ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾಲ್ಕಿ: ತ್ಯಾಜ್ಯ ಸಂಗ್ರಹ ತಾಣವಾದ ಖಾಲಿ ನಿವೇಶನಗಳು

ಸಾಂಕ್ರಾಮಿಕ ರೋಗ ಭೀತಿ
ಬ‌ಸವರಾಜ್ ಎಸ್. ಪ್ರಭಾ
Published 10 ಜುಲೈ 2024, 6:21 IST
Last Updated 10 ಜುಲೈ 2024, 6:21 IST
ಅಕ್ಷರ ಗಾತ್ರ

ಭಾಲ್ಕಿ: ಪಟ್ಟಣದಲ್ಲಿರುವ ಖಾಲಿ ನಿವೇಶನಗಳು, ಸರ್ಕಾರದ ವಿವಿಧ ಇಲಾಖೆಗಳಿಗೆ ಸೇರಿರುವ ಖಾಲಿ ಸ್ಥಳ, ಪಾಳು ಬಿದ್ದಿರುವ ಕಟ್ಟಡಗಳು ಕಸ ಸಂಗ್ರಹ, ಹೊಲಸು ವಸ್ತುಗಳನ್ನು ಬಿಸಾಡುವ ಕೇಂದ್ರಗಳಾಗಿ ಮಾರ್ಪಟ್ಟಿದ್ದು, ಅವುಗಳನ್ನೇ ಹಂದಿ, ನಾಯಿ ಸೇರಿದಂತೆ ಇತರ ಪ್ರಾಣಿಗಳು ತಮ್ಮ ಆಶ್ರಯ ತಾಣವನ್ನಾಗಿಸಿಕೊಂಡಿವೆ.

ಅಕ್ಕಪಕ್ಕದ ನಿವಾಸಿಗಳು ನಿತ್ಯ ಸೂಸುವ ದುರ್ನಾತ, ಸೊಳ್ಳೆಗಳ ವಿಪರೀತ ಕಾಟ, ಹಂದಿಗಳ ಓಡಾಟದಿಂದ ಬೇಸತ್ತು, ಅಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಖಾಲಿ ನಿವೇಶನಗಳ ಮಾಲೀಕರು, ಪುರಸಭೆ ಅಧಿಕಾರಿಗಳನ್ನು ಶಪಿಸುತ್ತಿದ್ದಾರೆ.

ಪಟ್ಟಣದ ಶರಣ ನಗರ, ಜನತಾ ಕಾಲೊನಿ, ಮಾಸುಮ್ ಪಾಶಾ ಕಾಲೊನಿ, ದೇವಿ ನಗರ, ಶಾಹು ನಗರ, ಉಪನ್ಯಾಸಕರ ಬಡಾವಣೆ ಸೇರಿದಂತೆ ಎಲ್ಲೆಲ್ಲಿ ಖಾಲಿ ನಿವೇಶನ ಇವೆಯೋ ಅಲ್ಲೆಲ್ಲಾ ಗಿಡ ಗಂಟಿಗಳು, ಹುಲ್ಲು ಬೇಕಾಬಿಟ್ಟಿ ಬೆಳೆದಿದೆ. ಸಹಜವಾಗಿಯೇ ಇಂತಹ ಸ್ಥಳಗಳ ಅಕ್ಕಪಕ್ಕದ ನಿವಾಸಿಗಳು ತಮ್ಮ ಮನೆಯ ಮುಸುರೆ, ಕಸ ಸೇರಿದಂತೆ ಹೊಲಸನ್ನು ಖಾಲಿ ನಿವೇಶನಗಳಲ್ಲಿ ಎಸೆಯುತ್ತಿದ್ದಾರೆ.

ಇನ್ನು ಮಳೆಗಾಲ ಇರುವುದರಿಂದ ಬಹುತೇಕ ಕಡೆ ಮಳೆ ನೀರು ಹೊಲಸಿನೊಂದಿಗೆ ಬೆರೆತು ಮತ್ತಷ್ಟು ದುರ್ನಾತ ಬೀರುತ್ತಿದೆ. ಇದರ ಪರಿಣಾಮ ಸೊಳ್ಳೆ, ಹಂದಿ, ನಾಯಿಗಳು ಇಂತಹ ಸ್ಥಳಗಳನ್ನು ತಮ್ಮ ವಾಸದ ಸ್ಥಾನಗಳನ್ನಾಗಿ ಪರಿವರ್ತಿಸಿಕೊಂಡಿವೆ ಎಂದು ಸಾರ್ವಜನಿಕರು ಅಳಲು ತೋಡಿಕೊಂಡರು.

ಪ್ಲಾಸ್ಟಿಕ್, ತರಕಾರಿ, ಬಾಕ್ಸ್‌ಗಳು ಸೇರಿದಂತೆ ವಿವಿಧ ರೀತಿಯ ಕಸಗಳಿಂದ ತುಂಬಿರುವ ನಿವೇಶನಗಳು ಒಂದು ರೀತಿಯಲ್ಲಿ ಕಸದ ತಿಪ್ಪೆಗಳಾಗಿ ಮಾರ್ಪಟ್ಟಿವೆ. ಹೊತ್ತಿಲ್ಲದ ಹೊತ್ತಲ್ಲಿ ಗೊತ್ತಾಗದಂತೆ ಪ್ಲಾಸ್ಟಿಕ್‌ನಲ್ಲಿ ತಂದು ಕಸ ಎಸೆಯುವವರಿಂದಾಗಿ ವಿವಿಧ ಸಮಸ್ಯೆಗಳು ಸೃಷ್ಟಿಯಾಗಿವೆ ಎನ್ನುತ್ತಾರೆ ಪಟ್ಟಣ ವಾಸಿ ಈಶ್ವರ ರುಮ್ಮಾ.

‘ದುರ್ನಾತ ಬೀರುವ ಕಸದಿಂದಾಗಿ ಸೊಳ್ಳೆಗಳು ಹೆಚ್ಚಾಗಿವೆ. ಮನೆಯಲ್ಲಿ ಸೊಳ್ಳೆ ಪರದೆ, ಸೊಳ್ಳೆ ನಿಯಂತ್ರಣ ಕಾಯಿಲ್ ಅಥವಾ ಫ್ಯಾನ್ ಅನ್ನು ಸದಾ ಚಾಲು ಇಡಬೇಕಾಗುತ್ತದೆ. ಸಂಜೆಯಷ್ಟೇ ಅಲ್ಲದೆ ಹಗಲಲ್ಲೂ ಕಿಟಕಿ ಬಾಗಿಲುಗಳನ್ನು ತೆರೆಯಲು ಯೋಚಿಸುವಂತಾಗಿದೆ. ಸೊಳ್ಳೆಗಳಿಂದಾಗಿ ಜ್ವರ ಸೇರಿದಂತೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಈ ಕಷ್ಟವನ್ನು ಯಾರ ಬಳಿ ಹೇಳಿಕೊಳ್ಳಬೇಕು’ ಎಂದು ಹೆಸರು ಹೇಳಲಿಚ್ಛಿಸದ ಮಹಿಳೆಯರು ಪ್ರಶ್ನಿಸಿದರು.

‘ಕಸ ಸಂಗ್ರಹದ ವಾಹನ ಪಟ್ಟಣದ ಎಲ್ಲ 27ವಾರ್ಡ್‌ಗಳ ಎಲ್ಲ ಬಡಾವಣೆಯ ಎಲ್ಲ ರಸ್ತೆಗಳ ಮನೆಗಳಿಗೆ ಬಾರದಿದ್ದಾಗ ಜನ ಅನಿವಾರ್ಯವಾಗಿ ಖಾಲಿ ನಿವೇಶನಗಳಲ್ಲೇ ರಾತ್ರಿ ಅಥವಾ ನಸುಕಿನಲ್ಲಿ ಕಸ ಸುರಿಯುವುದು ಸಾಮಾನ್ಯ. ಅದಕ್ಕಾಗಿ, ಪುರಸಭೆಯ ವಾಹನಗಳು ನಿತ್ಯವೂ ತಪ್ಪದೆ ಮನೆ ಮನೆಯಿಂದ ಕಸ ಸಂಗ್ರಹಿಸಬೇಕು. ಆಗ ಯಾರೂ ಗೊತ್ತಾಗದಂತೆ ನಿವೇಶನಗಳಿಗೆ ಕಸ ತಂದು ಎಸೆಯುವುದಿಲ್ಲ’ ಎಂದು ಸತೀಶಕುಮಾರ ಸೂರ್ಯವಂಶಿ ತಿಳಿಸಿದರು.

ಪಟ್ಟಣವನ್ನು ಸ್ವಚ್ಛ, ಸುಂದರ, ರೋಗಮುಕ್ತ, ವಾಸಿಸಲು ಯೋಗ್ಯ ತಾಣವಾಗಿಸುವಲ್ಲಿ ಪುರಸಭೆಯ ಅಧಿಕಾರಿ, ಸಿಬ್ಬಂದಿಯೊಂದಿಗೆ ಜಾಗೃತ ನಾಗರಿಕರ ಜವಾಬ್ದಾರಿ ಹೆಚ್ಚಿದೆ ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕರು.

ಮಳೆಗಾಲ ಇರುವುದರಿಂದ ಸ್ವಚ್ಛತೆಗೆ ಪುರಸಭೆಯವರು ವಿಶೇಷ ಕಾಳಜಿ ವಹಿಸಬೇಕು. ನಾಗರಿಕರೂ ತಮ್ಮ ಜವಬ್ದಾರಿ ನಿರ್ವಹಿಸಿ ಸಹಕರಿಸಬೇಕು.
ಈಶ್ವರ ರುಮ್ಮಾ, ಪಟ್ಟಣ ನಿವಾಸಿ
ಪುರಸಭೆಯ ಕಸ ಸಂಗ್ರಹ ವಾಹನಗಳು ಎಲ್ಲ ಬಡಾವಣೆಗಳ ಎಲ್ಲ ರಸ್ತೆಗಳಲ್ಲಿ ಓಡಾಡಿ ಕಸ ಸಂಗ್ರಹಿಸಬೇಕು. ಆವಾಗ ಜನರು ಖಾಲಿ ನಿವೇಶನಗಳಲ್ಲಿ ಕಸ ಎಸೆಯುವುದಿಲ್ಲ.
ಸತೀಶಕುಮಾರ ಸೂರ್ಯವಂಶಿ, ಪಟ್ಟಣ ವಾಸಿ
ಪಟ್ಟಣಗಳಲ್ಲಿರುವ ಖಾಲಿ ನಿವೇಶನಗಳ ಮಾಲೀಕರಿಗೆ ತಮ್ಮ ನಿವೇಶನಗಳಿಗೆ ಬೇಲಿ ಹಾಕಿಕೊಂಡು ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಸೂಚಿಸಿ ನೋಟಿಸ್ ನೀಡಲಾಗುವುದು‌.
ಸಂಗಮೇಶ ಕಾರಬಾರಿ, ಪುರಸಭೆ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT