ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹಿರಂಗ ಚರ್ಚೆ ರದ್ದುಪಡಿಸದಿದ್ದರೆ ಉಪವಾಸ ಸತ್ಯಾಗ್ರಹ: ವೈಜಿನಾಥ ಕಮಠಾಣೆ

ಜಿಲ್ಲಾಡಳಿತ ಮಧ್ಯಸ್ಥಿಕೆಗೆ ಮಹಾಸಭಾ ಜಿಲ್ಲಾ ಅಧ್ಯಕ್ಷ ವೈಜಿನಾಥ ಕಮಠಾಣೆ ಒತ್ತಾಯ
Last Updated 30 ಅಕ್ಟೋಬರ್ 2020, 16:32 IST
ಅಕ್ಷರ ಗಾತ್ರ

ಬೀದರ್: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹಾಗೂ ಸಂಸದ ಭಗವಂತ ಖೂಬಾ ನವೆಂಬರ್ 5 ರಂದು ನಿಗದಿಪಡಿಸಿರುವ ಬಹಿರಂಗ ಚರ್ಚೆಯಿಂದ ಹಿಂದೆ ಸರಿಯದಿದ್ದರೆ ಚರ್ಚೆ ಸ್ಥಳದಲ್ಲೇ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ವೈಜಿನಾಥ ಕಮಠಾಣೆ ಎಚ್ಚರಿಕೆ ನೀಡಿದ್ದಾರೆ.

ಕೊರೊನಾದಿಂದಾಗಿ ಇಡೀ ವಿಶ್ವವೇ ನಲುಗಿ ಹೋಗಿದೆ. ಇನ್ನೂ ಅದರ ಪ್ರಕೋಪ ಕಡಿಮೆಯಾಗಿಲ್ಲ. ಈ ನಡುವೆ ಬಹಿರಂಗ ಚರ್ಚೆ ನಡೆದರೆ ಮಹಾಮಾರಿ ಭಾರಿ ಪ್ರಮಾಣದಲ್ಲಿ ಹರಡಲಿದೆ. ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಯೂ ಇದೆ. ಹೀಗಾಗಿ ಜಿಲ್ಲಾ ಆಡಳಿತ ಮಧ್ಯಸ್ಥಿಕೆ ವಹಿಸಿ ಚರ್ಚೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈಶ್ವರ ಖಂಡ್ರೆ ಹಾಗೂ ಭಗವಂತ ಖೂಬಾ ವೀರಶೈವ ಲಿಂಗಾಯತ ಸಮಾಜದ ಆಸ್ತಿಯಾಗಿದ್ದಾರೆ. ಉನ್ನತ ಸ್ಥಾನದಲ್ಲಿರುವ ಇಬ್ಬರೂ ಪರಸ್ಪರ ಜಗಳವಾಡಿದರೆ ಸಮಾಜದಲ್ಲಿ ಒಡಕು ಮೂಡಲಿದೆ. ಬೇರೆಯವರಿಗೆ ತಪ್ಪು ಸಂದೇಶ ರವಾನೆಯಾಗಲಿದೆ. ಹೀಗಾಗಿ ಸ್ವಪ್ರತಿಷ್ಠೆ ಬಿಟ್ಟು ಇಬ್ಬರೂ ಬಹಿರಂಗ ಚರ್ಚೆ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

ಬಹಿರಂಗ ಚರ್ಚೆಗೆ ಪಂಥಾಹ್ವಾನ ನೀಡಿದ ವಿಷಯವು ಸಮಾಜದ ಜನರು ಹಾಗೂ ಸಾರ್ವಜನಿಕರಿಗೆ ನೋವು ಉಂಟು ಮಾಡಿದೆ. ಬಸವಮುಕ್ತಿ ಮಂದಿರದ ಶಿವಯೋಗೀಶ್ವರ ಸ್ವಾಮೀಜಿ, ಹುಲಸೂರಿನ ಶಿವಾನಂದ ಸ್ವಾಮೀಜಿ ಮತ್ತು ಸಮಾಜದ ಅನೇಕ ಮುಖಂಡರು ಚರ್ಚೆ ಬೇಡ ಎಂದಿದ್ದಾರೆ. ಸಮಾಜದ ಹಿತದೃಷ್ಟಿಯಿಂದ ಮಠಾಧೀಶರು ಹಾಗೂ ಸಮಾಜದ ಮುಖಂಡರ ಸಲಹೆಗೆ ಮಾನ್ಯತೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಕೊರೊನಾ, ಅತಿವೃಷ್ಟಿಯಿಂದ ಜನ ತೀವ್ರ ಸಂಕಷ್ಟದಲ್ಲಿ ಇದ್ದಾರೆ. ಸದ್ಯ ಬಹಿರಂಗ ಚರ್ಚೆಗಿಂತ ಜನರ ನೆರವಿಗೆ ಧಾವಿಸುವುದು ಹೆಚ್ಚು ಅವಶ್ಯಕವಾಗಿದೆ. ಕಾರಣ, ಖಂಡ್ರೆ ಮತ್ತು ಖೂಬಾ ಅವರು ಪರಸ್ಪರ ವೈಮನಸ್ಸು ತೊರೆದು ಒಂದಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ದೊಕಿಸಿಕೊಡುವ ದಿಸೆಯಲ್ಲಿ ಕಾರ್ಯೋನ್ಮುಖರಾಗಬೇಕು. ಜನಹಿತದ ಕಾರ್ಯಗಳೊಂದಿಗೆ ಸಮಾಜದ ಸಂಘಟನೆ ಬಲಪಡಿಸುವ ಕಾರ್ಯವನ್ನೂ ಮಾಡಬೇಕು ಎಂದು ಸಲಹೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT