ಮಂಗಳವಾರ, ಅಕ್ಟೋಬರ್ 22, 2019
25 °C
ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಲಾ ಉತ್ಸವಕ್ಕೆ ಚಾಲನೆ

ಮುಂದಿನ ಪೀಳಿಗೆಗೆ ಕಲೆ ಧಾರೆ ಎರೆಯಿರಿ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ

Published:
Updated:
Prajavani

ಬೀದರ್‌: ‘ಹಿರಿಯರಿಂದ ಬಂದ ಬಳುವಳಿ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಕಲಾವಿದರು ತಮ್ಮ ಮಕ್ಕಳಿಗೆ ಧಾರೆ ಎರೆಯಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ ಹೇಳಿದರು.

ನಗರದ ಎಸ್.ಎಲ್. ಕುದುರೆ ಫಂಕ್ಷನ್ ಹಾಲ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭಾಲ್ಕಿ ತಾಲ್ಲೂಕಿನ ಮಳಚಾಪುರದ ಡಾ.ಅಂಬೇಡ್ಕರ್ ಸಾಂಸ್ಕೃತಿಕ ಪ್ರಚಾರ ಕಾರ್ಯ ಸಮಿತಿ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಲಾ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ವಿದೇಶಿ ಸಂಸ್ಕೃತಿಗೆ ಮಕ್ಕಳು ಬಹುಬೇಗ ಮಾರಿ ಹೋಗುತ್ತಿದ್ದಾರೆ. ದೇಸಿ ಸಂಸ್ಕೃತಿಯ ಸೊಗಡು ಹಾಗೂ ಶ್ರೀಮಂತಿಕೆಯನ್ನು ಅವರಿಗೆ ಮನವರಿಕೆ ಮಾಡಬೇಕು. ಈ ಮೂಲಕ ನಮ್ಮ ನಾಡಿನ ಸಂಸ್ಕೃತಿಯ ಉಳಿವಿಗೆ ಪ್ರತಿಯೊಬ್ಬರು ಮುಂದಾಗಬೇಕು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಜಾನಪದ ಕಲಾವಿದ ಚಂದ್ರಪ್ಪ ಹೆಬ್ಬಾಳಕರ್ ಮಾತನಾಡಿ, ‘ಕೋಲಾಟ, ಬುಲಾಯಿ, ತತ್ವಪದ, ಮೋಹರಂ ಪದ, ಹಂತಿ ಪದಗಳನ್ನು ಮಕ್ಕಳಿಗೆ ಹೇಳಿಕೊಡುವ ಅಗತ್ಯವಿದೆ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ ಮಾತನಾದರು. ಕನ್ನಡ ಸಾಹಿತ್ಯ ಪರಿಷತ್ತಿನ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ, ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಸದಸ್ಯ ವಿಜಯಕುಮಾರ ಸೋನಾರೆ, ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಮಹೇಶ ಗೋರನಾಳಕರ್, ಆಶ್ವಿನಿ ಕುದುರೆ ಪಬ್ಲಿಕ್ ಶಾಲೆಯ ಮುಖ್ಯಶಿಕ್ಷಕಿ ಅಶ್ವಿನಿ ಸಾವಂತ ಇದ್ದರು.

ಹಿರಿಯ ಕಲಾವಿದ ನರಸಸಿಂಹಲು ಡಪ್ಪೂರ ಸುಗಮ ಸಂಗೀತ, ಸಂಜೀವಕುಮಾರ ಸ್ವಾಮಿ ಉಜನಿ ಅವರು ವಚನ ಗಾಯನ ನಡೆಸಿಕೊಟ್ಟರು.

ಔರಾದ್‌ನ ಒಣಕೆ ಓಬವ್ವ ಯುವತಿ ಸಂಘದ ಗಂಗಮ್ಮ ಹಾಗೂ ಸಂಗಡಿಗರು ಭಾವಗೀತೆ ಹಾಡಿದರು. ರಮೇಶ ಮತ್ತು ತಾಜೊದ್ದೀನ್ ಮರ್ಜಾಪುರ ಭಾವಗೀತೆ, ಶಂಕರರಾವ್ ನೇಮತಾಬಾದ್ ಹಾಗೂ ಸಂಗಡಿಗರು ತತ್ವಪದ ಮತ್ತು ಕಲ್ಲಪ್ಪ ಮಾರುತಿ ರತ್ನಾಪುರ ಅವರು ಮೋಹರಂ ಪದಗಳನ್ನು ಹಾಡಿದರು.

ಜ್ಯಾಂತಿಯ ಜೈಭೀಮ ಮಹಿಳಾ ಮಂಡಳದ ಮಹಿಳೆಯರು ಜಾನಪದ ಗೀತೆ ಹಾಡಿದರು. ಬಗದಲ್ ತಾಂಡಾದ ಶಾರದಾಬಾಯಿ ಹಾಗೂ ಸಂಗಡಿಗರ ಲಂಬಾಣಿ ನೃತ್ಯ ಜನಮನ ಸೆಳೆಯಿತು.

ವೀಣಾ ದೇವದಾಸ ಚಿಮಕೋಡ ನಾಡಗೀತೆ ಹಾಡಿದರು. ರತ್ನದೀಪ ಕಸ್ತೂರೆ ನಿರೂಪಿಸಿದರು. ರಮೇಶ ದೊಡ್ಡಿ ವಂದಿಸಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)