ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯೋಜಕರಿಂದ ಆಚಾತುರ್ಯ: ಸಚಿವ ಖಂಡ್ರೆ ವಿಷಾದ

ಸಿಎಂ ಅಭಿನಂದನಾ ಸಮಾರಂಭದಲ್ಲಿ ಕುರ್ಚಿ ಮೀಸಲಿಡದಕ್ಕೆ ನಿರ್ಗಮಿಸಿದ್ದ ಬಿ.ಆರ್‌. ಪಾಟೀಲ
Published 9 ಮಾರ್ಚ್ 2024, 12:33 IST
Last Updated 9 ಮಾರ್ಚ್ 2024, 12:33 IST
ಅಕ್ಷರ ಗಾತ್ರ

ಬೀದರ್‌: ‘ಬಸವಕಲ್ಯಾಣದಲ್ಲಿ ಮಾ. 7ರಂದು ಏರ್ಪಡಿಸಿದ್ದ ಮುಖ್ಯಮಂತ್ರಿ ಅಭಿನಂದನಾ ಸಮಾರಂಭದಲ್ಲಿ ಸಿ.ಎಂ ರಾಜಕೀಯ ಸಲಹೆಗಾರರೂ ಆದ ಆಳಂದ ಶಾಸಕ ಬಿ.ಆರ್‌. ಪಾಟೀಲ ಅವರಿಗೆ ನೋವಾಗಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಕಾರ್ಯಕ್ರಮದ ಆಯೋಜಕರಿಂದ ಆಚಾತುರ್ಯ ಆಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಪರಿಸರ ಖಾತೆ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ಇಲ್ಲಿನ ಜಿಲ್ಲಾ ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿ.ಆರ್. ಪಾಟೀಲ ಹಿರಿಯರಿದ್ದಾರೆ. ಅವರ ಬಗ್ಗೆ ನನಗೆ ಅಪಾರ ಗೌರವ ಇದೆ. ಸಿಎಂ ಅಭಿನಂದನಾ ಕಾರ್ಯಕ್ರಮದಲ್ಲಿ ಅವರಿಗೆ ನೋವಾಗಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಒಂದು ದಿನ ಮುಂಚಿತವಾಗಿಯೇ ಹೋಗಿ, ಅವರಿಗೆ ಶಿಷ್ಟಾಚಾರದ ಪ್ರಕಾರ ಮೊದಲ ಸಾಲಿನಲ್ಲೆ ಕುರ್ಚಿ ಹಾಕಿಸಿದ್ದೆ‌. ಅದಕ್ಕೆ ಅವರ ಹೆಸರು ಅಂಟಿಸಿದ್ದನ್ನು ನೋಡಿಕೊಂಡೆ ಬಂದಿದ್ದೆ. ಸಿಎಂ ಅವರನ್ನು ಸ್ವಾಗತ ಮಾಡಿಕೊಂಡು ಬರುವಾಗ ವಿಳಂಬ ಆಗಿದೆ. ಆ ಸಂದರ್ಭದಲ್ಲಿ ಬಿ.ಆರ್ ಪಾಟೀಲ ಬಂದಿದ್ದು ನನ್ನ ಗಮನಕ್ಕೆ ಬಂದಿರಲಿಲ್ಲ ಎಂದು ಸಮಜಾಯಿಷಿ ನೀಡಿದರು.

ಘಟನೆ ಕುರಿತು ಬಿ.ಆರ್‌. ಪಾಟೀಲರು ಮನಸ್ಸಿನಲ್ಲಿ ಏನೂ ಇಟ್ಟುಕೊಳ್ಳಬಾರದು ಎಂದು ವಿನಂತಿಸುತ್ತೇನೆ. ಅವರ ಜೊತೆ ನೇರವಾಗಿ ಮಾತನಾಡುತ್ತೇನೆ ಎಂದು ಹೇಳಿದರು.

ಸಿ.ಎಂ ಅಭಿನಂದನಾ ಸಮಾರಂಭದಲ್ಲಿ ಕುರ್ಚಿ ಮೀಸಲಿಡದ ಕಾರಣ ಅಸಮಾಧಾನಗೊಂಡು ಬಿ.ಆರ್‌. ಪಾಟೀಲ ಕಾರ್ಯಕ್ರಮದಿಂದ ನಿರ್ಗಮಿಸಿದ್ದರು. ಈ ಕುರಿತು ‘ಪ್ರಜಾವಾಣಿ’ ಮಾತ್ರ ವರದಿ ಪ್ರಕಟಿಸಿತ್ತು.

ಬಿ.ಆರ್‌. ಪಾಟೀಲ ಅವರು ಬೀದರ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್‌ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ. ಇನ್ನೊಂದೆಡೆ ಸಚಿವ ಈಶ್ವರ ಬಿ. ಖಂಡ್ರೆಯವರು ಅವರ ಮಗ ಸಾಗರ್‌ ಖಂಡ್ರೆಯವರಿಗೆ ಟಿಕೆಟ್‌ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. ಈ ಕಾರಣಕ್ಕಾಗಿಯೇ ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ. ಬೀದರ್‌ನಲ್ಲಿ ಏರ್ಪಡಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಅಭಿನಂದನಾ ಸಮಾರಂಭದಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಈಶ್ವರ ಬಿ. ಖಂಡ್ರೆಯವರು ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡುತ್ತಿದ್ದಾರೆ ಎಂದು ಬಿ.ಆರ್‌. ಪಾಟೀಲ ಅವರು ಅವರ ಆಪ್ತರ ಬಳಿ ಗೋಳು ತೋಡಿಕೊಂಡಿದ್ದಾರೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT