ಹುಮನಾಬಾದ್: ‘ಆ ಪಾಕೆಟ್ ಶಾಸಕ ಏಕವಚನದಲ್ಲಿ ಮತ್ತೊಮ್ಮೆ ಮಾತಾಡಿದರೆ ನಾಲಿಗೆ ಕಟ್ ಮಾಡುತ್ತೇನೆ’ ಎಂದು ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ ಅವರು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಹೆಸರು ಹೇಳದೇ ಕಿಡಿಕಾರಿದರು.
ಇಲ್ಲಿಯ ಬಸವರಾಜ ಪಾಟೀಲ ಕಲ್ಯಾಣ ಮಂಟಪದಲ್ಲಿ ಬ್ಲಾಕ್ ಕಾಂಗ್ರೆಸ್‌ನಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಸ್ವಲ್ಪ ದಿನ ಕಾಯಿರಿ. ನಿಮ್ಮೊಂದಿಗೆ ನಾನು ಹಾಗೂ ವಿಧಾನ ಪರಿಷತ್ ಸದಸ್ಯ ಭೀಮಾರಾವ್ ಪಾಟೀಲ ಇದ್ದೇವೆ’ ಎಂದು ವೇದಿಕೆ ಮೇಲಿದ್ದ ಮಾಜಿ ಸಚಿವ ರಾಜಶೇಖರ ಪಾಟೀಲ ಅವರಿಗೆ ತಿಳಿಸಿದರು.
ಖಂಡನೆ: ವಿಧಾನ ಪರಿಷತ್ ಸದಸ್ಯರ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ‘ತಕ್ಷಣವೇ ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ಮಂಗಳವಾರ ಹುಮನಾಬಾದ್ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಮಾಡುತ್ತೇವೆ’ ಎಂದು ಎಚ್ಚರಿಸಿದ್ದಾರೆ.