ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲೈಂಗಿಕ ಕಿರುಕುಳ ನೀಡಿದರೆ ದೂರು ದಾಖಲಿಸಿ‘

ದೂರು ಸಮಿತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಹೇಳಿಕೆ
Last Updated 18 ಡಿಸೆಂಬರ್ 2020, 15:06 IST
ಅಕ್ಷರ ಗಾತ್ರ

ಬೀದರ್: ಕೆಲಸದ ಸ್ಥಳಗಳಲ್ಲಿ ಯಾರಾದರೂ ಲೈಂಗಿಕ ಕಿರುಕುಳ ನೀಡಿದ್ದಲ್ಲಿ ಮಹಿಳೆಯರು ನಿರ್ಭಯವಾಗಿ ದೂರು ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆಯಲು ರಚಿಸಲಾದ ಜಿಲ್ಲಾ ಮಟ್ಟದ ಸ್ಥಳೀಯ ದೂರು ಸಮಿತಿ ಹಾಗೂ ಆಂತರಿಕ ದೂರು ಸಮಿತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಮಹಿಳೆಯರು ನೀಡುವ ದೂರುಗಳಲ್ಲಿ ಗೋಪ್ಯತೆ ಕಾಪಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾರ್ವಜನಿಕ ಉದ್ಯಮ, ಕೈಗಾರಿಕೆ ಮತ್ತು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಆಂತರಿಕ ದೂರು ಸಮಿತಿಗಳನ್ನು ರಚಿಸಿ ಬಂದಿರುವ ದೂರು ಮತ್ತು ವಾರ್ಷಿಕ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ್ ಮಾತನಾಡಿ, ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳಗಳನ್ನು ತಡೆಯಲು ಜಿಲ್ಲಾ ಮಟ್ಟದ ಸ್ಥಳೀಯ ದೂರು ಸಮಿತಿ ರಚನೆಯಾಗಬೇಕು. ಎಲ್ಲ ಕಚೇರಿಗಳಲ್ಲಿ ಆಂತರಿಕ ದೂರು ಸಮಿತಿಗಳನ್ನು ಕಡ್ಡಾಯವಾಗಿ ರಚಿಸಬೇಕು ಎಂದು ಹೇಳಿದರು.

ಸ್ಥಳೀಯ ದೂರು ಸಮಿತಿ ಹಾಗೂ ಆಂತರಿಕ ದೂರು ಸಮಿತಿಯ ಕಾಲಾವಧಿ 3 ವರ್ಷ ಇರುತ್ತದೆ. ಸಮಿತಿಯ ಸದಸ್ಯರು ಸ್ಥಳೀಯ ದೂರು ಸಮಿತಿ ಹಾಗೂ ಆಂತರಿಕ ದೂರು ಸಮಿತಿಯ ಕುರಿತು ವ್ಯಾಪಕ ಪ್ರಚಾರ ಮಾಡಲು ಕ್ರಮ ಕೈಗೊಳ್ಳಬೇಕು. ಶಿಕ್ಷೆ ಮತ್ತು ದಂಡದ ಕುರಿತು ಫಲಕಗಳನ್ನು ಸಿದ್ಧಪಡಿಸಿ ಎಲ್ಲ ಕಚೇರಿಗಳಲ್ಲಿ ಹಾಕಬೇಕು ಎಂದು ತಿಳಿಸಿದರು.

ಬೀದರ್ ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್ ಮಾತನಾಡಿ, ಯಾವುದೇ ಕಚೇರಿಯಲ್ಲಿ 10 ಅಥವಾ 10 ಕ್ಕಿಂತ ಹೆಚ್ಚು ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಲ್ಲಿ ಆ ಕಚೇರಿಯಲ್ಲಿ ಆಂತರಿಕ ದೂರು ಸಮಿತಿಯನ್ನು ಕಡ್ಡಾಯವಾಗಿ ರಚನೆ ಮಾಡಬೇಕು. ಕೆಲ ಮಹಿಳೆಯರು ತಮ್ಮ ಸಮಸ್ಯೆಯ ಕುರಿತು ದೂರು ನೀಡಲು ಧೈರ್ಯ ಮಾಡುವುದಿಲ್ಲ. ಅಂತಹವರಿಗಾಗಿ ಎಲ್ಲ ಕಚೇರಿಗಳಲ್ಲಿ ದೂರು ಪೆಟ್ಟಿಗೆ ಇಡಬೇಕು. ಯಾವ ಕಚೇರಿಯಲ್ಲಿ ಆಂತರಿಕ ದೂರು ಸಮಿತಿ ರಚನೆಯಾಗಿರುವುದಿಲ್ಲವೋ ಅಂತಹವರು ಸ್ಥಳೀಯ ದೂರು ಸಮಿತಿಯಲ್ಲಿ ದೂರು ದಾಖಲಿಸಬೇಕು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ತಿಪ್ಪಣ್ಣ ಪಿ. ಸಿರಸಗಿ ಮಾತನಾಡಿ, ಇಲಾಖಾ ಮುಖ್ಯಸ್ಥರು ಪರಿಷ್ಕøತ ಮಾರ್ಗಸೂಚಿ 2015ರ ಪ್ರಕಾರ ಆಂತರಿಕ ದೂರು ಸಮಿತಿಗಳನ್ನು ರಚಿಸದಿದ್ದರೆ ರೂ. 50 ಸಾವಿರ ದಂಡ ಭರಿಸಬೇಕಾಗುತ್ತದೆ ಎಂದು ತಿಳಿಸಿದರು.

ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಗೌರಿಶಂಕರ ಪ್ರತಾಪೂರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಜಗನ್ನಾಥ ಗಾದಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT