ಮಂಗಳವಾರ, ನವೆಂಬರ್ 19, 2019
28 °C
ಗೋರಟಾ(ಬಿ) ಹತ್ಯಾಕಾಂಡ ಎಲ್ಲೆಡೆ ಅಲ್ಲೋಲಕಲ್ಲೋಲ ಸೃಷ್ಟಿಸಿತ್ತು

ಹೈ.ಕ ವಿಮೋಚನೆಗೆ 71 ವರ್ಷ: ಕಲ್ಯಾಣ ಕರ್ನಾಟಕದ ಪ್ರಥಮ ವಿಜಯೋತ್ಸವ

Published:
Updated:
Prajavani

ಬಸವಕಲ್ಯಾಣ: ಅಂದು ಹೈದರಾಬಾದ್ ಕರ್ನಾಟಕ ಎಂದು ಕರೆಸಿಕೊಳ್ಳುತ್ತಿದ್ದ ಈ ಭಾಗ ನಿಜಾಮರ ಆಡಳಿತದಿಂದ ಬಿಡುಗಡೆಗೊಂಡು 71 ವರ್ಷ. ಈ ಸುಸಂದರ್ಭದಲ್ಲಿಯೇ ರಾಜ್ಯ ಸರ್ಕಾರ ಈ ಭಾಗಕ್ಕೆ ‘ಕಲ್ಯಾಣ ಕರ್ನಾಟಕ' ಎಂದು ನಾಮಕರಣ ಮಾಡಿದೆ. ಇದರ ಪ್ರಥಮ ವಿಜಯೋತ್ಸವ ಆಚರಿಸಲು ಜಿಲ್ಲಾ ಮತ್ತು ತಾಲ್ಲೂಕು ಆಡಳಿತಗಳು ಎಲ್ಲೆಡೆ ಸಿದ್ಧತೆ ನಡೆಸಿವೆ.

ಈ ಭಾಗದಲ್ಲಿ ಆಳ್ವಿಕೆ ನಡೆಸುತ್ತಿದ್ದ ಹೈದರಾಬಾದ್ ನಿಜಾಮನು 1947ರಲ್ಲಿ ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ದೊರೆತಾಗ ಭಾರತದ ಒಕ್ಕೂಟದಲ್ಲಿ ವಿಲೀನಕ್ಕೆ ಒಪ್ಪಲಿಲ್ಲ. ಲಾತೂರನ ವಕೀಲ ಕಾಸಿಂ ರಜ್ವಿ ಕಟ್ಟಿದ್ದ `ಇತ್ತೇಹಾದುಲ್ ಮುಸಲ್ಮೀನ್' ಎಂಬ ರಜಾಕಾರರ ಸಂಘಟನೆ ಪ್ರತ್ಯೇಕತೆಯ ಪರವಾಗಿ ನಿಂತು ವಿಲೀನದ ಪರ ಇದ್ದವರ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಸಿತು.

ನಿಜಾಮ್‌ನ ಸೈನ್ಯದಲ್ಲಿದ್ದ ಕೆಲವರು ಇದಕ್ಕೆ ಕುಮ್ಮಕ್ಕು ನೀಡಿದರು. ಹಾಗೆ ನೋಡಿದರೆ, ಆಸಫಜಾಹಿ ಕುಟುಂಬದ ನಿಜಾಮ್‌ರು ಈಗಿನ ಆಂಧ್ರ, ಮಹಾರಾಷ್ಟ್ರ, ತೆಲಂಗಾಣ ಹಾಗೂ ಕರ್ನಾಟಕದ ಕೆಲ ಭಾಗದಲ್ಲಿ ತನ್ನ ರಾಜ್ಯ ವಿಸ್ತರಿಸಿ 224 ವರ್ಷಗಳ ಕಾಲ ಆಳಿದರು. ಈ ಸಾಮ್ರಾಜ್ಯದ 7ನೇ ನಿಜಾಮ್ ಉಸ್ಮಾನ್ ಅಲಿಖಾನ್ 1911 ರಿಂದ 1948 ರವರೆಗೆ 37 ವರ್ಷ ರಾಜ್ಯವಾಳಿದನು.

ರಾಜನೇನೋ ಪ್ರಗತಿಪರನಾಗಿದ್ದ. ಅತ್ಯಂತ ಶ್ರೀಮಂತ ಆಗಿರುವ ಜತೆಗೆ ವೈದ್ಯಕೀಯ ಶಿಕ್ಷಣ, ವಿವಿಧ ಕಾರ್ಖಾನೆ, ವಿಮಾನನಿಲ್ದಾಣ, ಹೆದ್ದಾರಿ ಒಳಗೊಂಡು ಹಲವಾರು ಸೌಲಭ್ಯಗಳನ್ನು ನೀಡಿದ್ದರಿಂದ ವಿಶ್ವಖ್ಯಾತಿ ಗಳಿಸಿದ್ದ. ಜಗತ್ತಿನ ಪ್ರಸಿದ್ಧ ಟೈಮ್ ಮ್ಯಾಗ್ಝೀನ್ ಕೂಡ ಇವರ ಭಾವಚಿತ್ರವನ್ನು ಮುಖಪುಟದಲ್ಲಿ ಪ್ರಕಟಿಸಿ ಜನಪರ ಕಾರ್ಯದ ಬಗ್ಗೆ ಹಲವಾರು ಲೇಖನ ಪ್ರಕಟಿಸಿತ್ತು.

ಆದರೆ, ಕೊನೆಗಾಲದಲ್ಲಿ ಕಾಸಿಂ ರಜ್ವಿ ಅಂಥ ಮತಾಂಧರ ಕಪಿಮುಷ್ಟಿಯಲ್ಲಿ ಸಿಕ್ಕಿಕೊಂಡಿದ್ದರಿಂದ ಪ್ರದೇಶದಲ್ಲಿ ಕೋಮುಜ್ವಾಲೆ ಹರಡುತ್ತದೆ. ಇತಿಹಾಸಕಾರರ ಪ್ರಕಾರ ಕೆಲವರು ರಾಜನನ್ನೇ ನೇಪಥ್ಯಕ್ಕೆ ಸರಿಸಿ ಲಾಯಕ ಅಲಿ ಎನ್ನುವನನ್ನು ಮುಖ್ಯ ಸಚಿವನ ಸ್ಥಾನದಲ್ಲಿ ನೇಮಿಸುತ್ತಾರೆ. ಹೀಗಾಗಿ ಎಲ್ಲೆಡೆ ಅಲ್ಲೋಲ ಕಲ್ಲೋಲ ಆಗುತ್ತದೆ. ಆಗ ಈ ಭಾಗದಲ್ಲಿ ಪ್ರಬಲವಾಗಿದ್ದ ಆರ್ಯ ಸಮಾಜ ಸಂಘಟನೆ ಹಾಗೂ ಇತರೆ ಸಂಘಟನೆಗಳು ರಜಾಕಾರರ ವಿರುದ್ಧ ಸೆಟೆದು ನಿಲ್ಲುತ್ತವೆ. ಒಗ್ಗಟ್ಟಿನಿಂದ ರಜಾಕಾರರನ್ನು ಎದುರಿಸುತ್ತಾರೆ. ಈ ಕಾರಣ ಅಲ್ಲಲ್ಲಿ ಗುಂಪುಘರ್ಷಣೆಗಳು ನಡೆಯುತ್ತವೆ. ತಾಲ್ಲೂಕಿನ ಗೋರಟಾ(ಬಿ), ಮುಚಳಂಬ, ಗಡಿಗೌಡಗಾಂವ ಮುಂತಾದೆಡೆ ಇಂಥ ಘರ್ಷಣೆಗಳಲ್ಲಿ ಅನೇಕರು ಹುತಾತ್ಮ ಆಗಿದ್ದಾರೆ.

ಈ ಭಾಗದಲ್ಲಿದ್ದ ಇಸಾಮುದ್ದೀನ್ ಎಂಬ ರಜಾಕಾರ ಭಾರತದ ವಿಲೀನದ ಪರ ಚಟುವಟಿಕೆ ನಡೆಸಲು ವಿರೋಧಿಸುತ್ತಿದ್ದ ಕಾರಣ ಅವನ ವಿರುದ್ಧದ ಧ್ವನಿ ದಿನೇ ದಿನೇ ಪ್ರಬಲವಾಗತೊಡಗಿತು. ಮುಚಳಂಬ ಸಮೀಪದ ಬುದ್ಯನ ಹಳ್ಳದಲ್ಲಿ ಈತನನ್ನು ಅಡ್ಡಗಟ್ಟಿ ಕೊಲ್ಲಲಾಗುತ್ತದೆ. ಇದರಿಂದ ಕುಪಿತಗೊಂಡ ರಜಾಕಾರರು ಗೋರಟಾ(ಬಿ) ಹಾಗೂ ಮುಚಳಂಬ ಮೇಲೆ ಸಶಸ್ತ್ರ ಹಲ್ಲೆ ನಡೆಸುತ್ತಾರೆ. ಮುಚಳಂಬದ ಶರಣಪ್ಪ ಗೌಡನ ಮನೆಗೆ ಬೆಂಕಿ ಹಚ್ಚಿದರು. ಧೂಳಪ್ಪ ಕಾಶಪ್ಪನವರ್, ಬಸಪ್ಪ ಕಾಮಶೆಟ್ಟಿ, ಮಹಾರುದ್ರಪ್ಪ ಅವರನ್ನು ಕೊಲ್ಲಲಾಯಿತು. ಗುರಮ್ಮ ಆಲಶೆಟ್ಟಿ ಎಂಬ ಗರ್ಭೀಣಿಗೆ ಚೂರಿ ಇರಿತ ಘಟನೆಯ ಬಗ್ಗೆ ಈಗಲೂ ಕೆಲ ಹಿರಿಯರು ಹೇಳುತ್ತಾರೆ.

ಇಲ್ಲಿಂದ ಸಮೀಪದಲ್ಲಿಯೇ ಇರುವ ಗೋರಟಾ(ಬಿ) ದಲ್ಲಿ ಇದಕ್ಕಿಂತ ಭೀಕರ ಹತ್ಯಾಕಾಂಡ ನಡೆಯಿತು. ಮಹಾದಪ್ಪ ಡುಮಣೆ ಎಂಬುವವರ ದೊಡ್ಡ ವಾಡೆಯಲ್ಲಿ ಆಶ್ರಯ ಪಡೆದ ಗ್ರಾಮಸ್ಥರು ರಜಾಕಾರರನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿದರಾದರೂ ಸಫಲತೆ ಕಾಣುವುದಿಲ್ಲ. ಅನೇಕರು ಹತರಾಗುತ್ತಾರೆ. ಈ ಘಟನೆಯ ಬಗ್ಗೆ ಗೊತ್ತಾಗಿ ಮರುದಿನ ಅಲ್ಲಿಗೆ ಭೇಟಿ ನೀಡಿದ್ದ ಹೈದರಾಬಾದ್ ಸಂಸ್ಥಾನದ ಭಾರತದ ರಾಜಪ್ರನಿಧಿಯಾಗಿದ್ದ ಕೆ.ಎಂ.ಮುನ್ಶಿ ಅವರು ಈ ಕರಾಳ ಘಟನೆಯ ಬಗ್ಗೆ ತಮ್ಮ `ದಿ ಎಂಡ್ ಆಫ್ ಅನ್ ಇರಾ' ಎಂಬ ಗ್ರಂಥದಲ್ಲಿ ವಿಸ್ತೃತವಾಗಿ ಬರೆದಿದ್ದಾರೆ. ರಸ್ತೆಗಳಲ್ಲೆಲ್ಲ ಹೆಣ ಸುಟ್ಟಿರುವುದು ಕಂಡು ಬಂತು. 200 ಜನರು ಹತರಾದ ಬಗ್ಗೆ ದಾಖಲೆ ದೊರೆತಿದ್ದು, ಅಂದಾಜು ₹70 ಲಕ್ಷದ ಹಾನಿ ಆಗಿತ್ತು' ಎಂದು ಅವರು ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.

ಹೀಗೆ ಇಲ್ಲಿನ ದೌರ್ಜನ್ಯಗಳು ಹೆಚ್ಚುತ್ತಲೇ ಹೋಗಿದ್ದರಿಂದ ಕೇಂದ್ರ ಸರ್ಕಾರ ಭಾರತೀಯ ಸೇನೆಯ ಮೇಜರ್ ಜನರಲ್ ಜೆ.ಎನ್.ಚೌಧರಿ ನೇತೃತ್ವದಲ್ಲಿ ಹೈದರಾಬಾದ್‌ನ ನಾಲ್ಕು ದಿಕ್ಕುಗಳಿಂದ `ಆಪರೇಷನ್ ಪೋಲೋ’ ಸೈನ್ಯ ಕಾರ್ಯಾಚರಣೆ ನಡೆಸಿತು. 1948ರಂದು ಸೈನ್ಯದ ಪ್ರಥಮ ತಂಡವು ಸೊಲ್ಲಾಪುರ, ನಳದುರ್ಗ, ಬಸವಕಲ್ಯಾಣ, ಹುಮನಾಬಾದ್ ಮಾರ್ಗವಾಗಿ ಹೈದರಾಬಾದ್ ಮೇಲೆ ನುಗ್ಗಿತು. ವಿಜಯವಾಡಾ ಹಾಗೂ ಇತರೆ ಮೂರು ದಿಕ್ಕುಗಳಿಂದಲೂ ಕಾರ್ಯಾಚರಣೆ ನಡೆಸಿದ್ದರಿಂದ ನಿಜಾಮ್ ಸೋತು ಶರಣಾದನು.

ವಿಮಾನದ ಮೂಲಕ ಹೈದರಾಬಾದ್‌ಗೆ ಬಂದಿಳಿದ ಅಂದಿನ ಕೇಂದ್ರ ಗೃಹ ಸಚಿವ ಸರ್ದಾರ ವಲ್ಲಭಭಾಯಿ ಪಟೇಲ್ ಅವರ ಸಮ್ಮುಖದಲ್ಲಿ ನಿಜಾಮ್ ಹಾಗೂ ಎರಡೂ ಕಡೆಯ ಸೇನೆಯ ಮುಖ್ಯಸ್ಥರು ವಿಲೀನದ ಪ್ರಕ್ರಿಯೆ ಪೂರ್ಣಗೊಳಿಸಿದರು. ಹೀಗಾಗಿ ಸೆಪ್ಟೆಂಬರ್ 17ರಂದು ಈ ಭಾಗ ಸ್ವಾತಂತ್ರ್ಯ ಪಡೆಯಿತು. ಇದಾದ ಮೇಲೆ ನಿಜಾಮ್ ಉಸ್ಮಾನ ಅಲಿ ಖಾನ್ ಸರ್ಕಾರದ ರಾಜಪ್ರಮುಖನಾಗಿ ನೇಮಕಗೊಂಡರು. ಆಂಧ್ರಪ್ರದೇಶದ ರಾಜ್ಯಪಾಲರಾಗಲು ಆಹ್ವಾನ ನೀಡಿದ್ದರೂ ಅವರು ತಿರಸ್ಕರಿಸಿದರು.

ಕಾಸಿಂ ರಜ್ವಿಯನ್ನು ಮಾತ್ರ 7 ವರ್ಷ ಜೈಲಿನಲ್ಲಿಡಲಾಯಿತು. ನಂತರ ಈತ ಬೇಗಮಪೇಟ್ ವಿಮಾನ ನಿಲ್ದಾಣದಿಂದ ಪಾಕಿಸ್ತಾನಕ್ಕೆ ಹೋಗಿ ಅಲ್ಲಿಯೇ ವಕೀಲಿವೃತ್ತಿ ಕೈಗೊಂಡು ಅಲ್ಲಿಯೇ ತೀರಿಕೊಂಡ ಬಗ್ಗೆ ‘ಹೈದರಾಬಾದ್ ಎ ಬಯಾಗ್ರಫಿ' ಗ್ರಂಥದಲ್ಲಿ ಪ್ರಸಿದ್ಧ ಲೇಖಕ ಮಾರ್ಟಿನ್ ಲೂಥರ್ ಕಿಂಗ್ ಉಲ್ಲೇಖಿಸಿದ್ದಾರೆ.

‘ಅಂದಿನ ಹೈದರಾಬಾದ್ ಕರ್ನಾಟಕ ಹಾಗೂ ಮಹಾರಾಷ್ಟ್ರದ ಮರಾಠವಾಡಾ ಒಳಗೊಂಡು ಕೆಲ ಪ್ರದೇಶಗಳು 1948 ಸೆಪ್ಟೆಂಬರ್ 17 ರಂದು ಭಾರತದಲ್ಲಿ ವಿಲೀನವಾದವು. ರಾಜ್ಯ ಸರ್ಕಾರ ಈಗ ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ್ದು ಈ ಸಲದಿಂದ ವಿಮೋಚನಾ ದಿನದ ಬದಲಾಗಿ `ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ದಿನೋತ್ಸವ' ಎಂದೇ ಆಚರಿಸಿದರೆ ಸರಿಯಾದೀತು' ಎಂದು ಗೋರಟಾ ಹುತಾತ್ಮ ಸ್ಮಾರಕ ಹೋರಾಟ ಸಮಿತಿ ಅಧ್ಯಕ್ಷ ಡಾ.ರಾಜಶೇಖರ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಕ್ರಿಯಿಸಿ (+)