ಶನಿವಾರ, ನವೆಂಬರ್ 28, 2020
25 °C
ಅಪ್ನಾ ಘರ್ ಸಂಸ್ಥೆಯಿಂದ 101 ಜೋಡಿ ವಿವಾಹ ಆಯೋಜನೆ

ಜ.7ರಂದು ಉಚಿತ ಸಾಮೂಹಿಕ ವಿವಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಶ್ರೀ ಸಿದ್ಧೇಶ್ವರ ಟ್ರಸ್ಟ್ ಸಂಚಾಲಿತ ಅಪ್ನಾ ಘರ್ ಸಂಸ್ಥೆಯು ಜನವರಿ 7ರಂದು ನಗರದ ಸ್ವಾಮಿ ಸಮರ್ಥ ಫಂಕ್ಷನ್ ಹಾಲ್‍ನಲ್ಲಿ 101 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಹಮ್ಮಿಕೊಂಡಿದೆ.

ಭಾಲ್ಕಿಯ ಶಿವಾನಂದ ಗುಂದಗಿ ಅವರ ಪುತ್ರ ಬಸವಲಿಂಗ ಅವರೊಂದಿಗೆ ತಮ್ಮ ಪುತ್ರಿ ಸಂಜನಾ ಮದುವೆ ನಿಮಿತ್ತ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ ಎಂದು ಶ್ರೀ ಸಿದ್ಧೇಶ್ವರ ಟ್ರಸ್ಟ್ ಅಧ್ಯಕ್ಷ ಶಶಿಕಾಂತ ಮೋದಿ ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೊರೊನಾ ಪರಿಣಾಮ ಮದುವೆಗಳ ಮೇಲೂ ಆಗಿದೆ. ಆರ್ಥಿಕ ಸಂಕಷ್ಟದ ಕಾರಣ ಅನೇಕ ಮದುವೆಗಳು ನಿಂತುಹೋಗಿವೆ. ಬಡ ಕುಟುಂಬಗಳ ಮಕ್ಕಳ ಮದುವೆಗೆ ನೆರವಾಗುವುದು ಉಚಿತ ಸಾಮೂಹಿಕ ವಿವಾಹದ ಉದ್ದೇಶವಾಗಿದೆ ಎಂದು ಹೇಳಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಬಸವ ತತ್ವದ ಪ್ರಕಾರ ಸಾಮೂಹಿಕ ವಿವಾಹ ಜರುಗಲಿದೆ. ವಧು-ವರರಿಗೆ ಬಟ್ಟೆ ಬರೆ, ಚಿನ್ನದ ತಾಳಿ, ಕಾಲುಂಗುರ, ಭಾಸಿಂಗ, ಪೇಟ ಸೇರಿದಂತೆ ಮದುವೆಗೆ ಅಗತ್ಯವಾದ ಎಲ್ಲ ಸಾಮಗ್ರಿಗಳನ್ನು ಕೊಡಲಾಗುವುದು ಎಂದು ತಿಳಿಸಿದರು.

ಬಸವ ತತ್ವವನ್ನು ಒಪ್ಪಿಕೊಂಡು ಬರುವ ಎಲ್ಲರಿಗೂ ಉಚಿತ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳಲು ಅವಕಾಶ ಇದೆ. ವಿವಾಹದ ನಂತರ ವಧು-ವರರಿಗೆ ನೌಕರಿ ಕೊಡಿಸಲು ಸಹಾಯ ಮಾಡಲಾಗುವುದು ಎಂದರು.

ಆಸಕ್ತರು ಜನ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಮೋದಿ ಮೆಡಿಕಲ್ ಸ್ಟೋರ್, ರೈಲ್ವೆ ಸ್ಟೇಷನ್ ಸಮೀಪ, ಎಲ್‍ಐಸಿ ಶಾಖಾ ಕಚೇರಿ ಹಿಂದುಗಡೆ, ಬೀದರ್ ಈ ವಿಳಾಸಕ್ಕೆ ನವೆಂಬರ್ 29ರ ಒಳಗೆ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ಮೊಬೈಲ್ ಸಂಖ್ಯೆ 9448400365, 9148282730 ಅಥವಾ 90351 00710 ಸಂಪರ್ಕಿಸಬಹುದು ಎಂದರು.

ದುಂದು ವೆಚ್ಚದ ಮದುವೆಗಳು ಪ್ರಸ್ತುತ ಪ್ರತಿಷ್ಠೆಯಾಗಿ ಪರಿಣಮಿಸಿವೆ. ಇದರಿಂದ ಅನೇಕರು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಹೀಗಾಗಿ ಸರಳ ಹಾಗೂ ಉಚಿತ ಸಾಮೂಹಿಕ ವಿವಾಹಗಳಿಗೆ ಉತ್ತೇಜನ ನೀಡಬೇಕಾಗಿದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಹೇಳಿದರು.

ಕರ್ನಾಟಕ ಪದವಿ ಕಾಲೇಜು ಪ್ರಾಚಾರ್ಯ ಡಾ. ಜಗನ್ನಾಥ ಹೆಬ್ಬಾಳೆ, ಶ್ರೀ ಸಿದ್ಧೇಶ್ವರ ಟ್ರಸ್ಟ್ ಕಾರ್ಯದರ್ಶಿ ನೀಲಾಕ್ಷಿ ಮೋದಿ, ಶಿವಾನಂದ ಗುಂದಗಿ, ರಾಷ್ಟ್ರೀಯ ಬಸವ ದಳದ ಬೀದರ್ ದಕ್ಷಿಣ ಉಸ್ತುವಾರಿ ಮಹಾಲಿಂಗ ಸ್ವಾಮಿ ಚಟ್ನಳ್ಳಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.