ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌: ಗುರು–ಶಿಷ್ಯರ ಸಂಬಂಧ ಹೂ ಬಳ್ಳಿಯಂತೆ

ವಿದ್ಯಾರಣ್ಯ ಪ್ರೌಢ ಶಾಲೆಯ ಮುಖ್ಯಶಿಕ್ಷಕಿ ಪ್ರತಿಭಾ ಚಾಮಾ ಹೇಳಿಕೆ
Published 12 ಮೇ 2024, 15:48 IST
Last Updated 12 ಮೇ 2024, 15:48 IST
ಅಕ್ಷರ ಗಾತ್ರ

ಬೀದರ್‌: ‘ಗುರು–ಶಿಷ್ಯರ ಸಂಬಂಧ ಹೂ ಬಳ್ಳಿಯಂತೆ’ ಎಂದು ವಿದ್ಯಾರಣ್ಯ ಪ್ರೌಢ ಶಾಲೆಯ ಮುಖ್ಯಶಿಕ್ಷಕಿ ಪ್ರತಿಭಾ ಚಾಮಾ ಹೇಳಿದರು.

ನಗರದ ಸಾಯಿ ಆದರ್ಶ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ 1994-95ನೇ ಸಾಲಿನ ವಿದ್ಯಾರ್ಥಿಗಳ ಬಳಗದ ವತಿಯಿಂದ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದ್ಯಾರ್ಥಿಯೆಂಬ ಹೂವು ಎಲ್ಲೆಡೆ ಸಂಚರಿಸಿ, ಸಾಧನೆಯ ಉತ್ತುಂಗ ಶಿಖರಕ್ಕೇರುತ್ತದೆ. ಆದರೆ, ಬಳ್ಳಿಯೆಂಬ ಶಿಕ್ಷಕ ಅದೇ ಶಾಲೆಯಲ್ಲಿ ಜೀವನಪೂರ್ತಿ ಶಿಕ್ಷಣ ನೀಡುತ್ತ ಜೀವನ ಸವೆಸುತ್ತಾನೆ. ಆದರೆ, ವಿದ್ಯಾರ್ಥಿಗಳ ಸಾಧನೆಯಲ್ಲಿ ಸಂತಸ ಪಡುವವರೇ ನಿಜವಾದ ಶಿಕ್ಷಕರು ಎಂದು ಹೇಳಿದರು.

ಸಾಯಿ ಆದರ್ಶ ಶಾಲೆ ಅಪ್ಪಟ ಕನ್ನಡ ಮಾಧ್ಯಮ ಶಾಲೆ. ಗಡಿಯಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿದೆ. ಯಾವ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಂಘ ಇರುತ್ತೋ ಅದು ಶ್ರೇಷ್ಠ ಶಾಲೆ. ಏಕೆಂದರೆ ಕಲಿತ ಶಾಲೆಗೆ ಸಹಕಾರ ನೀಡುವ ಹಳೆಯ ವಿದ್ಯಾರ್ಥಿಗಳ ಕಾರ್ಯ ಶ್ಲಾಘನಾರ್ಹವಾದುದು ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಸತ್ಯ ಸಾಯಿ ಸೇವಾ ಸಮಿತಿ ಅಧ್ಯಕ್ಷೆ ವಿಮಲಾಬಾಯಿ ವಿ.ಫುಲೇಕರ್ ಮಾತನಾಡಿ,‘ಕಲಿಸಿದ ಗುರುವಿಗೆ, ಕಲಿತ ಶಾಲೆಗೆ ಶಿರಬಾಗಿ ನಡೆದರೆ ಬದುಕು ಹಸನಾಗುತ್ತದೆ. ಹಳೆಯ ವಿದ್ಯಾರ್ಥಿಗಳು ಕಲಿತ ಶಾಲೆಗೆ ತಮ್ಮ ಕೈಲಾದಷ್ಟು ಮುಂದಿನ ಪೀಳಿಗೆಗೆ ಸಹಕಾರವಾಗುವ ನಿಟ್ಟಿನಲ್ಲಿ ಸಹಾಯ ಹಸ್ತ ಚಾಚಬೇಕು’ ಎಂದರು.

ಹಳೆಯ ವಿದ್ಯಾರ್ಥಿ ಬಳಗದ ಅಧ್ಯಕ್ಷ ವೀರಶೆಟ್ಟಿ ಪಟ್ನೆ ಮಾತನಾಡಿ,‘ಹಳೆ ವಿದ್ಯಾರ್ಥಿಗಳು ಪ್ರತಿವರ್ಷ ಒಂದೆಡೆ ಸೇರುವ ಉದ್ದೇಶದಿಂದ ಈ ಕಾರ್ಯಕ್ರಮ ಆಚರಿಸಿಕೊಂಡು ಬರಲಾಗುತ್ತಿದೆ. ಕೈಲಾದಷ್ಟು ನಿಧಿ ಸಂಗ್ರಹಿಸಿ ತೊಂದರೆಯಲ್ಲಿರುವ ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಸಹಾಯ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಬಳಗದ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ, ರಾಜಶೇಖರ ಶಿವಾಚಾರ್ಯರು ಗೋರಟಾ, ಗೋರಟಾ ಪ್ರಭುದೇವ ಸ್ವಾಮೀಜಿ, ಮಾರುತಿ ಪಂಚಭಾಯಿ, ಎಸ್.ಬಿ.ಕುಚಬಾಳ, ಶಿವಕುಮಾರ ಕಟ್ಟೆ, ತುಕಾರಾಮ ರೆಡ್ಡಿ, ಗುರುರಾಜ ಪಾಟೀಲ, ನಂದಿನಿ ಗಾಯಕವಾಡ, ಸಾವಿತ್ರಿ ಹೆಗ್ಗೆ, ಮೀನಾಕುಮಾರಿ ಚಂಡರ್ಕಿ, ಅರ್ಚನಾ ಕುಲಕರ್ಣಿ, ಜಗದೇವಿ ಉದಗೀರೆ, ಜ್ಯೋತಿ ಕುಲಕರ್ಣಿ, ಈಶ್ವರ ಮಲ್ಕಾಪುರ ಹಾಗೂ ಕಲ್ಯಾಣರಾವ ಚಳಕಾಪುರೆ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT