ಬುಧವಾರ, ಫೆಬ್ರವರಿ 19, 2020
28 °C
ಕುಂಚದಲ್ಲಿ ಮೂಡಿದ ಆಕರ್ಷಕ ವರ್ಣಚಿತ್ರ, ಕಲಾಕೃತಿಗಳು

ಪ್ರೇಕ್ಷಕರ ಮನ ತಣಿಸಿದ ಚಿತ್ರಸಂತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಆಕರ್ಷಕ ವರ್ಣಚಿತ್ರಗಳು, ಕಣ್ಣು ಹಾಯಿಸಿದಲ್ಲೆಲ್ಲ ವೈವಿಧ್ಯಮಯ ಕಲಾಕೃತಿಗಳು, ಕಲಾಭಿಮಾನಿಗಳು ಬಣ್ಣದಲ್ಲಿ ಮಿಂದೆದ್ದರು. ಚಿತ್ರಸಂತೆಯಲ್ಲಿ ಜನರ ಸಂತೆಯಾಗಿ ಕಂಡು ಬಂದಿತು. 

ಚಿತ್ರಕಲಾ ಕಾಲೇಜು, ಚಿತ್ರಕಲಾ ಶಿಕ್ಷಕರ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಭಾನುವಾರ ಇಲ್ಲಿಯ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ ಚಿತ್ರಸಂತೆಯಲ್ಲಿ ಕಲಾವಿದರು ಬಿಡಿಸಿದ ವಿವಿಧ ಬಗೆಯ ಕಲಾಕೃತಿಗಳು ಕಲಾ ರಸಿಕರನ್ನು ತನ್ನೆಡೆ ಸೆಳೆದವು.

ಜಿಲ್ಲಾ ನ್ಯಾಯಾಲಯದ ಆವರಣ ಮುಂಭಾಗದ ರಸ್ತೆಯ ಎರಡು ಬದಿಯ ಕಾಲುದಾರಿಯಲ್ಲಿ ಕಲಾವಿದರು ಬಿಡಿಸಿದ ವೈವಿದ್ಯಮಯ ಚಿತ್ರಗಳು ಗ್ರೀಲ್‌ಗಳಿಗೆ ನೇತು ಹಾಕಿದ್ದು ಹಾಗೂ ಪೇಪರ್‌ ಮೇಲೆ ಬಿಡಿಸಿದ ಪೇಟಿಂಗ್‌ ನೋಡುಗರನ್ನು ಗಮನ ಸೆಳೆದವು.

ದೇಶಿ ಸಂಸ್ಕೃತಿ ಪ್ರತಿಬಿಂಬಿಸುವ ಚಿತ್ರಗಳು, ಮಹನೀಯರ ಭಾವಚಿತ್ರಗಳು ಹೀಗೆ ಒಂದೊಂದು ಚಿತ್ರವೂ ಅದ್ಭುತವಾಗಿದ್ದವು. ನಗರದ ಜನತೆ ತಮ್ಮ ಪರಿವಾರದೊಂದಿಗೆ ಆಗಮಿಸಿ ಚಿತ್ರಸಂತೆಯ ಕಲಾರಚನೆಗಳನ್ನು ನೋಡಿ ಸಂಭ್ರಮಿಸಿದರು. ಕೆಲವರು ತಮಗೆ ಇಷ್ಟವಾದ ಕಲಾಕೃತಿಗಳನ್ನು ಖರೀದಿಸಿ ಸಂತಸ ಪಟ್ಟರು.

ರಸ್ತೆಯುದ್ದಕ್ಕೂ ಕಲಾವಿದರ ಕಲಾ ರಚನೆಯನ್ನು ಜೋಡಿಸಲಾಗಿತ್ತು. ಸ್ಥಳದಲ್ಲಿಯೇ ತಮ್ಮ ಚಿತ್ರ ತೆಗೆಸಿಕೊಂಡು ಸಂಭ್ರಮಿಸಿ ಚಿತ್ರವನ್ನು ಮನೆಗೆ ತೆಗೆದುಕೊಂಡು ಹೋದರು. ಹೀಗೆ ಕಲಾವಿದರ ಕೈಚಳಕಕ್ಕೆ ನಿಬ್ಬೆರಗಾದರು.‌

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 200ಕ್ಕೂ ಹೆಚ್ಚು ಕಲಾವಿದರು ತಾವು ಸಿದ್ಧಪಡಿಸಿದ್ದ ಸಾವಿರಾರು ಕಲಾಕೃತಿಗಳಿಂದ  ಆವ ರಣದ ಅನಾವರಣಗೊಂಡಿತ್ತು. ಗಾಜಿನ ಮೇಲೂ ಅರಳಿರುವ ಚಿತ್ರಗಳು, ಚಿತ್ರಕಲೆ ಬಿಡಿಸಲು ಬೇಕಾಗುವ ಸಾಮಗ್ರಿಗಳು, ಬಣ್ಣಗಳ ಮಾರಾಟ ಭರ್ಜರಿಯಾಗಿತ್ತು. ಕಲಾಕೃತಿಗಳನ್ನು ನೋಡಲು ಸುಮಾರು 2 ಸಾವಿರ ಜನ ವೀಕ್ಷಣೆ ಮಾಡಿದ್ದಾರೆ ಎಂದು ಹೇಳುತ್ತಾರೆ ಚಿತ್ರಕಲಾ ಸಂಘದ ಯೋಗೇಶ ಮಠದ್‌.

ಬೆಳಿಗ್ಗೆ 8 ರಿಂದ ನಗರದ ದತ್ತಗಿರಿಶಾಲೆ, ಸಿದ್ಧಾರೂಢ ಪಬ್ಲಿಕ್ ಶಾಲೆ, ಜ್ಞಾನಸುಧಾ ವಿದ್ಯಾಲಯ ಶಾಲೆ, ಒಂದೇ ಮಾತರಂ ಶಾಲೆ ಮಕ್ಕಳು ವಿವಿಧ ಬಗೆಯ ಚಿತ್ರಗಳನ್ನು ಬಿಡಿಸಿದರು. ನಗರದ ವಿವಿಧ ಮಹಿಳೆಯರು ರಂಗೋಲಿಯಲ್ಲಿ ಭಾರತಧ್ವಜ ಸೇರಿದಂತೆ ವಿವಿಧ ಬಗೆಯ ಚಿತ್ರಗಳನ್ನು ಬಿಡಿಸಿ ಚಿತ್ರಸಂತೆಯ ಮೆರಗನ್ನು ಹೆಚ್ಚಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮ.ಟಿ.ಪಿ. ಚಿತ್ರಸಂತೆಗೆ ಚಾಲನೆ ನೀಡಿದರು.

ಉದ್ಯಮಿ ಧನರಾಜ ತಾಳಂಪಳ್ಳಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಶಿವಶಂಕರ ಟೋಕರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಬಾಂಗೂರ ಸಿಮೆಂಟ್‌ನ ಸಂಜಯಸಿಂಗ್‌, ಕಲಬುರ್ಗಿಯ ಚೈತನ್ಯಮಯಿ ಆರ್ಟ್‌ ಗ್ಯಾಲರಿ ನಿರ್ದೇಶಕ ಎ.ಎಸ್.ಪಾಟೀಲ, ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಷ್ಣುಕಾಂತ ಠಾಕೂರ, ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ, ಶಿವಶಂಕರ ಟೋಕರೆ, ಬಸವರಾಜ ಬಲ್ಲೂರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)