ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುನಾನಕರ 550ನೇ ಜಯಂತ್ಯುತ್ಸವಕ್ಕೆ ಗುರುದ್ವಾರ ಅಣಿ

ನಾಳೆಯಿಂದ ಮೂರು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮ
Last Updated 8 ನವೆಂಬರ್ 2019, 15:22 IST
ಅಕ್ಷರ ಗಾತ್ರ

ಬೀದರ್: ಸಿಖ್ಖರ ಧರ್ಮಗುರು ಗುರುನಾನಕರ 550ನೇ ಜಯಂತ್ಯುತ್ಸವಕ್ಕೆ ಇಲ್ಲಿಯ ಗುರುದ್ವಾರ ಅಣಿಯಾಗಿದೆ. ನವೆಂಬರ್ 10 ರಿಂದ 12 ರ ವರೆಗೆ ನಡೆಯಲಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಸಿದ್ಧತೆ ಬಹುತೇಕ ಪೂರ್ಣಗೊಂಡಿದೆ. ಕೆಲ ಅಂತಿಮ ಹಂತದ ಕಾರ್ಯಗಳು ಭರದಿಂದ ನಡೆದಿವೆ.

ಗುರುದ್ವಾರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ನ. 9 ರಿಂದ 11 ರ ವರೆಗೆ ಪ್ರತಿ ದಿನ ರಾತ್ರಿ 7 ರಿಂದ 9.30 ರವರೆಗೆ ಗುರುನಾನಕರ ಸಂದೇಶ ಒಳಗೊಂಡ ಧ್ವನಿ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಗುರುದ್ವಾರ ಪರಿಸರದಲ್ಲಿ ಬೃಹತ್ ಪೆಂಡಾಲ್ ನಿರ್ಮಿಸಲಾಗಿದೆ.

ಭಕ್ತರಿಗೆ ವಸತಿ, ಪ್ರಸಾದ (ಲಂಗರ್), ಕುಡಿಯುವ ನೀರು, ಶೌಚಾಲಯ, ವಾಹನಗಳ ಪಾರ್ಕಿಂಗ್ ಮೊದಲಾದ ವ್ಯವಸ್ಥೆಗಳನ್ನು ಮಾಡಲಾಗಿದೆ.ದೇಶದ ವಿವಿಧೆಡೆ ಹಾಗೂ ವಿದೇಶಗಳಿಂದಲೂ ಭಕ್ತರು ಬರಲಿರುವ ಕಾರಣ ಅವರ ವಸತಿಗೆ ಗುರುನಾನಕ ಶಿಕ್ಷಣ ಸಂಸ್ಥೆಯ ಶಾಲೆಗಳು, ಎಂಜಿನಿಯರಿಂಗ್ ಕಾಲೇಜು ಹಾಗೂ ಗುರುದ್ವಾರದಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ.

ಗುರುದ್ವಾರ ಸೇರಿದಂತೆ ನಾಲ್ಕು ಕಡೆಗಳಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಪ್ರಸಾದದಲ್ಲಿ 36 ನಮೂನೆಯ ಖಾದ್ಯಗಳು ವಿಶೇಷವಾಗಿರಲಿವೆ ಎಂದು ತಿಳಿಸುತ್ತಾರೆ ಗುರುದ್ವಾರ ಪ್ರಬಂಧಕ ಕಮಿಟಿಯ ಪ್ರಮುಖರು.

ಗುರುದ್ವಾರದ ಮುಖ್ಯ ದ್ವಾರದಿಂದ ಒಳಗೆ ಹೋಗಲು ಉಚಿತ ಬಸ್ ವ್ಯವಸ್ಥೆ ಮಾಡಲಾಗುತ್ತಿದೆ. ವಯೋವೃದ್ಧರು ಮತ್ತು ಹಿರಿಯರನ್ನು ಗುರುದ್ವಾರ ಹೊರಗಿನಿಂದ ಒಳಗೆ ಕರೆ ತರಲು ಎಲೆಕ್ಟ್ರಿಕ್ ಆಟೊಗಳನ್ನು ನಿಯೋಜಿಸಲಾಗುತ್ತಿದೆ. ವೈದ್ಯಕೀಯ ಶಿಬಿರ ಆಯೋಜಿಸಲಾಗುತ್ತಿದೆ. 25 ಜನ ವೈದ್ಯರು ಚಿಕಿತ್ಸೆ ಕೊಡಲಿದ್ದಾರೆ ಎಂದು ಹೇಳುತ್ತಾರೆ.

‘ಗುರುನಾನಕ ಜಯಂತ್ಯುತ್ಸವದ ಪ್ರಚಾರಕ್ಕಾಗಿ ಗುರುದ್ವಾರ ಶ್ರೀ ನಾನಕ ಝೀರಾ ಸಾಹೀಬ್ ವತಿಯಿಂದ ನಾಲ್ಕು ವಾಹನಗಳನ್ನು ನಿಯೋಜಿಸಲಾಗಿದೆ. ವಾಹನಗಳು ಜಿಲ್ಲೆಯ ಎಲ್ಲೆಡೆ ಪ್ರಚಾರ ನಡೆಸುತ್ತ, ಸಾರ್ವಜನಿಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿವೆ’ ಎಂದು ತಿಳಿಸುತ್ತಾರೆ ಗುರುದ್ವಾರ ಪ್ರಬಂಧಕ ಕಮಿಟಿಯ ಅಧ್ಯಕ್ಷ ಡಾ. ಎಸ್. ಬಲಬೀರಸಿಂಗ್.

‘ಗುರುನಾನಕರ ವಿಶ್ವ ಬಂಧುತ್ವ ಸಂದೇಶಗಳನ್ನು ಎಲ್ಲರಿಗೂ ತಲುಪಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ನೆರೆಯ ಮಹಾರಾಷ್ಟ್ರದ ನಾಂದೇಡ್, ನಾಸಿಕ್, ಪುಣೆ, ಲಾತೂರು, ಮುಂಬೈ, ತೆಲಂಗಾಣದ ಹೈದರಾಬಾದ್, ಪಂಜಾಬ್, ನವದೆಹಲಿ ಸೇರಿದಂತೆ ದೇಶದ ವಿವಿಧೆಡೆ ಹಾಗೂ ವಿದೇಶಗಳಿಂದ ಲಕ್ಷಾಂತರ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಹೇಳುತ್ತಾರೆ.

ನ.10 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್, ಸಂಸದ ಭಗವಂತ ಖೂಬಾ, ಶಾಸಕರಾದ ಈಶ್ವರ ಖಂಡ್ರೆ, ರಾಜಶೇಖರ ಪಾಟೀಲ, ರಹೀಂಖಾನ್, ಬಂಡೆಪ್ಪ ಕಾಶೆಂಪೂರ, ಬಿ. ನಾರಾಯಣರಾವ್, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪುರೆ, ಚಂದ್ರಶೇಖರ ಪಾಟೀಲ, ಶರಣಪ್ಪ ಮಟ್ಟೂರು, ಅರವಿಂದಕುಮಾರ ಅರಳಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ, ಉಪಾಧ್ಯಕ್ಷ ಲಕ್ಷ್ಮಣರಾವ್ ಬುಳ್ಳಾ, ಜಿಲ್ಲಾಧಿಕಾರಿ ಎಚ್.ಆರ್. ಮಹಾದೇವ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ, ನಗರಸಭೆ ಆಯುಕ್ತ ಬಿ. ಬಸಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕರು ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT