ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ನ ಗೃಹ ನಿರ್ಮಾಣ ಮಂಡಳಿ ಮನೆಗಳು ಅನಾಥ!

ದಶಕ ಕಳೆದರೂ ವಿದ್ಯುತ್, ನೀರು, ರಸ್ತೆ ನಿರ್ಮಿಸಿಲ್ಲ
Last Updated 11 ಜುಲೈ 2021, 19:30 IST
ಅಕ್ಷರ ಗಾತ್ರ

ಬೀದರ್‌: ರಾಜ್ಯ ಸರ್ಕಾರ ಆಶ್ರಯ, ಅಂಬೇಡ್ಕರ್‌ ಹಾಗೂ ಬಸವ ವಸತಿ ಯೋಜನೆಯಡಿ ಮನೆಗಳನ್ನು ನಿರ್ಮಿಸಿ ಬಡವರಿಗೆ ಹಂಚಿಕೆ ಮಾಡುತ್ತಿದೆ. ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ಮೂಲಕ ತೀರ ಬಡವರು ಅಲ್ಲದ, ಬಹಳ ಶ್ರೀಮಂತರೂ ಅಲ್ಲದ ಸಾಮಾನ್ಯ ವರ್ಗದ ಜನರಿಗೂ ಸುಂದರ ವಿನ್ಯಾಸ ಮನೆಗಳನ್ನು ಕಟ್ಟಿಕೊಟ್ಟು ಸ್ವಂತ ಮನೆ ಹೊಂದುವ ಕನಸು ನನಸುಗೊಳಿಸಿದೆ. ಆದರೆ, ಬೀದರ್‌ ಜಿಲ್ಲೆಯಲ್ಲಿ ಮಂಡಳಿಯ ಕಾಲೊನಿಗಳಿಗೆ ದಶಕ ಕಳೆದರೂ ಮೂಲಸೌಕರ್ಯ ಕಲ್ಪಿಸಿಲ್ಲ. ಫಲಾನುಭವಿಗಳು ಅರ್ಜಿ ಸಲ್ಲಿಸಲು ಹುಡ್ಕೊ ಅಧಿಕಾರಿಗಳನ್ನು ಹುಡುಕಿಕೊಂಡು ಹೋಗಬೇಕಾಗಿದೆ.

ಬೀದರ್‌ ನಗರದ ಹೊರವಲಯದಲ್ಲಿ ಶಾಹೀನ್‌ ಶಿಕ್ಷಣ ಸಂಸ್ಥೆಯ ಹಿಂಬದಿ ಗೋರನಳ್ಳಿ ವ್ಯಾಪ್ತಿಯಲ್ಲಿ 15 ವರ್ಷಗಳ ಹಿಂದೆ ಗೃಹ ನಿರ್ಮಾಣ ಮಂಡಳಿ ನಿವೇಶನಗಳನ್ನು ಅಭಿವೃದ್ಧಿ ಪಡಿಸಿ, ಎಲ್‌ಐ ಹಾಗೂ ಎಂಐಜಿ ಮನೆಗಳನ್ನು ನಿರ್ಮಿಸಿದೆ. ಇದೀಗ ಅಗತ್ಯ ಮೂಲಸೌಕರ್ಯಗಳಿಲ್ಲದೇ ಅಕ್ಷರಶಃ ನರಕವಾಗಿದೆ.

ಮುಖ್ಯ ರಸ್ತೆಯಿಂದ ಹೌಸಿಂಗ್‌ ಬೋರ್ಡ್ ಕಾಲೊನಿಗೆ ಬರಲು ಸರಿಯಾದ ರಸ್ತೆ ಇಲ್ಲ. ದಾರಿಯುದ್ದಕ್ಕೂ ಗಿಡಗಂಟಿಗಳು ಬೆಳೆದು ನಿಂತಿವೆ. ವಿದ್ಯುತ್ ಕಂಬಗಳನ್ನು ನಿಲ್ಲಿಸಿದರೂ ಇಂದಿಗೂ ಕಂಬಕ್ಕೆ ದೀಪ ಬೆಳಗಿಲ್ಲ. ಮಳೆಗಾಲದಲ್ಲಿ ಮಣ್ಣು ಕೊಚ್ಚಿಕೊಂಡು ಬಂದು ಗಟಾರಗಳು ತುಂಬಿಕೊಂಡಿವೆ.

ಗೃಹ ನಿರ್ಮಾಣ ಮಂಡಳಿಯು ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಲಿಸಿಕೊಟ್ಟಿಲ್ಲ. ಕುಡಿಯುವ ನೀರಿನ ಸಂಪರ್ಕವನ್ನೂ ಒದಗಿಸಿಲ್ಲ. ಇಲ್ಲಿಯ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿ ಹಾಗೂ ನೌಬಾದ್‌ನಲ್ಲಿರುವ ಗೃಹ ನಿರ್ಮಾಣ ಮಂಡಳಿ ಕಚೇರಿಗೆ ಅಲೆದಾಡಿ ಸೋತು ಹೋಗಿದ್ದಾರೆ. ಸರ್ಕಾರದ ಮೇಲಿನ ಭರವಸೆ ಕಳೆದುಕೊಂಡಿದ್ದಾರೆ. ಇವರ ಗೋಳಾಟ ಕೇಳಲಾಗದೆ ಜೆಸ್ಕಾಂನವರು ಮಾನವೀಯ ನೆಲೆಯಲ್ಲಿ ತಾತ್ಕಾಲಿಕವಾಗಿ ಅನಧಿಕೃತವಾಗಿ ಸಂಪರ್ಕ ಒದಗಿಸಿಕೊಟ್ಟಿದ್ದಾರೆ.

ರಸ್ತೆ ಸರಿ ಇಲ್ಲದ ಕಾರಣ ಕುಡಿಯುವ ನೀರು ಪೂರೈಕೆ ಮಾಡುವ ಖಾಸಗಿ ಟ್ಯಾಂಕರ್‌ನವರು ಇಲ್ಲಿ ಬರಲು ಒಪ್ಪುತ್ತಿಲ್ಲ. ಹೀಗಾಗಿ ಕೆಲವರು ಸಾಲ ಮಾಡಿ, ಕೊಳವೆಬಾವಿ ಹಾಕಿಸಿಕೊಂಡಿದ್ದಾರೆ. ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋದಾಗ, ಕಳ್ಳರು ಕೊಳವೆಬಾವಿಗೆ ಹಾಕಿದ ಮೋಟರ್‌ ಸಹ ಕದ್ದು ಒಯ್ದಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ್‌ರೆಡ್ಡಿ ಇರುವವರೆಗೂ ಪೊಲೀಸರು ಇಲ್ಲಿ ಗಸ್ತು ತಿರುಗುತ್ತಿದ್ದರು. ಆದರೆ ಈಗ, ಪೊಲೀಸ್‌ ಠಾಣೆಗಳಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌ಗಳ ಸಂಖ್ಯೆ ಹೆಚ್ಚಾದರೂ ಗಸ್ತು ತಿರುಗಲು ಬರುತ್ತಿಲ್ಲ.

‘ಹೌಸಿಂಗ್ ಬೋರ್ಡ್‌ ಕಾಲೊನಿಗೆ ಒಂದು ನಗರ ಸಾರಿಗೆ ಬಸ್‌ ಸಹ ಬರುವುದಿಲ್ಲ. ಬಸ್‌ ಓಡಿಸಿದರೆ ರಾಜಗೊಂಡ ಕಾಲೊನಿ, ಶಾಹಿನ್‌ ಕಾಲೇಜಿಗೆ ಬರುವ ಪಾಲಕರಿಗೂ ಅನುಕೂಲವಾಗಲಿದೆ ಎಂದು ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮನವರಿಕೆ ಮಾಡಿದ್ದೇವೆ. ಜನಪ್ರತಿನಿಧಿಗಳು ಹಾಗೂ ಜಿಲ್ಲೆಯ ಒಬ್ಬ ಅಧಿಕಾರಿಯೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಶಾಹಿನ್‌ ಕಾಲೇಜು ಹಿಂಬದಿಯ ಹೌಸಿಂಗ್‌ ಬೋರ್ಡ್‌ ಕಾಲೊನಿ ಜಿಲ್ಲಾಡಳಿತಕ್ಕೆ ಬೇಡವಾದ ಕೂಸು ಆಗಿದೆ. ಅಧಿಕಾರಿಗಳು ಹವಾನಿಯಂತ್ರಿತ ಕೊಠಡಿಗಳಿಂದ ಹೊರಗೆ ಬರುತ್ತಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಶಾಸಕರಿಗೂ ಮನವಿ ಕೊಟ್ಟು ಸಾಕಾಗಿದೆ. ಇನ್ನು ಯಾರಿಗೆ ದೂರು ಕೊಡಬೇಕು ತಿಳಿಯುತ್ತಿಲ್ಲ’ ಎಂದು ಇಲ್ಲಿಯ ನಿವಾಸಿ ಅನಿಲಕುಮಾರ ಗಾಯಕವಾಡ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

‘10 ವರ್ಷಗಳಿಂದ ಇಲ್ಲಿ ವಾಸವಾಗಿದ್ದೇನೆ. ಮೂರು ಬಾರಿ ನಮ್ಮ ಮನೆಯಲ್ಲಿ ಕಳ್ಳತನವಾಗಿದೆ. ಕಷ್ಟಪಟ್ಟು ಕೂಡಿಟ್ಟ ಹಣ, ಮನೆಯಲ್ಲಿಟ್ಟ ಸಾಮಗ್ರಿಗಳು ಕಳ್ಳರ ಪಾಲಾಗುತ್ತಿವೆ. ನಿವೇಶನ ಖರೀದಿಸಿ ಕಾಡಿನಲ್ಲಿ ಬಂದು ನೆಲೆಯೂರಿದಂತೆ ಆಗಿದೆ. ಇಲ್ಲಿ ಮೂಲಸೌಕರ್ಯಗಳು ಇಲ್ಲ. ಸುರಕ್ಷತೆಯೂ ಇಲ್ಲ’ ಎಂದು ವಿವರಿಸುತ್ತಾರೆ.

‘ಸರ್ಕಾರದ ಲೇಔಟ್‌ ಎನ್ನುವ ವಿಶ್ವಾಸದಿಂದ ಮನೆ ಖರೀದಿಸಿದ್ದೇನೆ. ವಿದ್ಯುತ್, ನೀರು ಹಾಗೂ ಬಸ್‌ ಸೌಕರ್ಯ ಇಲ್ಲ. ನಗರಸಭೆ, ಜೆಸ್ಕಾಂ ಅಧಿಕಾರಿಗಳು ಸೌಲಭ್ಯ ಒದಗಿಸಲು ಹಿಂದೇಟು ಹಾಕುತ್ತಿದ್ದಾರೆ. ಹುಡ್ಕೊ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಶ್ರೀಕಾಂತ ಕುಲಕರ್ಣಿ ಹೇಳುತ್ತಾರೆ.

ನಿವೇಶನ ಬಯಲು ಶೌಚಕ್ಕೆ ಬಳಕೆ

ಔರಾದ್: ಪಟ್ಟಣದ ಹೊರ ವಲಯದ ಉದಗಿರ್ ರಸ್ತೆ ಸಮೀಪ ಗೃಹ ನಿರ್ಮಾಣ ಮಂಡಳಿಯಿಂದ ಹಂಚಿಕೆಯಾದ ಮನೆಗಳು ಹಾಗೂ ಖಾಲಿ ನಿವೇಶನ ಬಳಕೆಯಾಗದೆ ಹಾಳು ಬಿದ್ದಿವೆ.

15 ವರ್ಷಗಳ ಹಿಂದೆ ಹಂಚಿಕೆಯಾದ 15 ಮನೆ ಹಾಗೂ 200 ಖಾಲಿ ನಿವೇಶನಗಳಲ್ಲಿ ಗಿಡಗಂಟಿ ಬೆಳೆದಿದೆ. ಮನೆಗಳ ಕಿಟಕಿ ಗಾಜು ಒಡೆದಿವೆ. ಕೆಲ ಮನೆಗಳ ಬಾಗಿಲು ಕಿತ್ತು ಹೋಗಿವೆ. ಅಲ್ಲಲ್ಲಿ ಮದ್ಯದ ಬಾಟಲ್‍ಗಳು ಬಿದ್ದು ಪೋಲಿ ಹುಡುಗರ ಅಡ್ಡೆಯಾಗಿ ಮಾರ್ಪಟ್ಟಿದೆ.

ಪಕ್ಕದ ಬಡಾವಣೆಯ ಜನರು ಈ ಪ್ರದೇಶದಲ್ಲಿ ರಾತ್ರಿ ವೇಳೆ ಬಯಲು ಶೌಚಕ್ಕೆ ಬಳಸುತ್ತಿದ್ದಾರೆ. ಹೀಗಾಗಿ ಕಾಲೊನಿಗೆ ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ.

ಗೃಹ ನಿರ್ಮಾಣ ಮಂಡಳಿ ನಿವೇಶನ ಅಂದರೆ ಸರ್ಕಾರ ಎಲ್ಲ ರೀತಿಯ ಸೌಕರ್ಯ ಕಲ್ಪಿಸಲಿದೆ ಎನ್ನುವ ವಿಶ್ವಾಸದೊಂದಿಗೆ ₹5 ಲಕ್ಷ ಪಾವತಿಸಿ ನಿವೇಶನ ಖರೀದಿಸಿದ್ದೇನೆ. ಆದರೆ, ಇಲ್ಲಿ ಅಗತ್ಯ ಮೂಲಸೌಕರ್ಯಗಳೇ ಇಲ್ಲ. ಸರ್ಕಾರದ ಮೇಲೆ ಯಾಕಾದರೂ ವಿಶ್ವಾಸ ಮಾಡಿದೆ ಎನ್ನುವ ಪಾಪಪ್ರಜ್ಞೆ ಕಾಡುತ್ತಿದೆ ಎನ್ನುತ್ತಾರೆ ಇಲ್ಲಿಯ ಗೃಹ ಮಂಡಳಿ ನಿವೇಶನ ಖರೀದಿಸಿರುವ ಮಾಲೀಕರು.

‘ಕಾಲೊನಿಯಲ್ಲಿ ಜನ ವಾಸ ಮಾಡಿದ್ದರೆ ಅವರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಿಕೊಡಬಹುದು. ಆದರೆ, ಜನರೇ ಅಲ್ಲಿ ವಾಸ ಮಾಡಲು ಸಿದ್ಧರಿಲ್ಲ’ ಎಂದು ಔರಾದ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರವಿ ಸುಕುಮಾರ ಹೇಳುತ್ತಾರೆ.

ನಿರ್ಮಾಣವಾಗದ ಸಿಸಿ ರಸ್ತೆ, ಚರಂಡಿ

ಭಾಲ್ಕಿ: ಇಲ್ಲಿಯ ಹೌಸಿಂಗ್‌ ಬೋರ್ಡ್‌ ಕಾಲೊನಿಯಲ್ಲಿ ಅಗತ್ಯ ಮೂಲಸೌಕರ್ಯಗಳಿಲ್ಲ. ಮನೆಗಳಿಗೆ ತೆರಳಲು ಸರಿಯಾದ ರಸ್ತೆ ಇಲ್ಲ. ಕೊಳಚೆ ನೀರು ಹರಿದು ಹೋಗಲು ಗಟಾರ ಸಹ ನಿರ್ಮಿಸಿಲ್ಲ.

ಉದ್ಯಾನಕ್ಕೆ ಮೀಸಲಿಟ್ಟ ಜಾಗ ಕೊಳಕು ನೀರಿನ ಹೊಂಡವಾಗಿದೆ. ನೀರು ಹರಿದು ಹೋಗುವ ವ್ಯವಸ್ಥೆ ಇಲ್ಲ. ಕಾಲೊನಿ ಬೀದಿ ನಾಯಿಗಳ ಆವಾಸ ಸ್ಥಾನವಾಗಿದೆ.

‘ಕಾಲೊನಿಯ ಕೆಲವೆಡೆ ಉತ್ತಮ ರಸ್ತೆ ಇದೆ. ಇನ್ನು ಅರ್ಧದಷ್ಟು ಭಾಗದಲ್ಲಿ ರಸ್ತೆ, ಎರಡು ಬದಿಗಳಲ್ಲಿ ವ್ಯವಸ್ಥಿತ ಗಟಾರ ನಿರ್ಮಿಸಿಲ್ಲ. ಮನೆಗಳ ಹೊಲಸು, ಮಳೆ ನೀರು ಒಂದೆಡೆ ಸಂಗ್ರಹವಾಗುತ್ತಿದ್ದು, ಕಾಲೊನಿ ನಿವಾಸಿಗಳಿಗೆ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಕಾಡುತ್ತಿದೆ’ ಎಂದು ನಿವಾಸಿ ನಾಗಶೆಟ್ಟೆಪ್ಪ ಲಂಜವಾಡೆ ಹೇಳುತ್ತಾರೆ.

‘ಉದ್ಯಾನಕ್ಕೆ ಮೀಸಲಿಟ್ಟ ಜಾಗಕ್ಕೆ ತಂತಿಬೇಲಿ ಹಾಕಲಾಗಿದೆ. ಪಾಳುಬಿದ್ದ ಮನೆಗಳಲ್ಲಿ ಹೊರಗಿನ ಜನ ವಾಸವಾಗಿದ್ದಾರೆ. ಗೃಹ ನಿರ್ಮಾಣ ಮಂಡಳಿಯ ಅಧಿಕಾರಿಗಳು ಮೂಲಸೌಕರ್ಯ ಒದಗಿಸಿ ವಾಸಕ್ಕೆ ಯೋಗ್ಯ ಮಾಡಿಕೊಡಬೆಕು’ ಎಂದು ಮನವಿ ಮಾಡಿಕೊಳ್ಳುತ್ತಾರೆ.

ಚಿಟಗುಪ್ಪ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೊನಿಯಲ್ಲಿ 2004ರಲ್ಲಿ ನಿರ್ಮಿಸಿದ 10 ಮನೆಗಳು 2005ರಲ್ಲಿ ಹಂಚಿಕೆಯಾಗಿವೆ. ಹಳೆಯ 18 ಮನೆಗಳಿದ್ದು ಚರಂಡಿ, ಶೌಚಾಲಯ, ವಿದ್ಯುತ್ ಮೂಲಸೌಕರ್ಯ ಒದಗಿಸಲಾಗಿದೆ. ಫಲಾನುಭವಿಗಳು ಖರೀದಿಸಿದ ಮನೆಗಳನ್ನು ವಿಸ್ತರಿಸಿಕೊಂಡು ವಿನ್ಯಾಸ ಬದಲಿಸಿಕೊಂಡಿದ್ದಾರೆ. ಕಡತದಲ್ಲಿ 30 ಅಡಿ ಅಗಲದ ರಸ್ತೆ ಇದ್ದರೂ ಕೇವಲ 18 ಅಡಿ ರಸ್ತೆ ನಿರ್ಮಿಸಿ ಹಣ ಎತ್ತಲಾಗಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ನೌಬಾದ್‌ನಲ್ಲಿರುವ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯು ನಿರ್ಮಿಸಿದ ವಾಣಿಜ್ಯ ಮಳಿಗೆಯ ಸ್ಥಿತಿಯೂ ಇದೇ ರೀತಿ ಇದೆ. ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇದೆ. ಒಬ್ಬ ಅಧಿಕಾರಿಯೇ ಎಲ್ಲವನ್ನೂ ನೋಡಿಕೊಳ್ಳಬೇಕಾದ ಸ್ಥಿತಿ ಇದೆ. ಹೀಗಾಗಿ ಜನರಿಗೆ ಸರಿಯಾದ ಸೌಲಭ್ಯಗಳು ದೊರಕುತ್ತಿಲ್ಲ.

ಪೂರಕ ಮಾಹಿತಿ: ಬಸವರಾಜ ಪ್ರಭಾ, ಮಾಣಿಕ ಭುರೆ, ಮನ್ಮಥ ಸ್ವಾಮಿ, ವೀರೇಶ ಮಠಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT