ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್‌ | ಶಾಸಕ ಪ್ರಭು ಚವಾಣ್‌ ಮೇಲೆ ಜಮೀನು ಕಬಳಿಕೆ ಆರೋಪ

Published 24 ಡಿಸೆಂಬರ್ 2023, 10:48 IST
Last Updated 24 ಡಿಸೆಂಬರ್ 2023, 10:48 IST
ಅಕ್ಷರ ಗಾತ್ರ

ಬೀದರ್‌: ‘ಔರಾದ್‌ ಶಾಸಕ ಪ್ರಭು ಚವಾಣ್‌ ಅವರು ನಮ್ಮ ತಂದೆ ಹಾಗೂ ತಾಯಂದಿರ ಹೆಬ್ಬೆರಳು ಗುರುತು ಪಡೆದು 26 ಎಕರೆ ಜಮೀನು ಕಬಳಿಸಿದ್ದಾರೆ’ ಎಂದು ಗಂಗಾಧರ ರಾಠೋಡ ಆರೋಪ ಮಾಡಿದರು.

ನಮಗೆ ಸೇರಿದ ಸರ್ವೇ ನಂಬರ್‌ 125ರಲ್ಲಿ 20 ಎಕರೆ ಜಮೀನು, ನಮ್ಮ ತಾಯಂದಿಯರಾದ ಸುಭದ್ರಬಾಯಿ ಹಾಗೂ ಭಾಗೀರಥಿಬಾಯಿ ಅವರ ಹೆಸರಿನಲ್ಲಿರುವ ಸರ್ವೇ ನಂ. 126 ರಲ್ಲಿರುವ ತಲಾ ಮೂರು ಎಕರೆ 8 ಗುಂಟೆ ಜಮೀನು ಕಬಳಿಸಿ ಹಣ ಕೊಡುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದರು.

ಔರಾದ್‌ ತಾಲ್ಲೂಕಿನ ಕಿರುಗುನವಾಡಿ ಗ್ರಾಮದ ನಿವಾಸಿಯಾದ ನಮ್ಮ ತಂದೆ, ತಾಯಿಯರು ಅನಕ್ಷರಸ್ಥರು. ಜಮೀನಿಗೆ ಬದಲಾಗಿ ಹಣ ಕೇಳಿದರೆ ನಿಮ್ಮ ಮಗಳನ್ನು ನನ್ನ ಮಗನ ಜೊತೆಗೆ ಮದುವೆ ಮಾಡುವುದಾಗಿ ಹೇಳಿದ್ದರು. ಈಗ ಬೇರೊಬ್ಬರೊಂದಿಗೆ ಸಂಬಂಧ ಬೆಳೆಸಲು ಮುಂದಾಗಿದ್ದಾರೆ. ನಮ್ಮನ್ನು ಬೀದಿಗೆ ತಳ್ಳಿದ್ದಾರೆ ಎಂದು ಆರೋಪಿಸಿದರು.

ಈ ಸಂಬಂಧ ಬೀದರ್‌ ಮಹಿಳಾ ಪೊಲೀಸ್ ಠಾಣೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಕಲಬುರಗಿ ಈಶಾನ್ಯ ವಲಯದ ಐಜಿಪಿ, ಡಿಜಿಪಿ, ರಾಜ್ಯ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ದೂರು ಸಲ್ಲಿಸಲಾಗಿದೆ. ನಮಗೆ ನ್ಯಾಯ ಒದಗಿಸಿಕೊಡಬೇಕು. ಇಲ್ಲವಾದಲ್ಲಿ ಕುಟುಂಬದವರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಗಂಗಾಧರ ಕುಟುಂಬಸ್ಥರಾದ ಘಟೂರದಾಸ, ಸುಭದ್ರಾಬಾಯಿ, ಭಾಗೀರತಿಬಾಯಿ, ಆಶಾಬಾಯಿ ನಾಮದೇವ ಧನಸಿಂಗ್ ಜಾಧವ, ಪ್ರತಾಪ ನಾಮದೇವ, ಮೀರಾಬಾಯಿ ಪ್ರತಾಪ ಹಾಜರಿದ್ದರು.

ಗಂಗಾಧರ ರಾಠೋಡ ಮತ್ತು ಅವರ ಕುಟುಂಬದವರ ಪರಿಚಯ ನನಗಿಲ್ಲ - ಚವಾಣ್‌

‘ಗಂಗಾಧರ ರಾಠೋಡ ಮತ್ತು ಅವರ ಕುಟುಂಬದವರ ಪರಿಚಯ ನನಗಿಲ್ಲ. ಪ್ರಚಾರದ ಸಂದರ್ಭದಲ್ಲಿ ಕಂಡಿರಬಹುದು. ನಾನು ಅವರಿಗೆ ಮೋಸ ಮಾಡಿದರೆ ನನ್ನ ಬಳಿ ಬಂದು ಮಾತನಾಡಬಹುದಿತ್ತು. ಇದು ಶುದ್ಧ ಸುಳ್ಳು ಆರೋಪ. ನನ್ನ ವಿರೋಧಿಗಳು ನನ್ನ ವಿರುದ್ಧ ಮಾಡಬಾರದೆಲ್ಲ ಮಾಡುತ್ತಿದ್ದಾರೆ’ ಎಂದು ಶಾಸಕ ಪ್ರಭು ಚವಾಣ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT