ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಪುನರಾಯ್ಕೆಯಾದರೆ ಪ್ರಜಾಪ್ರಭುತ್ವ ನಾಶ: ಕೆ.ಎಚ್. ಮುನಿಯಪ್ಪ ಆತಂಕ

Last Updated 21 ಏಪ್ರಿಲ್ 2019, 13:40 IST
ಅಕ್ಷರ ಗಾತ್ರ

ಬೀದರ್: ‘ನರೇಂದ್ರ ಮೋದಿ ಪ್ರಧಾನಿ ಆಗಿ ಪುನರಾಯ್ಕೆಯಾದರೆ ದೇಶದಲ್ಲಿ ಪ್ರಜಾಪ್ರಭುತ್ವ ನಾಶವಾಗಲಿದೆ’ ಎಂದು ಕೇಂದ್ರ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಆತಂಕ ವ್ಯಕ್ತಪಡಿಸಿದರು.

‘ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಸಂವಿಧಾನವನ್ನು ಗೌರವಿಸುತ್ತ ಬಂದಿವೆ. ಅದಕ್ಕೆ ಅನುಗುಣವಾಗಿ ಅಧಿಕಾರ ಕೂಡ ನಡೆಸಿವೆ. ಆದರೆ, ಬಿಜೆಪಿ ಸಂವಿಧಾನವನ್ನು ವಿರೋಧಿಸುತ್ತಿದೆ’ ಎಂದು ನಗರದಲ್ಲಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಆರೋಪಿಸಿದರು.

‘ಬಿಜೆಪಿ ಸಂವಿಧಾನ ಬದಲಾವಣೆಗೆ ಚಿಂತನೆ ನಡೆಸಿದೆ. ಸಂವಿಧಾನದ ಮೇಲೆ ಆಣೆ ಮಾಡಿ ಅಧಿಕಾರ ವಹಿಸಿಕೊಂಡವರು ಈಗ ಸಂವಿಧಾನದ ವಿರುದ್ಧವೇ ಮಾತನಾಡುತ್ತಿದ್ದಾರೆ. ಇವರು ದೇಶವನ್ನು ಹೇಗೆ ಮುನ್ನಡೆಸುತ್ತಾರೆ ಎನ್ನುವುದೇ ಚಿಂತೆಯಾಗಿದೆ’ ಎಂದು ತಿಳಿಸಿದರು.

‘ಗಾಂಧೀಜಿ ತಂದುಕೊಟ್ಟ ಸ್ವಾತಂತ್ರ್ಯಕ್ಕೆ ಬಿಜೆಪಿ ತಿಲಾಂಜಲಿ ಇಟ್ಟಿದೆ. ಮೋದಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಅದನ್ನು ತಡೆಯುವುದಕ್ಕಾಗಿಯೇ ದೇಶದಲ್ಲಿ ಜಾತ್ಯತೀತ ಪಕ್ಷಗಳು ಒಂದಾಗಿವೆ’ ಎಂದು ಹೇಳಿದರು.

‘ಮೋದಿ ಅವರು ಐದು ವರ್ಷಗಳಲ್ಲಿ ದೇಶದ ಜನರಿಗೆ ಯಾವುದೇ ಹೇಳಿಕೊಳ್ಳುವಂತಹ ಕಾರ್ಯಕ್ರಮ ಕೊಟ್ಟಿಲ್ಲ. ರೈತರ ನಯಾಪೈಸೆ ಸಾಲ ಮನ್ನಾ ಮಾಡಿಲ್ಲ. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಕೊಟ್ಟಿಲ್ಲ. ಯುವಕರಿಗೆ 2 ಕೋಟಿ ಉದ್ಯೋಗ ಒದಗಿಸಿಲ್ಲ. ಸರ್ಕಾರದಲ್ಲಿ 22 ಲಕ್ಷ ಉದ್ಯೋಗಗಳು ಖಾಲಿ ಇವೆ. ಪರಿಶಿಷ್ಟರು, ಬುಡಕಟ್ಟು ಜನಾಂಗಗಳ ಮೇಲೆ ಹಲ್ಲೆ, ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚಾಗಿವೆ’ ಎಂದು ಟೀಕಿಸಿದರು.

‘ಕಾಂಗ್ರೆಸ್ ಅಧಿಕಾರಕ್ಕೆ ಬಂದ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡಲಾಗಿದೆ. ಹಿಂದಿನ ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ₹ 8,160 ಕೋಟಿ ಸಾಲ ಮನ್ನಾ ಮಾಡಿತ್ತು. ಈಗಿನ ಸಮ್ಮಿಶ್ರ ಸರ್ಕಾರ ₹ 45 ಸಾವಿರ ಕೋಟಿ ಸಾಲ ಮನ್ನಾ ಘೋಷಣೆ ಮಾಡಿದೆ. ಈಗಾಗಲೇ ₹15 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರೈತರ ಸಮಸ್ಯೆಗಳಿಗೆ ಸ್ಪಂದಿಸಲಿದೆ’ ಎಂದು ಹೇಳಿದರು.

‘ದೇಶದ ಅಭಿವೃದ್ಧಿ, ಶಾಂತಿ ಹಾಗೂ ಸೌಹಾರ್ದ ಕಾಯ್ದುಕೊಳ್ಳಲು ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅವಶ್ಯಕವಾಗಿದೆ’ ಎಂದರು.
ಕೆಪಿಸಿಸಿ ಕಾರ್ಯದರ್ಶಿ ರೋಹಿದಾಸ ಘೋಡೆ, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಸಂಜುಕುಮಾರ ಡಿ.ಕೆ., ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಕಾಂತ ಹಿಪ್ಪಳಗಾಂವ, ಶಂಕರ ದೊಡ್ಡಿ, ಶಾಮರಾವ್ ಬಂಬಳಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT