ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರಕೋಲು ಬೀಸಿ ರೈತರ ಪ್ರತಿಭಟನೆ

ಜಿಲ್ಲೆಯಲ್ಲಿ ಬೇಳೆಕಾಳು ಖರೀದಿ ಪ್ರಾರಂಭಿಸಲು ಆಗ್ರಹ
Last Updated 26 ಸೆಪ್ಟೆಂಬರ್ 2018, 12:26 IST
ಅಕ್ಷರ ಗಾತ್ರ

ಬೀದರ್‌: ಬೇಳೆಕಾಳು ಖರೀದಿಗೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ರೈತರು
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಬಾರಕೋಲು ಬೀಸಿ ಪ್ರತಿಭಟನೆ ನಡೆಸಿದರು.

ಡಾ.ಅಂಬೇಡ್ಕರ್‌ ವೃತ್ತದಿಂದ ಹಲಗೆ ಬಾರಿಸುತ್ತ, ಬಾರಕೋಲು ಬೀಸುತ್ತ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗಕ್ಕೆ ಬಂದರು. ಕೆಲಹೊತ್ತು ಪ್ರತಿಭಟನೆ ಮಾಡಿದರು.

ಕೇಂದ್ರ ಸರ್ಕಾರ ಬೇಳೆಕಾಳುಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ ಖರೀದಿಸಲು ಮೀನಮೇಷ ಮಾಡುತ್ತಿದೆ. ಶೇಕಡ 20ರಷ್ಟು ಬೇಳೆ ಕಾಳು ಖರೀದಿಸಿ ಕಣ್ಣೊರೆಸುವ ತಂತ್ರ ಅನುಸರಿಸಿ ರೈತರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು.

ಜಿಲ್ಲೆಯ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖಾಂತರ ಬೇಳೆಕಾಳುಗಳನ್ನು ಖರೀದಿಸಬೇಕು. ಎಪಿಎಂಸಿ ಮೂಲಕ ಮಾರಾಟ ಮಾಡಿ ಮೂಲ ದರ ಹಾಗೂ ಕನಿಷ್ಠ ಬೆಂಬಲ ಬೆಲೆಯ ವ್ಯತ್ಯಾಸದ ಹಣವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಬೇಕು ಎಂದು ಮನವಿ ಮಾಡಿದರು.

ರೈತರು ಬೆಳೆದ ಸಂಪೂರ್ಣ ಧಾನ್ಯಗಳನ್ನು ಖರೀದಿಸಬೇಕು. ಖರೀದಿಸಿದ ಒಂದು ತಿಂಗಳಲ್ಲಿ ರೈತರಿಗೆ ಹಣ ಪಾವತಿಯಾಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಎಂ.ಎಸ್‌. ಸ್ವಾಮಿನಾಥನ್‌ ವರದಿ ಅನುಷ್ಠಾನಗೊಳಿಸುವ ಭರವಸೆ ನೀಡಿದೆ. ಉದ್ದು, ಹೆಸರು ಹಾಗೂ ಸೋಯಾಗೆ ಪ್ರತಿ ಕ್ವಿಂಟಲ್‌ಗೆ ₹ 6,975 ಬೆಂಬಲ ಬೆಲೆ ಘೋಷಣೆ ಮಾಡಿದೆ. ಆದರೆ ಕೇವಲ ಶೇಕಡ 20 ರಷ್ಟು ತೊಗರಿ ಖರೀದಿಸಲು ನಿರ್ಧರಿಸಿದೆ.
ಉಳಿದ ಶೇಕಡ 80 ರಷ್ಟು ಬೆಳೆ ರೈತರು ಎಲ್ಲಿ ಮಾರಾಟ ಮಾಡಬೇಕು. ದಲ್ಲಾಳಿಗಳು ಮನಬಂದಂತೆ ಬೇಳೆಕಾಳು ಖರೀದಿಸುತ್ತಿದ್ದಾರೆ ಎಂದು ಆರೋಪಿಸಿದರು.

ರೈತರ ಹಿತದೃಷ್ಟಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ತ್ವರಿತ ನಿರ್ಧಾರ ಕೈಗೊಳ್ಳಬೇಕು. ರೈತರು ತೊಂದರೆಗೆ ಒಳಗಾಗುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.

ಸಂಘದ ರಾಜ್ಯ ಘಟಕದ ಗೌರವಾಧ್ಯಕ್ಷ ನಿರ್ಮಲಕಾಂತ ಪಾಟೀಲ, ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುರಾವ್ ಪಾಟೀಲ ಹೊನ್ನಡ್ಡಿ, ಉಪಾಧ್ಯಕ್ಷ ಸಿದ್ದಪ್ಪ ಸಣ್ಣಮನಿ, ಕಾರ್ಯದರ್ಶಿ ಸುಮಂತ ಗ್ರಾಮಲೆ, ಸಂಜು ಪಾಟೀಲ, ಕಾಶೀನಾಥ ಬಿರಾದಾರ, ಬಾಲಾಜಿ ಪಾಟೀಲ, ಸೋಮನಾಥ ಸಜ್ಜನ, ಶಿವರಾಜ ಪಾಟೀಲ ಅತಿವಾಳ, ಮಾಧವರಾವ್ ಬಿರಾದಾರ, ದಸ್ತಗೀರ ಕಾಕನಾಳ ನೀಲಕಂಠ ನಾಗಶಂಕರೆ, ಅಶೋಕ ಪಾಟೀಲ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT