ಮಂಗಳವಾರ, ಅಕ್ಟೋಬರ್ 4, 2022
26 °C

ಬಾಲ ಪ್ರತಿಭೆಗಳಿಗೆ ವೇದಿಕೆಯಾದ ‘ಚಿಗುರು’: ಅರವಿಂದಕುಮಾರ ಅರಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಹಯೋಗದಲ್ಲಿ ಬೀದರ್ ತಾಲ್ಲೂಕಿನ ಬಗದಲ್ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 8 ವರ್ಷದಿಂದ 14 ವರ್ಷದ ಒಳಗಿನ ಮಕ್ಕಳಿಗೆ ಆಯೋಜಿಸಿದ್ದ ಚಿಗುರು ಕಾರ್ಯಕ್ರಮ ಬಾಲ ಪ್ರತಿಭೆಗಳಿಗೆ ವೇದಿಕೆಯಾಯಿತು.

ಏಳು ಕಲಾ ತಂಡಗಳು ತಮ್ಮ ಪ್ರತಿಭೆ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾದವು. ಶಾಲೆಯ ಸಂಗಮೇಶ ನೇತೃತ್ವದ ತಂಡ ಪ್ರದರ್ಶಿಸಿದ ಜೀವ ಜಲ ನಾಟಕ ಗಮನ ಸೆಳೆಯಿತು.

ಸ್ನೇಹಾ ಸಿದ್ಧಾರ್ಥ ಏಕ ಪಾತ್ರಾಭಿನಯ, ಶಿವಾನಿ ಮತ್ತು ತಂಡದ ಶಾಸ್ತ್ರೀಯ ಸಂಗೀತ, ಸ್ಪಂದನಾ ಕೃಷ್ಣ ಹಾಗೂ ತಂಡದ ಸುಗಮ ಸಂಗೀತ, ಶೀಲವಾನರಾಜ ಮತ್ತು ತಂಡ, ಹಣಮಂತ ಹಾಗೂ ತಂಡದ ಜಾನಪದ ಗೀತೆ ಮತ್ತು ವೈಷ್ಣವಿ ಬಸವರಾಜ ಹಾಗೂ ತಂಡದ ಸಮೂಹ ನೃತ್ಯ ಸಭಿಕರನ್ನು ಮೂಕಸ್ಮಿತರಾಗಿಸಿತು.

ದೇಸಿ ಕಲೆ, ಸಂಸ್ಕೃತಿಗೆ ಸಿಗಲಿ ಆದ್ಯತೆ: ಮಕ್ಕಳು ದೇಸಿ, ಕಲೆ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ನುಡಿದರು.

ಮೊಬೈಲ್‍ನಿಂದಾಗಿ ಮಕ್ಕಳು ದೇಸಿ ಆಟಗಳನ್ನು ಮರೆಯುತ್ತಿದ್ದಾರೆ. ದೇಸಿ ಆಟಗಳು ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾಗಿವೆ ಎಂದು ತಿಳಿಸಿದರು.

ಕಲಾವಿದರ ಮಾಸಾಶನ ವಯೋಮಿತಿಯನ್ನು 58 ವರ್ಷದಿಂದ 45ಕ್ಕೆ ಇಳಿಸುವ ಸಂಬಂಧ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಅವರು, ಪ್ರತಿಭೆಗಳನ್ನು ಗುರುತಿಸಿ, ವೇದಿಕೆ ಕಲ್ಪಿಸುವುದು ಚಿಗುರು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ನುಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ದೇಸಿ ಕಲೆ, ಸಾಹಿತ್ಯ, ಸಂಸ್ಕೃತಿಗೆ ಉತ್ತೇಜನ ನೀಡುವ ದಿಸೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಚಾರ್ಯ ಚನ್ನಬಸವ ಹೇಡೆ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಚಿಗುರು ಕಾರ್ಯಕ್ರಮದ ಮೂಲಕ ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪತ್ರಾಂಕಿತ ವ್ಯವಸ್ಥಾಪಕಿ ನಾಗವೇಣಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪುಷ್ಪಾ ಗೊರಗಿ, ಸದಸ್ಯರಾದ ಕಾಶೀನಾಥ, ಧರ್ಮಾಬಾಯಿ, ಮಿಟ್ಟುಸಿಂಗ್, ಸರಸ್ವತಿ ಇದ್ದರು. ದೇವಿದಾಸ ಜೋಶಿ ನಿರೂಪಿಸಿದರು.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.