ಬೀದರ್‌ ಜಿಲ್ಲೆಯಲ್ಲಿ ನಿತ್ಯ 3 ಲಕ್ಷ ಮೊಟ್ಟೆ ಮಾರಾಟ

7
ತೆಲಂಗಾಣದಿಂದ ಪೂರೈಕೆ, ಭ್ರೂಣ ರಹಿತ ಮೊಟ್ಟೆ ಇಷ್ಟಪಡುತ್ತಿರುವ ಜನ

ಬೀದರ್‌ ಜಿಲ್ಲೆಯಲ್ಲಿ ನಿತ್ಯ 3 ಲಕ್ಷ ಮೊಟ್ಟೆ ಮಾರಾಟ

Published:
Updated:
Deccan Herald

ಬೀದರ್‌: ಜಿಲ್ಲೆಯಲ್ಲಿ ಭ್ರೂಣ ರಹಿತ ಮೊಟ್ಟೆ (ಇನ್‌ಫರ್ಟೈಲ್) ಮಾರಾಟ ಹೆಚ್ಚುತ್ತಲೇ ಇದೆ. ಪ್ರಸ್ತುತ ಬೀದರ್‌ ನಗರವೊಂದರಲ್ಲೇ 1.20 ಲಕ್ಷ, ಬಸವಕಲ್ಯಾಣದಲ್ಲಿ 80 ಸಾವಿರ ಸೇರಿ ಜಿಲ್ಲೆಯಲ್ಲಿ ನಿತ್ಯ ಮೂರು ಲಕ್ಷ ಮೊಟ್ಟೆಗಳು ಮಾರಾಟವಾಗುತ್ತಿವೆ.

ಅಧಿಕ ಪೋಷಕಾಂಶಗಳಿರುವ ಕಾರಣ ಸಾಕಷ್ಟು ಜನ ಮೊಟ್ಟೆ ಸೇವಿಸುತ್ತಿದ್ದಾರೆ. ಇದರಿಂದ ಕುಕ್ಕುಟ ಉದ್ಯಮವೂ ಬೆಳೆಯುತ್ತಿದೆ. ಅಂತರರಾಷ್ಟ್ರೀಯ ಮೊಟ್ಟೆ ಆಯೋಗವು 1995ರಲ್ಲಿ ವಿಯೆನ್ನಾದಲ್ಲಿ ನಡೆಸಿದ ಸಮ್ಮೇಳನದಲ್ಲಿ ಪ್ರತಿ ವರ್ಷ ಅಕ್ಟೋಬರ್ ತಿಂಗಳ 2ನೇ ಶುಕ್ರವಾರ ವಿಶ್ವ ಮೊಟ್ಟೆ ದಿನವನ್ನಾಗಿ ಆಚರಿಸಲು ನಿರ್ಧರಿಸಿದ ನಂತರ ಮೊಟ್ಟೆ ಸೇವಿಸುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

‘ನಾಟಿ ಕೋಳಿಯ ಮೊಟ್ಟೆಗಳು ಸ್ಥಳೀಯವಾಗಿಯೇ ಬಳಕೆಯಾಗುತ್ತಿವೆ. ಜಿಲ್ಲೆಯಲ್ಲಿ ಸುಮಾರು ಮೂರು ಲಕ್ಷ ಮೊಟ್ಟೆಗಳು ನಿತ್ಯ ಮಾರಾಟವಾಗುತ್ತಿವೆ’ ಎಂದು ಮೊಟ್ಟೆಗಳ ಸಗಟು ವ್ಯಾಪಾರಿ ಫ್ಯಾಷನ್‌ ಡೀಲರ್‌ ಎಗ್ಸ್‌ನ ಮಾಲೀಕ ಬಸಿರೋದ್ದಿನ್‌ ಹೇಳುತ್ತಾರೆ.

‘ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಿಂದಲೂ ಮೊಟ್ಟೆಗಳು ಬರುತ್ತಿವೆ. ಕೋಳಿ ಮೊಟ್ಟೆ ಹಾಕಿದ ದಿನದಿಂದ 10 ದಿನ ರೆಫ್ರಿಜಿರೇಟರ್‌ನಲ್ಲಿ ಇಟ್ಟು ಸೇವಿಸಬಹುದು. ತಾಜಾ ಮೊಟ್ಟೆಗಳನ್ನು ತಂದು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು’ ಎಂದು ಪಶು ವೈದ್ಯಾಧಿಕಾರಿ ಡಾ.ಯೋಗೇಂದ್ರ ಕುಲಕರ್ಣಿ ಸಲಹೆ ನೀಡುತ್ತಾರೆ.

‘ನಾಟಿ ಕೋಳಿಯ ಮೊಟ್ಟೆಯಲ್ಲಿ ಭ್ರೂಣ ಇರುತ್ತದೆ. ಫಾರ್ಮ್‌ಗಳಲ್ಲಿ ಭ್ರೂಣ ರಹಿತ ಮೊಟ್ಟೆ(ಇನ್‌ಫರ್ಟೈಲ್) ಉತ್ಪಾದನೆಯಾಗುತ್ತಿವೆ. ಭ್ರೂಣ ಇಲ್ಲದ ಕಾರಣ ಫಾರ್ಮ್ ಮೊಟ್ಟೆಯನ್ನು ಶಾಖಾಹಾರದ ಪಟ್ಟಿಯಲ್ಲಿ ಗುರುತಿಸಬಹುದು’ ಎಂದು ಹೇಳುತ್ತಾರೆ.

ಬುದ್ಧಿ ಚುರುಕು!

‘ಮೊಟ್ಟೆಯಲ್ಲಿನ ಕೋಲಿನ್ ಪ್ರೋಟಿನ್ ಮಿದುಳಿನ ಆರೋಗ್ಯ ಕಾಪಾಡಿ ಬುದ್ಧಿ ಚುರುಕುಗೊಳಿಸುತ್ತದೆ’ ಎಂದು ಬೆಂಗಳೂರಿನ ಪಶು ವೈದ್ಯಕೀಯ ಕಾಲೇಜಿನ ಕುಕ್ಕುಟ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಜಯನಾಯಕ್ ಹೇಳುತ್ತಾರೆ.

‘ಮೊಟ್ಟೆ ಸೇವನೆಯಿಂದ ದೇಹದಲ್ಲಿ ಒಳ್ಳೆಯ ಕೊಬ್ಬಿನ ಪ್ರಮಾಣ ಹೆಚ್ಚಾಗಿ ಹೃದಯ ಕಾಯಿಲೆ ತಡೆಗಟ್ಟಲು ನೆರವಾಗುತ್ತದೆ. ಮೊಟ್ಟೆಯು ಆಹಾರದ ಗುಣಮಟ್ಟವನ್ನು ಹೆಚ್ಚಿಸಿ ಸಮತೋಲನ ಪೋಷಕಾಂಶಗಳನ್ನು ಒದಗಿಸುತ್ತದೆ. ದೇಹದ ತೂಕ ಕಡಿಮೆ ಮಾಡಲು ನೆರವಾಗುತ್ತದೆ’ ಎಂದು ತಿಳಿಸುತ್ತಾರೆ.

‘ಕಣ್ಣಿನಲ್ಲಿ ಪೊರೆ ಬೆಳೆಯುವುದನ್ನು ತಡೆಗಟ್ಟಿ ದೃಷ್ಟಿದೋಷದ ಕಾಯಿಲೆಗಳನ್ನು ದೂರ ಮಾಡುತ್ತದೆ. ನೇತ್ರ ಆರೋಗ್ಯ ಕಾಪಾಡಲು, ಅಕಾಲ ವೃದ್ಧಾಪ್ಯ ತಡೆಗಟ್ಟಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅನುಕೂಲವಾಗಿದೆ’ ಎಂದು ಅವರು ವಿವರಿಸುತ್ತಾರೆ.

‘ಮೂಳೆಗಳ ಸವಕಳಿಯನ್ನು ತಡೆಗಟ್ಟಿ ಮಾಂಸಖಂಡ ಹಾಗೂ ಮೂಳೆಗಳನ್ನು ಬಲಿಷ್ಠಗೊಳಿಸುತ್ತದೆ. ಕೂದಲು ಮತ್ತು ಉಗುರಿನ ಆರೋಗ್ಯವನ್ನು ಕಾಪಾಡುತ್ತದೆ’ ಎಂದು ತಿಳಿಸುತ್ತಾರೆ.

ಮೊಟ್ಟೆಯಲ್ಲಿ ಏನಿದೆ?

ಮೊಟ್ಟೆಯು ಅತ್ಯಂತ ಕಡಿಮೆ ದರದಲ್ಲಿ ಅತ್ಯುತ್ತಮವಾದ ಪೋಷಕಾಂಶಗಳನ್ನು ಒದಗಿಸುವ ಒಂದು ಮೂಲವಾಗಿದೆ. ಮೊಟ್ಟೆಯಲ್ಲಿ ಪ್ರೋಟಿನ್, ವಿಟಮಿನ್, ಖನಿಜಾಂಶಗಳು ಹೇರಳವಾಗಿದ್ದು, ಕೊಬ್ಬು ಮತ್ತು ಕೊಲೆಸ್ಟಿರಾಲ್ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಒಂದು ಮೊಟ್ಟೆಯಿಂದ ಶೇ 9 ರಷ್ಟು ವಿಟಮಿನ್ ಬಿ 12, ಶೇ 15ರಷ್ಟು ವಿಟಮಿನ್ ಬಿ2, ಶೇ 7ರಷ್ಟು ವಿಟಮಿನ್ ಬಿ5, ಶೇ 6ರಷ್ಟು ವಿಟಮಿನ್ ಓ, ಶೇ 22ರಷ್ಟು ಸೆಲೀನಿಯಂ ದೊರೆಯುತ್ತದೆ.

ಭಾರತೀಯ ಆರೋಗ್ಯ ಸಂಶೋಧನಾ ಪರಿಷತ್ ಪ್ರತಿ ವ್ಯಕ್ತಿಯು ವರ್ಷಕ್ಕೆ ಕನಿಷ್ಠ 180 ಮೊಟ್ಟೆಗಳನ್ನು ಸೇವಿಸಲು ಶಿಫಾರಸು ಮಾಡಿದೆ. ಭಾರತದಲ್ಲಿ ಪ್ರತಿ ವ್ಯಕ್ತಿಯ ಮೊಟ್ಟೆ ಸೇವನೆಯ ಪ್ರಮಾಣ ವರ್ಷಕ್ಕೆ ಕೇವಲ 68 ಇದೆ.

‘ಮೊಟ್ಟೆ ಸೇವನೆಯ ಉಪಯೋಗದ ಬಗ್ಗೆ ಅರಿವು ಮೂಡಿಸುವ ಅಗತ್ಯ ಇದೆ’ ಎಂದು ಬೆಂಗಳೂರಿನ ಪಶು ವೈದ್ಯಕೀಯ ಕಾಲೇಜಿನ ಕುಕ್ಕುಟ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಜಯನಾಯಕ್ ಹೇಳುತ್ತಾರೆ.

* ಮೊಟ್ಟೆಯ ಪ್ರಮಾಣಿತ ಅವಧಿಯೇ ಏಳು ದಿನ ಇದೆ. ಕೋಳಿ ಮೊಟ್ಟೆ ಹಾಕಿದ ದಿನದಿಂದ ಒಂದು ವಾರದ ವರೆಗೂ ಸೇವಿಸಬಹುದು.

–ಡಾ.ಯೋಗೇಂದ್ರ ಕುಲಕರ್ಣಿ, ಪಶು ವೈದ್ಯಾಧಿಕಾರಿ

* ನಾಟಿ ಕೋಳಿಯ ಮೊಟ್ಟೆಗಳು ಸ್ಥಳೀಯವಾಗಿಯೇ ಬಳಕೆಯಾಗುತ್ತಿವೆ. ಜಿಲ್ಲೆಯಲ್ಲಿ ಸುಮಾರು 3 ಲಕ್ಷ ಮೊಟ್ಟೆಗಳು ನಿತ್ಯ ಮಾರಾಟವಾಗುತ್ತಿವೆ.

–ಬಸಿರೋದ್ದಿನ್‌, ಮೊಟ್ಟೆಗಳ ಸಗಟು ವ್ಯಾಪಾರಿ

ಅಂಕಿಅಂಶ

* 82 ರಷ್ಟು ಜನ ಮಾಂಸಾಹಾರ ಸೇವನೆ

* 18 ರಷ್ಟು ಮಂದಿ ಸಸ್ಯಾಹಾರ ಸೇವನೆ

* 4 ಜಿಲ್ಲೆಯಲ್ಲಿ ಲಕ್ಷ ನಾಟಿ ಕೋಳಿ ಸಾಕಾಣಿಕೆ

* 4 ಲಕ್ಷ ಮಾಂಸದ ಕೋಳಿ ಉತ್ಪಾದನೆ

ಮುಖ್ಯಾಂಶಗಳು

* ಭ್ರೂಣ ರಹಿತ ಮೊಟ್ಟೆ (ಇನ್‌ಫರ್ಟೈಲ್) ಹೆಚ್ಚು ಮಾರಾಟ

* ವಾರ್ಷಿಕ ಸರಾಸರಿ 60, 70 ಮೊಟ್ಟೆ ಇಡುವ ನಾಟಿ ಕೋಳಿ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !