ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ | ಬದುಕಿಗಾಸರೆಯಾದ ‘ಮರಳುಗಾಡಿನ ಹಡಗು’

Published 6 ಜನವರಿ 2024, 5:11 IST
Last Updated 6 ಜನವರಿ 2024, 5:11 IST
ಅಕ್ಷರ ಗಾತ್ರ

ಬೀದರ್‌: ಒಂಟೆಗಳು ಮರಳುಗಾಡಿನ ಹಡಗು. ಅಲ್ಲಿನ ‘ಲೈಫ್‌ಲೈನ್‌’. ಇಷ್ಟೇ ಅಲ್ಲ, ಅನೇಕ ಜನರ ಬದುಕಿಗೆ ಆಸರೆ ಕೂಡ ಆಗಿವೆ.

ಹಲವರ ಬದುಕಿನ ದೋಣಿ ಸಾಗಲು ಅವುಗಳು ಕಾರಣ ಎಂದರೂ ತಪ್ಪಾಗಲಾರದು. ರಾಜಸ್ತಾನದ ಮರಳುಗಾಡಿನಲ್ಲಿ ಒಂಟೆಗಳು ಅನಿವಾರ್ಯ. ಆಧುನಿಕ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಈಗಲೂ ಹಲವರು ಒಂಟೆಗಳನ್ನೇ ಅವಲಂಬಿಸಿದ್ದಾರೆ. ಆದರೆ, ಹೊಟ್ಟೆ ತುಂಬಿಸಿಕೊಳ್ಳುವುದಕ್ಕಾಗಿಯೇ ಒಂಟೆಗಳೊಂದಿಗೆ ದೇಶದ ಹಲವೆಡೆ ಸುತ್ತುವವರು ಇದ್ದಾರೆ. ಅಂತಹ ಸುತ್ತಾಟದ ಭಾಗವಾಗಿ ಗಡಿ ಜಿಲ್ಲೆಗೂ ಕೆಲವರು ಬಂದಿದ್ದಾರೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಎಲ್ಲವೂ ಅಂಗೈನಲ್ಲೇ ನೋಡಲು ಸಿಗುತ್ತಿದೆ. ಆದರೆ, ವಾಸ್ತವವಾಗಿ ಹಲವು ಸಂಗತಿಗಳನ್ನು ಕಣ್ಣೆದುರು ನೋಡುವುದು ಅಪರೂಪವಾಗಿದೆ. ಇದನ್ನೇ ಮುಖ್ಯವಾಗಿಟ್ಟುಕೊಂಡು ಮಕ್ಕಳನ್ನು ರಂಜಿಸಿ ಅದರ ಮುಖೇನ ಬದುಕು ಕಟ್ಟಿಕೊಳ್ಳುವ ಪ್ರಯತ್ನ ರಾಜಸ್ತಾನ ಮೂಲದ ಕೆಲವರು ಮಾಡುತ್ತಿದ್ದಾರೆ.

ಅಂದಹಾಗೆ, ರಾಜಸ್ತಾನ ಮೂಲದ ಹಲವರು ಬೀದರ್‌ ಜಿಲ್ಲೆಯಲ್ಲಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ಹಣ್ಣಿನ ಜ್ಯೂಸ್‌ ಮಾರಾಟ ಮಾಡುವವರು, ಕಟ್ಟಡ ನಿರ್ಮಾಣ ಕಾರ್ಮಿಕರು, ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡು ಕೆಲವರು ಇಲ್ಲಿಯೇ ಬೇರೂರಿದ್ದಾರೆ. ಆದರೆ, ಬದುಕಿಗೆ ಭದ್ರ ಬೂನಾದಿ ಹಾಕುವಷ್ಟು ಆದಾಯ ಸಿಗದ ಕಾರಣ ಹಲವರು ಆಗಾಗ ಊರಿಂದೂರಿಗೆ ಹೋಗುತ್ತಿರುತ್ತಾರೆ. ಅದರಲ್ಲಿ ಮಕ್ಕಳಿಗೆ ಒಂಟೆ ಸವಾರಿ ಮಾಡಿಸಿ ಅಲ್ಪ ಪ್ರಮಾಣದಲ್ಲಿ ಹಣ ಗಳಿಸುವವರು ಸೇರಿದ್ದಾರೆ.

ಜಿಲ್ಲೆಯಲ್ಲಿ ಯಾವುದೇ ಭಾಗದಲ್ಲಿ ಜಾತ್ರೆ, ಉತ್ಸವಗಳು ನಡೆದರೆ ಅಲ್ಲಿಗೆ ಹೋಗುತ್ತಾರೆ. ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರಿಗೆ ಒಂಟೆ ಸವಾರಿ ಮಾಡಿಸಿ, ಅವರನ್ನು ಮನರಂಜಿಸಿ ಹಣ ಗಳಿಸುತ್ತಾರೆ. ಇನ್ನು, ನಗರ ಪ್ರದೇಶದಲ್ಲಿ ಪ್ರಮುಖ ಉದ್ಯಾನಗಳು ಇವರ ಚಟುವಟಿಕೆಯ ಸ್ಥಳಗಳಾಗಿವೆ. ಅದರಲ್ಲೂ ವಾರಾಂತ್ಯದಲ್ಲಿ ಹೆಚ್ಚು ಜನ ಬರುವುದರಿಂದ ಇವರಿಗೆ ಬಿಡುವಿಲ್ಲದ ಕೆಲಸ ಇರುತ್ತದೆ.

‘ಒಂಟೆಗಳ ಮೂಲಕ ನಮ್ಮ ಹೊಟ್ಟೆಯಷ್ಟೇ ಅಲ್ಲ, ಅದರ ಹೊಟ್ಟೆಯೂ ತುಂಬಿಸಬೇಕು. ಹೆಚ್ಚು ಚೌಕಾಸಿ ಮಾಡಲು ಹೋಗುವುದಿಲ್ಲ. ಕೆಲವರು ಒಂಟೆ ಸವಾರಿ ಖುಷಿ ಅನುಭವಿಸಿದ ನಂತರ ನಾವು ಕೇಳಲಾರದೆಯೂ ಇಂತಿಷ್ಟು ಕೈಗಿಡುತ್ತಾರೆ. ನಾವು ಸಾಮಾನ್ಯವಾಗಿ ಒಂದು ರೌಂಡ್‌ ಹಾಕಿಸಲು ₹50 ಕೇಳುತ್ತೇವೆ. ಅನೇಕರು ಅದಕ್ಕೂ ಚೌಕಾಸಿ ಮಾಡುತ್ತಾರೆ. ನಮ್ಮ ಕಷ್ಟ ಏನೆಂಬುದನ್ನು ಅರಿಯಲು ಪ್ರಯತ್ನ ಮಾಡುವುದಿಲ್ಲ’ ಎಂದು ರಾಜಸ್ತಾನದ ಜೈಸಲ್ಮೇರ್‌ ನಿವಾಸಿ ರಂಜೀತ್‌ ಎಂಬುವರು ‘ಪ್ರಜಾವಾಣಿ’ಯೊಂದಿಗೆ ಮಾತಿಗಿಳಿದರು.

‘ನಮ್ಮದು ಕಾಯಂ ಜಾಗ ಎಂಬುದಿಲ್ಲ. ಏಕೆಂದರೆ ಕೆಲವು ದಿನಗಳು ಕಳೆದ ನಂತರ ಒಂಟೆ ಸವಾರಿಗೆ ಮತ್ತೆ ಇಷ್ಟಪಡುವುದಿಲ್ಲ. ಈ ಕಾರಣಕ್ಕಾಗಿಯೇ ಪದೇ ಪದೇ ಜಾಗ ಬದಲಿಸುತ್ತ ಇರುತ್ತೇವೆ. ನಮಗೆ ಇದು ಬಿಟ್ಟರೆ ಬೇರೆ ಕೆಲಸ ಗೊತ್ತಿಲ್ಲ’ ಎಂದು ಅಸಹಾಯಕ ನುಡಿಗಳನ್ನು ಆಡಿದರು.

ಗಡಿಭಾಗದಲ್ಲಿ ಹೆಚ್ಚಿದ್ದ ಒಂಟೆಗಳು

ಹಿರಿಯರ ಪ್ರಕಾರ ಸುಮಾರು 50 ವರ್ಷಗಳ ಹಿಂದೆ ಬೀದರ್‌ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಂಟೆಗಳು ಇದ್ದವು. ಹಿಂದೆ ಪಾಟೀಲರು ಕುಲಕರ್ಣಿಗಳು ಗೌಡರ ಮನೆಯಲ್ಲಿ ಒಂಟೆಗಳು ಇರುತ್ತಿದ್ದವು. ಅವರಿಗೆ ಪ್ರತಿಷ್ಠೆ ಅಂತಸ್ತಿನ ವಿಷಯವಾಗಿತ್ತು. ಅಲ್ಲದೇ ಆ ಕಾಲದಲ್ಲಿ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದ್ದರಿಂದ ಹೆಚ್ಚಾಗಿ ಉಪಯೋಗಿಸುತ್ತಿದ್ದರು. ಜಿಲ್ಲೆಯ ಗಡಿಭಾಗ ಔರಾದ್‌ ಭಾಲ್ಕಿಯಲ್ಲಿ ಹೆಚ್ಚಾಗಿ ಒಂಟೆಗಳ ಮೇಲೆ ಜನ ಓಡಾಡುತ್ತಿದ್ದರು ಎಂದು ಔರಾದ್‌ನ ರಾಮಣ್ಣ ಎಂಬುವರು ನೆನಪು ಮಾಡುತ್ತಾರೆ. ‘ಬರ್ತಾ ಬರ್ತಾ ಎಲ್ರೂ ಕಾರು ಬೈಕ್‌ ಜೀಪಿನಲ್ಲಿ ಓಡಾಡಲು ಶುರು ಮಾಡಿದ್ರು. ಅಲ್ಲದೇ ಒಂಟೆ ನೋಡಿಕೊಳ್ಳುವುದು ಕಷ್ಟವಾಯಿತು. ಈಗ ತಾಲ್ಲೂಕಿನಲ್ಲಿ ಬಹುತೇಕ ಒಂಟೆಗಳೇ ಇಲ್ಲವೆನ್ನಬಹುದು. ಏನಿದ್ದರೂ ಹೊರಗಿನಿಂದ ಜಾತ್ರೆ ಸಂದರ್ಭಗಳಲ್ಲಿ ಹಣ ಗಳಿಕೆಗೆ ಒಂಟೆ ಸವಾರಿ ಮಾಡುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT