುತ್ತಿದೆ. ಹಣ ವರ್ಗಾವಣೆಯಾದ 24 ಗಂಟೆಗಳಲ್ಲೇ ಟೋಲ್ ಫ್ರೀ ಸಂಖ್ಯೆ 1930 ಗೆ ಕರೆ ಮಾಡಿ ಮಾಹಿತಿ ನೀಡಿದರೆ ಗ್ರಾಹಕರು ತಮ್ಮ ಹಣ ಉಳಿಸಿಕೊಳ್ಳಲು ಸಾಧ್ಯವಿದೆ. ವರ್ಗಾವಣೆ ಹೊಂದಿದ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಲು ಅವಕಾಶ ಇದೆ’

ಹೀಗೆಂದು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಸ್.ಎಲ್ ಅವರು ‘ಪ್ರಜಾವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಬಂದ ಅನೇಕ ಪ್ರಶ್ನೆಗಳನ್ನು ಆಲಿಸಿ, ಬ್ಯಾಂಕ್ ಖಾತೆಯಿಂದ ಹಣ ಕಳೆದುಕೊಂಡವರಿಗೆ ಒಂದಿಷ್ಟು ಸಲಹೆ ನೀಡಿದರು.

‘ಸಾಮಾನ್ಯವಾಗಿ ಎಲ್ಲ ಬ್ಯಾಂಕ್ ಖಾತೆಗಳಿಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರುತ್ತದೆ. ಖಾತೆಯಿಂದ ಹಣ ಪಡೆದ ತಕ್ಷಣ ಸಂದೇಶ ಬರುತ್ತದೆ. ಸೈಬರ್ ಕಳ್ಳರು ಹಣ ಲಪಟಾಯಿಸಿದರೂ ನಿಮ್ಮ ಮೊಬೈಲ್‍ಗೆ ಸಂದೇಶ ಬರುತ್ತದೆ. ಆಗ ತಕ್ಷಣ ಟೋಲ್ ಫ್ರೀ ಸಂಖ್ಯೆ 1930 ಗೆ ಕರೆ ಮಾಡಿ ಮಾಹಿತಿ ನೀಡಬೇಕು. ನಂತರ ಸೈಬರ್ ಪೊಲೀಸ್ ಠಾಣೆಗೆ ದೂರು ಕೊಡಬೇಕು. 24 ಗಂಟೆಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕು’ ಎಂದರು.

‘ಇಂಟರ್‌ನೆಟ್‌ ಬ್ಯಾಂಕಿಂಗ್ ಹೊಂದಿದವರು ಸಹ ಯಾವುದೇ ಕಾರಣಕ್ಕೆ ಮೊಬೈಲ್‍ನಲ್ಲಿ ಯಾವುದೇ ರೀತಿಯ ಮಾಹಿತಿ ಹಂಚಿಕೊಳ್ಳಬಾರದು. ಸಂದೇಹ ಬಂದರೆ ನೇರವಾಗಿ ಸಂಬಂಧಪಟ್ಟ ಬ್ಯಾಂಕ್‍ಗೆ ತೆರಳಿ ವಿಚಾರಿಸಬೇಕು’ ಎಂದು ಹೇಳಿದರು.

ಹಳ್ಳಿಖೇಡ(ಬಿ) ಗ್ರಾಮದ ಸಂಜು ಡಾಕುಳಗಿ ತಮ್ಮ ಮೊಬೈಲ್‍ನಿಂದ ₹ 1.10 ಲಕ್ಷ ಕದ್ದಿರುವ ಮಾಹಿತಿ ನೀಡಿದಾಗ ಅವರು ಈ ಸಲಹೆ ನೀಡಿದರು.

* * *

ಕಳೆದ ಮೊಬೈಲ್ ಫೋನ್ ಸಿಗಲಿದೆ

ಮೊಬೈಲ್ ಕಳ್ಳತನಕ್ಕೆ ಕಡಿವಾಣ ಹಾಕಲು ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ಸೆಂಟ್ರಲ್ ಎಕ್ವಿಪ್‍ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಐಆರ್) ಯೋಜನೆ ಅಭಿವೃದ್ಧಿ ಪಡಿಸಿದೆ.

ಮೊಬೈಲ್ ಕಳುವಾದರೆ ಐಎಂಇಐ ನಂಬರ್ ಸಹಿತ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಎಫ್‍ಐಆರ್ ಅಥವಾ ಇ - ಲಾಸ್ಟ್ ರಿಪೋರ್ಟ್ ಪ್ರತಿ ಸಲ್ಲಿಸಿದರೆ ಸಾಕು ಮೊಬೈಲ್ ಬ್ಲಾಕ್ ಮಾಡಲಾಗುತ್ತದೆ. ಹೊಸ ಸಿಮ್ ಹಾಕಿದ ತಕ್ಷಣ ಪೊಲೀಸರಿಗೆ ಅಲರ್ಟ್ ಮೆಸೇಜ್ ಬರುತ್ತದೆ. ಇದರಿಂದ ಕಳವು ಮಾಡಿದವರನ್ನು ಪತ್ತೆ ಹಚ್ಚಲು ನೆರವಾಗುತ್ತದೆ.

ಫೋನ್ ಜಪ್ತಿಯಾದ ನಂತರವೇ ಅದನ್ನು ಅನ್‍ಬ್ಲಾಕ್ ಮಾಡಲು ಅವಕಾಶವಿದೆ. ಮೊಬೈಲ್ ಮಾಲೀಕ ತನ್ನ ಮೊಬೈಲ್ ಸಂಖ್ಯೆಯ ಹೊಸ ಸಿಮ್ ಖರೀದಿಸಬೇಕು. ಅದೇ ಸಿಮ್ ಅಳವಡಿಸಿದ ಬಳಿಕ ಸಿಇಐಆರ್ ವೆಬ್‍ಸೈಟ್‍ನಲ್ಲಿ ಅನ್‍ಬ್ಲಾಕ್ ಮಾಡಲು ಮನವಿ ಸಲ್ಲಿಸಬೇಕು. ಅದೇ ನಂಬರ್‍ಗೆ ಒಟಿಪಿ ಬರಲಿದೆ. ತದ ನಂತರ ಫೋನ್ ಅನ್‍ಬ್ಲಾಕ್ ಆಗಿ ಬಳಕೆಗೆ ಲಭ್ಯವಾಗಲಿದೆ.

ದಾರಿಯಲ್ಲಿ ಮೊಬೈಲ್‍ನಲ್ಲಿ ಮಾತನಾಡುತ್ತ ಸಾಗುವುದು ಅಪಾಯಕಾರಿ. ಕಳ್ಳರು ಕಿತ್ತುಕೊಂಡು ಹೋಗುವ ಅಪಾಯ ಇರುತ್ತದೆ. ಅಪಘಾತಗಳು ಸಂಭವಿಸುತ್ತವೆ. ಯಾವುದಕ್ಕೂ ಎಚ್ಚರಿಕೆ ವಹಿಸುವುದು ಅಗತ್ಯ.

* * *

ಪ್ರಶ್ನೆ: ಬಸವಕಲ್ಯಾಣದ ಸಸ್ತಾಪುರ ಬಂಗ್ಲಾ ಬಳಿ ಪೊಲೀಸರು ರಸ್ತೆಯಲ್ಲಿ ವಾಹನಗಳನ್ನು ತಡೆದು ಅನಗತ್ಯ ದಂಡ ವಿಧಿಸುತ್ತಿದ್ದಾರೆ. ಕ್ರಮ ಕೈಗೊಳ್ಳಿರಿ.

ಶ್ರೀಕಾಂತ ಪಾಟೀಲ, ಬಸವಕಲ್ಯಾಣ

ಉ: ಸಿಸಿಟಿವಿ ಕ್ಯಾಮೆರಾ ಬಳಿಯೇ ದಾಖಲೆ ಪರಿಶೀಲಿಸುವಂತೆ ಹಾಗೂ ಅನಗತ್ಯ ದಂಡ ವಿಧಿಸದಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗುವುದು.

................

ಪ್ರಶ್ನೆ: ಬೀದರ್‌ನ ಕಲ್ಯಾಣನಗರದಲ್ಲಿ ಪೊಲೀಸರು ರಾತ್ರಿ ಗಸ್ತು ತಿರುಗುತ್ತಿಲ್ಲ. ನೌಬಾದ್‍ನ ಬಸವೇಶ್ವರ ವೃತ್ತದಲ್ಲಿ ಖಾಸಗಿ ವಾಹನಗಳು ಅಡ್ಡಾದಿಡ್ಡಿ ನಿಲ್ಲುತ್ತಿವೆ. ಪೊಲೀಸರು ಅಲ್ಲಿ ಬಿಗಿ ಕ್ರಮ ಕೈಗೊಳ್ಳುತ್ತಿಲ್ಲ. ಅಗತ್ಯ ಕ್ರಮ ಜರುಗಿಸಿ.

ರಮೇಶ ಚಿದ್ರಿ, ಕಲ್ಯಾಣನಗರ


ಉ: ಬಸವೇಶ್ವರ ವೃತ್ತದಲ್ಲಿ ನಿಲುಗಡೆಯಾಗುವ ವಾಹನಗಳ ಚಾಲಕರಿಗೆ ಒಮ್ಮೆ ತಿಳಿವಳಿಕೆ ಕೊಡಲಾಗುವುದು. ಸಂಚಾರ ನಿಯಮ ಪಾಲಿಸದಿದ್ದರೆ ಅನಿವಾರ್ಯವಾಗಿ ದಂಡ ವಿಧಿಸಲಾಗುವುದು. ಸಂಚಾರ ಒತ್ತಡದ ಸಂದರ್ಭದಲ್ಲಿ ಹಿರಿಯ ಅಧಿಕಾರಿಯನ್ನು ನಿಯೋಜಿಸಲಾಗುವುದು.

........…

ಪ್ರಶ್ನೆ: ಕೆಲ ಕಿಡಿಗೇಡಿಗಳು ಹುಮನಾಬಾದ್ ಬಸ್ ನಿಲ್ದಾಣದ ಬಳಿ ಶಾಲಾ, ಕಾಲೇಜುಗಳ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದಾರೆ. ಸಂಜೆ ವೇಳೆಯಲ್ಲಿ ಬಸ್ ನಿಲ್ದಾಣದ ಬಳಿ ಪೊಲೀಸರನ್ನು ನಿಯೋಜಿಸಿರಿ.

ಮಲ್ಲಿಕಾರ್ಜುನ ಹುಮನಾಬಾದ್, ಹುಡಗಿ


ಉ: ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವುದು ಪೊಲೀಸರ ಆದ್ಯ ಕರ್ತವ್ಯವಾಗಿದೆ. ಬಸ್ ನಿಲ್ದಾಣದ ಬಳಿ ಮಹಿಳಾ ಶಕ್ತಿ ಪಡೆ ನಿಯೋಜಿಸಲಾಗುವುದು. ಯಾರೇ ಹೆಣ್ಣುಮಕ್ಕಳನ್ನು ಚುಡಾಯಿಸಿದರೂ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು.

................

ಪ್ರಶ್ನೆ: ಜಿಲ್ಲೆಯ ಕೆಲ ಕಡೆ ಜೂಜು, ಮಟಕಾ, ಗಾಂಜಾ, ಗುಟ್ಕಾ ಮಾರಾಟ ಹೆಚ್ಚಾಗಿದ್ದು, ತಡೆಯಲು ಕ್ರಮ ಕೈಗೊಳ್ಳಿರಿ.

ರಮೇಶ ಕೆ, ಬೀದರ್

ಉ: ಅಕ್ರಮ ತಡೆಗೆ ಈಗಾಗಲೇ ತಂಡ ರಚಿಸಲಾಗಿದೆ. ನೆರೆಯ ಜಿಲ್ಲೆಗಳ ಪೊಲೀಸ್‌ ಅಧಿಕಾರಿಗಳ ಸಭೆಯನ್ನು ನಡೆಯಲಾಗಿದೆ.


............

ಪ್ರಶ್ನೆ: ಆದರ್ಶನಗರ ರೈಲ್ವೆ ಕ್ರಾಸ್ಸಿಂಗ್‍ನಲ್ಲಿ ವಾಹನ ಸವಾರರು ಸರಿಯಾಗಿ ಸಂಚಾರ ನಿಯಮ ಪಾಲಿಸದ ಕಾರಣ ರೈಲು ಬಂದು ಹೋದ ಮೇಲೆ ಸಂಚಾರ ಸಮಸ್ಯೆಯಾಗುತ್ತಿದೆ. ಪೊಲೀಸರನ್ನು ನಿಯೋಜಿಸಿ ಸಂಚಾರ ಸುಗಮಗೊಳಿಸಿರಿ.

ರಾಜಕುಮಾರ ಪಾಟೀಲ, ಓಲ್ಡ್ ಆದರ್ಶ ಕಾಲೊನಿ, ಬೀದರ್


ಉ: ಜನರು ಹೊಣೆಗಾರಿಕೆಯಿಂದ ನಡೆದುಕೊಳ್ಳಬೇಕು. ಪ್ರತಿಯೊಬ್ಬರೂ ಸಂಚಾರ ನಿಮಯ ಪಾಲಿಸಿದರೆ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತವೆ.

..............

ಪ್ರಶ್ನೆ: ನಗರದ ಕೆಇಬಿ ಕಲ್ಯಾಣ ಮಂಟಪದ ಬಳಿ ನಿತ್ಯ 10 ಜನ ಮೈದಾನದಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದಾರೆ.

ಶ್ರೀಕಾಂತ ಲಕ್ಷೆಟ್ಟಿ, ಚಿದ್ರಿ ರಸ್ತೆ, ಬೀದರ್


ಉ: ತಕ್ಷಣ 112ಗೆ ಕರೆ ಮಾಡಿರಿ. ಸಾಧ್ಯವಾದರೆ ಪೊಟೊ ತೆಗೆದು ಕಳಿಸಿರಿ.

......................…

ಪ್ರಶ್ನೆ: ಬೀದರ್ ನಗರದಲ್ಲಿ ಜೂಜಾಟ ಹೆಚ್ಚಾಗಿದೆ. ತಡೆಯಲು ಕ್ರಮ ಕೈಗೊಳ್ಳಿರಿ.

ರವಿ ಕೊಡಗೆ, ಹಿಂದೂ ಬ್ರಿಗೇಡ್ ಮುಖಂಡ


ಉ: ಜೂಜಾಟ ತಡೆಗೆ ಕ್ರಮ ಕೈಗೊಳ್ಳಲಾಗುವುದು.

..........................

ಪ್ರಶ್ನೆ: ಬೇಮಳಖೇಡ ಠಾಣೆ ವ್ಯಾಪ್ತಿಯಲ್ಲಿ ಮಕ್ಸೂದ್ ಅವರ ಅಂಗಡಿ ಕಳ್ಳತನವಾಗಿದೆ. ಗ್ರಾಮದಲ್ಲಿ ಆಡುಗಳು ನಿರಂತರವಾಗಿ ಕಳ್ಳತನ ಆಗುತ್ತಿವೆ. ಪೊಲೀಸ್ ಬೀಟ್ ಹಾಕಿಸಿರಿ.

ಸಂಜಯ ಪಾಟೀಲ, ಮರಕುಂದ


ಉ: ಪೊಲೀಸ್ ಗಸ್ತು ಬಿಗಿಗೊಳಿಸಲಾಗುವುದು.

.................

ಪ್ರಶ್ನೆ: ಗ್ರಾಮದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿರಿ. ಇದರಿಂದ ಕಳ್ಳತನ ತಡೆಯಲು ಅನುಕೂಲವಾಗಲಿದೆ.

ವೈಜನಾಥ, ಬ್ಯಾಲಹಳ್ಳಿ


ಉ: ಸ್ಥಳೀಯರ ಸಹಕಾರ ಪಡೆದು ಅಳವಡಿಸಬಹುದು. ಪಂಚಾಯಿತಿ ಮಟ್ಟದಲ್ಲೇ ನಿರ್ಧಾರ ಕೈಗೊಳ್ಳಲು ಅವಕಾಶ ಇದೆ.

........................


ಪ್ರಶ್ನೆ: ಜ್ಞಾನಸುಧಾ ಸ್ಕೂಲ್ ಸಮೀಪ ಕುಂಚಗೆ ಲೇಔಟ್‍ನಲ್ಲಿ ಮನೆ ಬಾಗಿಲು ಒಡೆದು ಹಣ ಒಯ್ಯುತ್ತಿದ್ದಾರೆ. ಕ್ರಮ ಕೈಗೊಳ್ಳಿರಿ.

ಸಂಗಮೇಶ, ನಾವದಗೇರಿ


ಉ: ಅಗತ್ಯ ಕ್ರಮ ಕೈಗೊಳ್ಳಲಾಗುವುದು. ನಿಮ್ಮನ್ನು ಬೀಟ್ ಸದಸ್ಯರನ್ನಾಗಿ ಮಾಡಲಾಗುವುದು.

...........

ಪ್ರಶ್ನೆ: ಬೀದರ್ ನಗರದಲ್ಲಿ ಸೈಲನ್ಸರ್ ತೆಗೆದು ಅಬ್ಬರದಿಂದ ಬೈಕ್ ಓಡಿಸುವವರ ವಿರುದ್ಧ ಕ್ರಮ ಕೈಗೊಳ್ಳಿರಿ.

ಸಂಜು, ಬೀದರ್

ಉ: ಸೈಲನ್ಸರ್ ತೆಗೆದು ವಾಹನ ಓಡಿಸಿದರೆ ಬೈಕ್ ವಶಪಡಿಸಿಕೊಳ್ಳಲಾಗುವುದು.

...........

ಪ್ರಶ್ನೆ: ಭಾಲ್ಕಿಯಲ್ಲಿ ಟ್ರಾಫಿಕ್ ಸಿಗ್ನಲ್‍ಗಳು ಕೆಲಸ ಮಾಡುತ್ತಿಲ್ಲ. ಸರಿಪಡಿಸಿರಿ.

ಸಂತೋಷ ನಾಟೆಕರ್, ಭಾಲ್ಕಿ


ಉ: ಎಲ್ಲ ಟ್ರಾಫಿಕ್ ಸಿಗ್ನಲ್‍ಗಳನ್ನು ಸರಿಪಡಿಸಲಾಗುವುದು.

.................

ಜಿಲ್ಲೆಯಲ್ಲಿ ಖಾಸಗಿ ವಾಹನಗಳಿಗೆ ಪೊಲೀಸ್ ಹಾಗೂ ಪ್ರೆಸ್ ಎಂದು ಬರೆದುಕೊಂಡು ಓಡಾಡುವವರ ಸಂಖ್ಯೆ ಹೆಚ್ಚಾಗಿದೆ. ಅಂತಹ ವಾಹನಗಳನ್ನು ತಡೆದು ವಿಚಾರಿಸಿ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿರಿ.

ಎಂ.ಪಿ.ಮುದಾಳೆ


ಉ: ಶೀಘ್ರದಲ್ಲೇ ಪೊಲೀಸ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಗಳ ಸಭೆ ಕರೆದು ನಿರ್ಧಾರ ತೆಗೆದುಕೊಳ್ಳಲಾಗುವುದು.

...........

ಪ್ರಶ್ನೆ: ಭಾಲ್ಕಿಯ ಶಿವಾಜಿ ವೃತ್ತದ ಬಳಿ ಸಾರಾಯಿ ಮಾರಾಟ ಹೆಚ್ಚಾಗಿದೆ. ಡಾವರಗಾಂವ್ ಒಂದೇ ಗ್ರಾಮದಲ್ಲಿ 20 ಸಾರಾಯಿ ಅಂಗಡಿಗಳು ಇವೆ. ಅಕ್ರಮ ಚಟುವಟಿಕೆಗೆ ಕ್ರಮ ಕೈಗೊಳ್ಳಿರಿ.

ರಾಜಶೇಖರ, ಡಾವರಗಾಂವ್

ಉ: ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಜಂಟಿಯಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.


* * *

ನನ್ನ ಮಗ ಶಿವಪುತ್ರ ಚಿಂಗಾಪುರೆ ಕಾಣೆಯಾಗಿದ್ದಾನೆ. ಕೆಇಬಿಯಲ್ಲಿ ಗುತ್ತಿಗೆ ಆಧಾರ ಮೇಲೆ ಕೆಲಸ ಮಾಡುತ್ತಿದ್ದ. ಕೆಲಸಕ್ಕೆ ಹೋದವನು ಮನೆಗೆ ಬಂದಿಲ್ಲ. ಠಾಣಾಕುಶನೂರು ಠಾಣೆಗೆ ದೂರು ಕೊಟ್ಟಿದ್ದೇವೆ ಎಂದು ಮಹಿಳೆಯೊಬ್ಬರು ತಿಳಿಸಿದರು.

ಭಾಲ್ಕಿ ತಾಲ್ಲೂಕಿನ ಡಾವರಗಾಂವದಲ್ಲಿ ಕಿರಾಣಿ ಅಂಗಡಿಗಳಲ್ಲಿ ಸಾರಾಯಿ ಮಾರಾಟ ಹೆಚ್ಚಿದೆ ಎಂದು
ವರುಣ ತಿಳಿಸಿದರೆ, ಮನ್ನಳ್ಳಿ ವ್ಯಾಪ್ತಿಯಲ್ಲಿ ಅಕ್ರಮ ಸಾರಾಯಿ ಜಾಸ್ತಿ ಇದೆ. ಪೊಲೀಸರು ಅಬಕಾರಿ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು.

ಔರಾದ್ ತಾಲ್ಲೂಕಿನ ಹೆಡಗಾಪುರ ಮಹಿಳೆ, ಬಾವಗಿಯ ಶಿವಕುಮಾರ ಸ್ವಾಮಿ, ಶೇಖ ಮುಜಾಹಿದ್, ಶಿವಲಿಂಗ, ಅಲಿಯಂಬರ್, ಉಮೇಶ ಖಟಕಚಿಂಚೋಳಿ, ಔರಾದ್‍ನ ಗುರುನಾಥ ವಡ್ಡೆ, ಭಾಲ್ಕಿ ತಾಲ್ಲೂಕಿನ ಅಳವಾಯಿ ಗ್ರಾಮದ ದತ್ತಾತ್ತ್ರೇಯ, ಬಸವಕಲ್ಯಾಣ ತಾಲ್ಲೂಕಿನ ಯರಂಡಗಿಯ ಅಹಮ್ಮದ್, ಬ್ಯಾಲಹಳ್ಳಿಯ ನಿರ್ಮಲಕಾಂತ ಪಾಟೀಲ, ಗಾದಗಿಯ ನಾಗಪ್ಪ, ಗುರುಪ್ರಸಾದ್ ಕೊಂಗಳಿ ಕರೆ ಮಾಡಿದರು.

.............

ನಾಲ್ಕು ಠಾಣೆಗಳಲ್ಲಿ ಲಂಚ

ಬೀದರ್‍ನ ಗಾಂಧಿ ಗಂಜ್, ಮಾರ್ಕೆಟ್ ಠಾಣೆ, ಖಟಕಚಿಂಚೋಳಿ ಹಾಗೂ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೆಲ ಪೊಲೀಸರು ದೂರು ಕೊಡಲು ಬಂದವರಿಂದ ಲಂಚ ಕೇಳುತ್ತಿದ್ದಾರೆ. ಪತಿ, ಪತ್ನಿಯ ಜಗಳ ಇದ್ದರೂ, ಇಬ್ಬರಿಂದಲೂ ಹಣ ಪಡೆಯುತ್ತಿದ್ದಾರೆ. ಈ ಠಾಣೆಗಳನ್ನು ಲಂಚ ಮುಕ್ತಗೊಳಿಸಿ ಎಂದು ಮಹಿಳೆಯರು ಸೇರಿದಂತೆ ಅನೇಕರು ಜಿಲ್ಲಾ ಪೊಲೀಸ್ ವರಿμÁ್ಠಧಿಕಾರಿಗೆ ಮನವಿ ಮಾಡಿದರು.

ಕೆಲವರು ಪೊಲೀಸ್ ಕಾನ್‍ಸ್ಟೆಬಲ್‍ಗಳ ಹೆಸರುಗಳನ್ನು ಹೇಳಿದರು. ಠಾಣೆಗಳಲ್ಲಿ ಯಾರೂ ಲಂಚ ಕೊಡುವ ಅಗತ್ಯವಿಲ್ಲ. ಹಣ ಕೇಳಿದರೆ ನೇರವಾಗಿ ನನ್ನ ಮೊಬೈಲ್‍ಗೆ ಕರೆ ಮಾಡಬೇಕು. ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ತಿಳಿಸಿದರು.

ನಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಮನೆಯಲ್ಲಿ ಇಲ್ಲದಿದ್ದಾಗ ನನ್ನ ಪತಿ ಸ್ಕೂಟಿ ಕದ್ದು ಒಯ್ದಿದ್ದಾರೆ. ಅವರಿಂದ ಸ್ಕೂಟಿ ಕೊಡಿಸಬೇಕು ಎಂದು ಮಹಿಳೆಯೊಬ್ಬರು ಮನವಿ ಮಾಡಿದರು.

........

ಶಕ್ತಿ ಪಡೆ ಪುನಶ್ಚೇತನ

ಮಹಿಳಾ ಶಕ್ತಿ ಪಡೆಯನ್ನು ಪುನಶ್ಚೇತನಗೊಳಿಸಲಾಗಿದೆ. ಪಡೆಯ ಸಿಬ್ಬಂದಿಗೆ ಹೆಚ್ಚುವರಿಯಾಗಿ ತರಬೇತಿ ಕೊಡಲಾಗುತ್ತಿದೆ. ನಗರದಲ್ಲಿ ಕೆಲವು ಠಾಣೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ಪೊಲೀಸ್ ಮಾಹಿತಿ ದಾಖಲಿಸುವಲ್ಲಿ ಬೀದರ್ ಜಿಲ್ಲೆ ಮುಂಚೂಣಿಯಲ್ಲಿದೆ. ರೌಡಿ ನಿಗ್ರಹ ದಳ ರಚಿಸಲಾಗಿದೆ. ನೇರವಾಗಿ ನಾನೇ ಮೇಲ್ವಿಚಾರಣೆ ಮಾಡುತ್ತಿದ್ದೇನೆ. ಚುನಾವಣೆ ನಂತರ ತೆರೆದ ಮನೆ ಕಾರ್ಯಕ್ರಮ ಮಾಡುತ್ತೇವೆ. ಪೊಲೀಸರ ಬಗೆಗಿನ ಮಕ್ಕಳ ಭಯ ಹೋಗಲಾಡಿಸುತ್ತೇವೆ.

ನಿರ್ವಹಣೆ: ಚಂದ್ರಕಾಂತ ಮಸಾನಿ, ನಾಗೇಶ ಪ್ರಭಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT